ರಾಮನಗರ: ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ. ಸೋಲಿನಿಂದ ಕಂಗೆಟ್ಟು ಜನರಿಂದ ದೂರವಾಗುವ ಜಾಯಮಾನ ನಮ್ಮದಲ್ಲ. ನನ್ನನ್ನು ಬೆಂಬಲಿಸಿದ ರಾಮನಗರ (Karnataka Election Results) ಮಹಾಜನತೆಗೆ ನನ್ನ ಧನ್ಯವಾದ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರ ಕ್ಷೇತ್ರದಲ್ಲಿ ಸೋಲಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಈ ಒಂದು ಸೋಲು ನಿಮ್ಮ ಸೇವೆ ಮಾಡಬೇಕು ಎನ್ನುವ ನನ್ನ ಅದಮ್ಯ ಸಂಕಲ್ಪಕ್ಕೆ ತಡೆ ಒಡ್ಡಲಾರದು. ನಾನೆಂದೂ ನಿಮ್ಮ ಜತೆಯಲ್ಲೇ ಇರುತ್ತೇನೆ, ನಿಮಗಾಗಿ ಜೀವಿಸುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Channapatna Election Results : ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಜಯಭೇರಿ
ಸೋಲನ್ನು ಸಮಚಿತ್ತದಿಂದ ಸ್ವಿಕರಿಸಿ ಮುನ್ನಡೆಯುತ್ತೇನೆ. ಇದು ನಾನು ನನ್ನ ತಾತ ಎಚ್.ಡಿ.ದೇವೇಗೌಡ, ತಂದೆ ಎಚ್.ಡಿ.ಕುಮಾರಸ್ವಾಮಿ ಅವರಿಂದ ಕಲಿತ ಪಾಠ. ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ. ಬಿದ್ದ ಮಗುವನ್ನು ಮೇಲೆತ್ತುವ ನಿಮ್ಮ ಪ್ರೀತಿ, ವಾತ್ಸಲ್ಯವನ್ನು ನಾನು ಬಲ್ಲೆ. ಸೋಲಿನಿಂದ ಕಂಗೆಟ್ಟು ಜನರಿಂದ ದೂರವಾಗುವ ಜಾಯಮಾನ ನಮ್ಮದಲ್ಲ. ಈ ಪರಾಜಯದಿಂದ ಪಾಠ ಕಲಿಯುತ್ತೇವೆ, ಪುನಃ ಪುಟಿದೆದ್ದು ಬರುತ್ತೇವೆ ಎಂದು ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಜೆಡಿಎಸ್ ಭದ್ರಕೋಟೆಯಲ್ಲೇ ಸೋಲು
ಜೆಡಿಎಸ್ ಭದ್ರಕೋಟೆ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಅವರು ಕ್ಷೇತ್ರ ತ್ಯಾಗ ಮಾಡಿದ್ದರಿಂದ ನಿಖಿಲ್ ಕುಮಾರಸ್ವಾಮಿ ಈ ಬಾರಿ ಸ್ಪರ್ಧಿಸಿದ್ದರು. ಆದರೆ ಅವರು, ಕಾಂಗ್ರೆಸ್ ಅಭ್ಯರ್ಥಿ ಎಚ್.ಎ.ಇಕ್ಬಾಲ್ ಹುಸೇನ್ ವಿರುದ್ಧ 10,715 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಚ್.ಎ.ಇಕ್ಬಾಲ್ ಹುಸೇನ್ 87,690 ಪಡೆದಿದ್ದರೆ, ನಿಖಿಲ್ ಕುಮಾರಸ್ವಾಮಿ 76,975 ಮತಗಳನ್ನು ಪಡೆದಿದ್ದಾರೆ.