ಮಂಡ್ಯ: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಚನ್ನಪಟ್ಟಣದಿಂದಲೇ ಸ್ಪರ್ಧೆ ಮಾಡುತ್ತಾರೆ. ಅವರು ಮಂಡ್ಯದಿಂದ ಸ್ಪರ್ಧೆ ಮಾಡುವುದಿಲ್ಲ. ಸಂಸದೆ ಸುಮಲತಾ ತಾಯಿ ಬಗ್ಗೆ ನಾನು ಮಾತನಾಡುವುದಿಲ್ಲ. ಚುನಾವಣೆ ಸಮಯದಲ್ಲಿ ಬಿಟ್ಟರೆ ನಾನು ಆ ತಾಯಿ ಬಗ್ಗೆ ಮಾತನಾಡಿಲ್ಲ. ಈಗಲೂ ಮಾತನಾಡುವುದಿಲ್ಲ ಎಂದು ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.
ಅವರು ಮಂಡ್ಯದಲ್ಲಿ ಜೆಡಿಎಸ್ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ, ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಊಹಾಪೋಹ ವಿಚಾರಕ್ಕೆ ತೆರೆ ಎಳೆದರು. ಇನ್ನು ತಾವೂ ಸಹ ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದರು. ಅಲ್ಲದೆ, ಸಂಸದೆ ಸುಮಲತಾ ಅವರ ಬಗ್ಗೆ ಚುನಾವಣೆ ಹೊತ್ತಿನಲ್ಲಿ ಮಾತ್ರ ಟೀಕಿಸಿದ್ದೆನೇ ಹೊರತು ಬೇರೆ ಸಮಯದಲ್ಲಿ ಮಾತನಾಡಿಲ್ಲ. ಈಗಲೂ ಅವರ ಬಗ್ಗೆ ಮಾತನಾಡುವುದಿಲ್ಲ ಎಂದು ನಿಖಿಲ್ ಸ್ಪಷ್ಟಪಡಿಸಿದರು.
ರಾಮನಗರದಲ್ಲಿ ನಮ್ಮ ಕುಟುಂಬದವರಿಗೆ 30 ವರ್ಷಗಳಿಂದಲೂ ಒಡನಾಟ ಇದೆ. ಅಲ್ಲಿನ ಅಭಿವೃದ್ಧಿ ಕಂಡು ಜನರೇ ನನ್ನನ್ನು ಸ್ಪರ್ಧೆ ಮಾಡಬೇಕು ಎಂದು ಬಯಸಿದರು. ಜನರ ಒತ್ತಾಸೆಯಂತೆ ನಮ್ಮ ವರಿಷ್ಠರು ನನ್ನನ್ನು ರಾಮನಗರಕ್ಕೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Assembly Session: ಕೊನೆಗೂ ಅಧಿವೇಶನದಲ್ಲಿ ಭಾಗವಹಿಸಲು ಒಪ್ಪಿದ ಎಚ್.ಡಿ. ಕುಮಾರಸ್ವಾಮಿ
ಪಕ್ಷ ಬಯಸಿದಂತೆ ನಾನು ಕೆಲಸ ಮಾಡುತ್ತೇನೆ. 2023 ಆದ ಮೇಲೆಯೇ ೨೦24 ಬರೋದು. ರಾಮನಗರದಲ್ಲಿ ಸ್ಪರ್ಧೆ ಮಾಡಿದ ಮೇಲೆ ನಾನು ಲೋಕಸಭೆಗೆ ಬರಲಾಗಲ್ಲ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಸೋಲಿನಿಂದ ನಾನು ಮನೆಯಲ್ಲಿ ಕುಳಿತುಕೊಂಡಿಲ್ಲ ಎಂದು ಹೇಳಿದರು. ಅಲ್ಲದೆ, ರಮ್ಯಾ ಚನ್ನಪಟ್ಟಣದಲ್ಲಿ ಚುನಾವಣೆಗೆ ನಿಲ್ಲುತ್ತಾರೆ ಎಂಬ ವಿಚಾರವು ಇದೆಲ್ಲ ಮಾಧ್ಯಮದವರ ಸೃಷ್ಟಿಯಾಗಿದೆ ಎಂದು ನಿಖಿಲ್ ಹೇಳಿದರು.
ರಮ್ಯಾ ಅವರಿಗೂ ನನಗೂ ಒಳ್ಳೆಯ ಬಾಂಡಿಂಗ್ ಇದೆ. ಅವರು ಸಿಕ್ಕಾಗ ನಾವು ಸಿನಿಮಾ ಬಗ್ಗೆ ಮಾತನಾಡುತ್ತೇವೆಯೇ ಹೊರತು ರಾಜಕೀಯ ಮಾತನಾಡಲ್ಲ. ಅವರು ಚನ್ನಪಟ್ಟಣದಿಂದ ಸ್ಪರ್ಧೆ ಮಾಡುತ್ತಾರೆ ಎಂಬುದು ಮಾಧ್ಯಮದ ಸೃಷ್ಟಿ ಎಂದು ನಿಖಿಲ್ ತಿಳಿಸಿದರು.
ನಾವು ಯಾವುದೇ ಕೆಲಸ ಮಾಡಿದರೂ ವಾಸ್ತು ಪ್ರಕಾರವೇ ಮಾಡೋದು. ಹಾಗಾಗಿ ಈ ಕಚೇರಿ ನಮಗೆ ಸರಿಯಾದ ವಾಸ್ತು ಪ್ರಕಾರವೇ ಇದೆ ಎಂದು ಜಿಲ್ಲಾ ಜೆಡಿಎಸ್ ನೂತನ ಕಚೇರಿ ಬಗ್ಗೆ ಮಾತನಾಡಿದ ನಿಖಿಲ್, ಇದು ತಾತ್ಕಾಲಿಕ ವ್ಯವಸ್ಥೆ ಅಷ್ಟೇ. ಮುಂದಿನ ದಿನಗಳಲ್ಲಿ ನಾವೇ ಸ್ವಂತ ಭೂಮಿ ಕೊಂಡು ಸ್ವಂತ ಕಚೇರಿಯನ್ನು ಕಟ್ಟುವವರೆಗೆ ಇದೇ ನಮ್ಮ ಕಚೇರಿಯಾಗಿರಲಿದೆ. ಈ ಕಚೇರಿ ಚುನಾವಣೆಗಾಗಿ ಮಾತ್ರ ನಾವು ತೆರೆಯುತ್ತಿಲ್ಲ ಎಂದು ತಿಳಿಸಿದರು.
ಕುದುರೆ ಕೊಟ್ಟು ನಾಲ್ಕೂ ಕಾಲನ್ನು ಹಿಡಿದಿಟ್ಟುಕೊಂಡ ಕಾಂಗ್ರೆಸ್
ಕೆ.ಆರ್. ಪೇಟೆಯಲ್ಲಿ ನಾರಾಯಣಗೌಡ ಅವರು ಅಭಿವೃದ್ಧಿ ಮಾಡುವುದಾಗಿ ಪಕ್ಷ ತೊರೆದು ಹೋದರು. ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ. ಸಿ.ಪಿ. ಯೋಗೇಶ್ವರ್ ಹೇಳಿಕೆಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ. ಅವರು ಹತಾಶಗೊಂಡಿದ್ದಾರೆ. ಕಾಂಗ್ರೆಸ್ ನಮಗೆ ಅಧಿಕಾರ ಎಂಬ ಕುದುರೆ ಕೊಟ್ಟರು. ಆದರೆ, ಕುದುರೆಯ ನಾಲ್ಕೂ ಕಾಲುಗಳನ್ನು ಹಿಡಿದು ಅಧಿಕಾರ ಕೊಟ್ಟರೆ ಹೇಗೆ ಆಡಳಿತ ನಡೆಸಲಾಗುತ್ತದೆ ಎಂದು ಅವರು ಪ್ರಶ್ನೆ ಮಾಡಿದರು.