ಬೆಂಗಳೂರು: ರಾಜ್ಯದ ಶಾಸಕರಿಂದ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಗಳಿಸಿದ ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಹಾಗೂ ಕಾಂಗ್ರೆಸ್‌ನ ಜೈರಾಮ್ ರಮೇಶ್ ನಿರೀಕ್ಷೆಯಂತೆಯೇ ರಾಜ್ಯಸಭೆ ಚುನಾವಣೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಚಲಾವಣೆಯಾದ ಮತಗಳ ಆಧಾರದಲ್ಲಿ ನೋಡಿದರೆ, ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಮೀಸಲು ಮಾಡಲಾಗಿದ್ದ 46 ಮತಗಳನ್ನು ಕ್ರಮವಾಗಿ ಜೈರಾಮ್ ರಮೇಶ್ ಹಾಗೂ ನಿರ್ಮಲಾ ಸೀತಾರಮನ್ ಪಡೆದರು. ಜಗ್ಗೇಶ್ 44 ಮತ ಪಡೆದು ಜಯಗಳಿಸಿದರು. ಶಾಸಕರು ಮತ ಚಲಾಯಿಸಿದ ನಂತರ ಆಯಾ ಪಕ್ಷದ ಏಜೆಂಟರಿಗೆ ಅದನ್ನು ತೋರಿಸಬೇಕು. ವಿಪ್ ಉಲ್ಲಂಘನೆ ಆಗದಿರುವ ಕುರಿತು ಖಾತ್ರಿಗಾಗಿ ಈ ವ್ಯವಸ್ಥೆ ಇದ್ದು, ಬಿಜೆಪಿ ಏಜೆಂಟರಾಗಿ ಸಿ.ಟಿ. ರವಿ, ಕಾಂಗ್ರೆಸ್ ಏಜೆಂಟರಾಗಿ ಡಿ.ಕೆ. ಶಿವಕುಮಾರ್ ಹಾಗೂ ಜೆಡಿಎಸ್ ಏಜೆಂಟರಾಗಿ ಹೆಚ್.ಡಿ.ರೇವಣ್ಣ ನೇಮಕವಾಗಿದ್ದರು. ಮೂವರೂ ಮತಗಳನ್ನು ನೋಡಿರುವ ಹಿನ್ನೆಲೆಯಲ್ಲೆ ಫಲಿತಾಂಶ ನಿರೀಕ್ಷಿತವಾಗಿತ್ತಾದರೂ ರಾತ್ರಿ 8 ಗಂಟೆ ವೇಳೆಗೆ ಅಧಿಕೃತ ಘೋಷಣೆ ಹೊರಬಿತ್ತು. ನಾಲ್ಕನೇ ಸ್ಥಾನಕ್ಕೆ ಬಿಜೆಪಿಯ ಲೆಹರ್ ಸಿಂಗ್ ಸಿರೋಯಾ 33 ಪ್ರಥಮ ಪ್ರಾಶಸ್ತ್ಯದ ಮತದ ಜತೆಗೆ ಎರಡನೇ ಪ್ರಾಶಸ್ತ್ಯದ ಮತಗಳನ್ನು ಪಡೆದು ಜಯದ ನಗೆ ಬೀರಿದರು.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ಬಿಜೆಪಿ ಅಭ್ಯರ್ಥಿ ಗೆದ್ದಾಯಿತು ಎಂದು HDK ಘೋಷಣೆ ಮಾಡಿದ್ದು ಏಕೆ?
ವಿಶ್ವ ಬ್ಯಾಂಕ್‌ನಿಂದ ಬಂದ ಜೈರಾಮ್
ವಿಶ್ವಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೈರಾಮ್ ರಮೇಶ್ ಎಂಭತ್ತರ ದಶಕದಲ್ಲಿ ಯೋಜನಾ ಆಯೋಗದಲ್ಲಿ ಕೆಲಸ ಮಾಡಿದರು. ನಂತರ ವಿ.ಪಿ. ಸಿಂಗ್ ಅವರೊಗೆ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತ ರಾಜಕೀಯ ಕ್ಷೇತ್ರದತ್ತ ಹೊರಳಿದರು. ನರಸಿಂಹರಾವ್ ಪ್ರಧಾನಿಯಾಗಿದ್ದಾಗ ವಿತ್ತ ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರ ಕಚೇರಿಯಲ್ಲಿ ಕೆಲಸ ಮಾಡಿದರು. 2000-2002ರ ಅವಧಿಯಲ್ಲಿ ಕರ್ನಾಟಕ ಯೋಜನಾ ಮಂಡಳಿ, ಆಂಧ್ರಪ್ರದೇಶ ಆರ್ಥಿಕ ಸಲಹಾ ಪರಿಷತ್‌ನಲ್ಲಿ ಸೇವೆ ಸಲ್ಲಿಸಿ 2004ರಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಆದರು.
2004ರಲ್ಲಿ ಆಂಧ್ರಪ್ರದೇಶದ ಅದಿಲಾಬಾದ್‌ನಿಂದ ರಾಜ್ಯಸಭೆಗೆ ಆಯ್ಕೆಯಾದ ಜೈರಾಮ್ ರಮೇಶ್ 2009ರಲ್ಲಿ ಇಂಧನ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯಸಚಿವರಾಗಿ ಮೊದಲ ಬಾರಿಗೆ ಸಚಿವ ಸ್ಥಾನ ಅಲಂಕರಿಸಿದರು. ಎರಡನೇ ಬಾರಿಗೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಪರಿಸರ ಖಾತೆ ರಾಜ್ಯಸಚಿವರಾಗಿ ಹೊಣೆ ಹೊತ್ತರು. 2011ರಲ್ಲಿ ಕ್ಯಾಬಿನೆಟ್ ದರ್ಜೆಗೆ ಬಡ್ತಿ ಪಡೆದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದರು. ಕಳೆದ ಎರಡು ಅವಧಿಯಿಂದ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತ ಬಂದಿದ್ದಾರೆ.
ಜೈರಾಮ್ ರಮೇಶ್ ₹24.73 ಲಕ್ಷ ಒಟ್ಟು ಆದಾಯ ಹೊಂದಿದ್ದು, ₹2.84 ಕೋಟಿ ಸ್ಥಿರಾಸ್ತಿ ಹಾಗೂ ₹1.72 ಕೋಟಿ ಚರಾಸ್ತಿ ಸೇರಿ ₹4.56 ಕೋಟಿ ಆಸ್ತಿ ಹೊಂದಿದ್ದಾರೆ. ₹35.47 ಕೋಟಿ ಸಾಲ ಹೊಂದಿರುವುದಾಗಿ ರಾಜ್ಯಸಭೆ ಚುನಾವಣೆ ವೇಳೆ ಘೋಷಿಸಿಕೊಂಡಿದ್ದಾರೆ.
ಇದನ್ನೂ ಓದಿ | ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಇಂದು 16 ಸ್ಥಾನಗಳಿಗೆ ರಾಜ್ಯಸಭೆ ಚುನಾವಣೆ, ಲೆಕ್ಕಾಚಾರ, ಮೈತ್ರಿಗೆ ಫೋಕಸ್
ಖಡಕ್ ಮಹಿಳೆ ನಿರ್ಮಲಾ
ನಿರ್ಮಲಾ ಸೀತಾರಾಮನ್, ನೆರೆಯ ತಮಿಳುನಾಡಿನ ಮೂಲದವರು. ಆಂಧ್ರ ಮೂಲದ ವಕೀಲರನ್ನು ಮದುವೆಯಾಗಿದ್ದಾರೆ, ಇದೀಗ ಎರಡನೇ ಅವಧಿಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ಲಂಡನ್ ನಲ್ಲಿ ಪ್ರೈಸ್ ವಾಟರ್ ಹೌಸ್ ಕೂಪರ್ ಸಂಸ್ಥೆಯಲ್ಲಿ ಆರ್ಥಿಕ ವ್ಯವಹಾರಗಳ ಅಧಿಕಾರಿಯಾಗಿ ಬಹುಕಾಲ ಕೆಲಸ ಮಾಡಿದರು. 2003-05ರ ಅವಧಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿದ್ದರು. 2008ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದರು. ತಮ್ಮ ವಾಕ್ಚಾತುರ್ಯದಿಂದ ಅಲ್ಪಕಾಲದಲ್ಲಿಯೇ ಪಕ್ಷದ ವಕ್ತಾರೆಯಾಗಿ ನೇಮಕಗೊಂಡರು. ಸುಷ್ಮಾ ಸ್ವರಾಜ್ ನಂತರ ಈ ಉನ್ನತ ಹುದ್ದೆ ಪಡೆದ ಮಹಿಳೆ ಎಂಬುದು ನಿರ್ಮಲಾ ಅವರ ಹೆಗ್ಗಳಿಕೆ. ಪಕ್ಷದ ವಕ್ತಾರೆಯಾಗಿ ಗುಜರಾತ್‍ನಲ್ಲಿ ಸಾಕಷ್ಟು ಜನಪ್ರಿಯರಾದರು. ನಿರ್ಮಲಾ ಸೀತಾರಾಮನ್ ನರೇಂದ್ರ ಮೋದಿಯವರ ಮಂತ್ರಿಮಂಡಲವನ್ನು ಮೇ 2014ರಲ್ಲಿ ಸೇರಿದರು. ವಾಣಿಜ್ಯ ಖಾತೆಯ ನಿರ್ವಹಣೆಯಲ್ಲಿ, ದಕ್ಷತೆ ತೋರಿ, ಹೆಸರು ಗಳಿಸಿ ಬಡ್ತಿಯೆಂಬಂತೆ ರಕ್ಷಣಾ ಖಾತೆಯನ್ನು ಪಡೆದರು. ಸದ್ಯ ವಿತ್ತ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದರು. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಆಂಧ್ರಪ್ರದೇಶದಿಂದ ರಾಜ್ಯಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2016ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಅಯ್ಕೆಯಾದರು, ಇದೀಗ ಎರಡನೇ ಬಾರಿಗೆ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.
ನಿರ್ಮಲಾ ಸೀತಾರಾಮನ್ ₹8.08 ಲಕ್ಷ ಒಟ್ಟು ಆದಾಯ ಹೊಂದಿದ್ದು, ₹1.87 ಕೋಟಿಸ್ಥಿರಾಸ್ತಿ ಹಾಗೂ ₹63.39 ಲಕ್ಷ ಚರಾಸ್ತಿ ಸೇರಿ ₹2.50 ಕೋಟಿ ಆಸ್ತಿ ಹೊಂದಿದ್ದಾರೆ. ₹30.44 ಲಕ್ಷ ಸಾಲ ಹೊಂದಿರುವುದಾಗಿ ರಾಜ್ಯಸಭೆ ಚುನಾವಣೆ ವೇಳೆ ಘೋಷಿಸಿಕೊಂಡಿದ್ದಾರೆ.
ನವರಸ ನಟನ ಏರಿಳಿತದ ಹಾದಿ
ಕನ್ನಡ ಚಲನಚಿತ್ರ ಜಗತ್ತಿನಲ್ಲಿ ನವರಸ ನಾಯಕ ಎಂದರೆ ಕೂಡಲೆ ಜಗ್ಗೇಶ್ ನೆನಪಾಗುತ್ತಾರೆ. ನಾಯಕನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ತೊಡಗಿಸಿಕೊಂಡಿರುವ ಜಗ್ಗೇಶ್, ಚಿತ್ರರಂಗ ಮಾತ್ರವಲ್ಲದೇ ರಾಜಕಾರಣದಲ್ಲೂ ಸಕ್ರಿಯವಾಗಿರುವವರು.
1963ರಲ್ಲಿ ಬೆಂಗಳೂರಿನ ಶ್ರೀರಾಮಪುರದಲ್ಲಿ ಜನಿಸಿದ ಜಗ್ಗೇಶ್ ಕುಟುಂಬ ಮೂಲತಃ ತುಮಕೂರು ಜಿಲ್ಲೆಯ ಮಾಯಸಂದ್ರದವರು. ಸಹೋದರ ಕೋಮಲ್ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯ ನಟ. 1982ರಲ್ಲಿ ಚಿತ್ರರಂಗಕ್ಕೆ ಬಂದು ಕೆಲ ಚಿತ್ರಗಳಲ್ಲಿ ಖಳನಾಯಕ ಮತ್ತು ಪೋಷಕ ನಟನಾಗಿ ನಟಿಸಿದರು. ಇವುಗಳಲ್ಲಿ`ರಣಧೀರ’,`ಸಾಂಗ್ಲಿಯಾನ’,`ರಣರಂಗ’, ಯುದ್ಧಕಾಂಡ’, `ಪರಶುರಾಮ್’,`ರಾಣಿ ಮಹಾರಾಣಿ’, ಸೋಲಿಲ್ಲದ ಸರದಾರ’ ಚಿತ್ರಗಳು ಪ್ರಮುಖವಾದವು. 1992ರಲ್ಲಿ `ಭಂಡ ನನ್ನ ಗಂಡ’ ಚಿತ್ರದ ಮೂಲಕ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ಅದೇ ವರ್ಷದಲ್ಲಿ ತೆರೆಕಂಡ `ತರ್ಲೆ ನನ್ಮಗ’ ಚಿತ್ರ ಇವರಿಗೆ ನಾಯಕನಾಗಿ ಸಕ್ಸೆಸ್ ನೀಡಿತು.
ಜಗ್ಗೇಶ್ ಅವರು ತುರುವೇಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾದರು. ಜಗದೀಶ್ ಶೆಟ್ಟರ್ ಅವರು ವಿಧಾನಸಭೆ ಸ್ಪೀಕರ್ ಆಗಿದ್ದ ಸಮಯದಲ್ಲಿ ಶಾಸಕ ಸ್ಥಾನ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷರಾಗಿ, ಕ್ಯಾಬಿನೆಟ್ ದರ್ಜೆ ಹುದ್ದೆ ನಿಭಾಯಿಸಿದರು. 2010ರಲ್ಲಿ ವಿಧಾನಸಭೆಗೆ ಬಿಜೆಪಿಯಿಂದ ನಾಮನಿರ್ದೇಶನ ಮಾಡಲಾಯಿತು.
ಜಗ್ಗೇಶ್ ₹45.18 ಲಕ್ಷ ಒಟ್ಟು ಆದಾಯ ಹೊಂದಿದ್ದು, ₹13.25 ಕೋಟಿ ಸ್ಥಿರಾಸ್ತಿ ಹಾಗೂ ₹4.39 ಕೋಟಿ ಚರಾಸ್ತಿ ಸೇರಿ ₹17.64 ಕೋಟಿ ಆಸ್ತಿ ಹೊಂದಿದ್ದಾರೆ. ₹2.91 ಕೋಟಿ ಸಾಲ ಹೊಂದಿರುವುದಾಗಿ ರಾಜ್ಯಸಭೆ ಚುನಾವಣೆ ವೇಳೆ ಘೋಷಿಸಿಕೊಂಡಿದ್ದಾರೆ.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ ಹೊಸ ಟ್ವಿಸ್ಟ್: JDS ಶಾಸಕರಿಗೆ ʼಕೈʼ ಶಾಸಕಾಂಗ ನಾಯಕ ಸಿದ್ದು ಪತ್ರ!