Site icon Vistara News

ದೇಶದಲ್ಲಿ 5ಜಿ ಸೇವೆ ಶೀಘ್ರವೇ ಕಾರ್ಯಾರಂಭ: ನಿರ್ಮಲಾ ಸೀತಾರಾಮನ್

5ಜಿ ಸೇವೆ

ಬೆಂಗಳೂರು: ದೇಶದಲ್ಲಿ 5ಜಿ ಅಂತರ್ಜಾಲ ಸೇವೆ ಶೀಘ್ರವೇ ಕಾರ್ಯಾರಂಭ ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಬಿಜೆಪಿ ರಾಜ್ಯ ಆರ್ಥಿಕ ಪ್ರಕೋಷ್ಠದ ವತಿಯಿಂದ ನಗರದ ಜೆಡಬ್ಲ್ಯು ಮ್ಯಾರಿಯೆಟ್ ಹೋಟೆಲ್‍ನಲ್ಲಿ ಶನಿವಾರ ಹಮ್ಮಿಕೊಂಡಿದ್ದ “ವಿಶ್ವಗುರು ಭಾರತ” 100ನೇ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಕ್ಷದ ತತ್ವ, ಸಿದ್ಧಾಂತಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಇದು ಉತ್ತಮ ಕಾರ್ಯ. ಕರ್ನಾಟಕ ಬಿಜೆಪಿ ಆರ್ಥಿಕ ಪ್ರಕೋಷ್ಠದ ಈ ಪ್ರಯತ್ನ ಶ್ಲಾಘನಾರ್ಹ ಎಂದರು. 100ನೇ ಸಂಚಿಕೆ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದರು.

2014ರಿಂದ 2022ರವರೆಗೆ ಅವಧಿಯಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿದ ಅವರು, ಹಿಂದಿನ ಆಡಳಿತಗಳು 20 ಅಂಶಗಳ ಕಾರ್ಯಕ್ರಮ, ಗರೀಬಿ ಹಠಾವೋ ಮಾತುಗಳನ್ನಷ್ಟೇ ಆಡಿದವು. ಆದರೆ, ಅರ್ಹ ಫಲಾನುಭವಿಗಳ ವಿಚಾರದಲ್ಲಿ ನಿಗದಿತ ಗುರಿ ತಲುಪಲು ವಿಫಲವಾದವು. ಕುಡಿಯುವ ನೀರು, ಬಡವರಿಗೆ ಮನೆ ನೀಡುವ ವಿಚಾರ ಸೇರಿ ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳನ್ನು ತಲುಪಿಸಿದ ಸಂತಸ ನಮ್ಮ ಸರಕಾರದ್ದು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಾವು ಅರ್ಹ ಫಲಾನುಭವಿಗಳನ್ನು ತಲುಪಿದ್ದೇವೆ. ಪ್ರತಿ ನಾಗರಿಕರಿಗೆ ಮೂಲಸೌಕರ್ಯ ಕೊಡಲು ಸಾಧ್ಯವಾಗಿದೆ ಎಂದು ವಿಶ್ಲೇಷಿಸಿದರು.

ಇದನ್ನೂ ಓದಿ | ವಿಸ್ತಾರ Interview | ತ್ರಿವರ್ಣ ಧ್ವಜದ ಮೇಲೆ ಕಾಂಗ್ರೆಸ್‌ಗೆ ಹೆಚ್ಚು ಅಧಿಕಾರವಿದೆ: ಡಿ.ಕೆ. ಶಿವಕುಮಾರ್‌

ಪ್ರತಿ ನಾಗರಿಕರು ಕನಿಷ್ಠ ಮೂಲಸೌಕರ್ಯಕ್ಕೆ ಅರ್ಹರಿದ್ದು ಅದನ್ನು ಕೊಡಲಾಗುತ್ತಿದೆ. ಬಳಿಕ ಅವರ ಸಶಕ್ತೀಕರಣದತ್ತ ಕೇಂದ್ರದ ಬಿಜೆಪಿ ಸರಕಾರ ಶ್ರಮಿಸುತ್ತಿದೆ. ತಂತ್ರಜ್ಞಾನ ಆಧರಿತ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಇದಕ್ಕೆ ಒಂದು ದೇಶ- ಒಂದೇ ಪಡಿತರ ಚೀಟಿ ಯೋಜನೆ ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.

ಪಿಎಂ ಜನಧನ್ ಯೋಜನೆ ಮೂಲಕ ಎಲ್ಲರೂ ಬ್ಯಾಂಕ್ ಖಾತೆ ತೆರೆಯುವಂತೆ ಮಾಡಲಾಯಿತು. ಆರ್ಥಿಕ ಒಳಗೊಳ್ಳುವಿಕೆಗೆ ಇದು ಪೂರಕವೆನಿಸಿತು. ಇದರಿಂದ ಅರ್ಹರಿಗೆ ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಸಾಧ್ಯವಾಯಿತು. ಆಧಾರ್ ಜೋಡಿಸಲು ಸಾಧ್ಯವಾಯಿತು. ಪಿಎಂ ಮುದ್ರಾ ಜಾರಿಗೊಳಿಸಲಾಯಿತು. ಮಹಿಳಾ ಸಶಕ್ತೀಕರಣವೂ ಇದರಿಂದ ಸಾಧ್ಯವಾಗಿದೆ ಎಂದರು. ‘ಮೋದಿ @ 20’ ಪುಸ್ತಕವನ್ನೂ ಅವರು ಭಾಷಣದಲ್ಲಿ ಪ್ರಸ್ತಾಪಿಸಿದರು.

ಪಿಎಂ ಸ್ವನಿಧಿ ಮೂಲಕ ಬೀದಿಬದಿ ವ್ಯಾಪಾರಿಗಳು ಬಡ್ಡಿರಹಿತ ಹಣ ಪಡೆದು ವ್ಯವಹಾರ ಮಾಡಲು ಸಾಧ್ಯವಾಗಿದೆ. ಸ್ಟಾರ್ಟಪ್ ಮೂಲಕ ಬೆಂಗಳೂರು ಮಹತ್ವದ ಸಾಧನೆ ಮಾಡಿದೆ. ದೇಶದೆಲ್ಲೆಡೆ ಉದ್ಯಮಶೀಲತೆಗೆ ಇದು ನೆರವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

ಪಿಎಂ ಆವಾಸ್ ಯೋಜನೆ ಅತ್ಯಂತ ಜನಪ್ರಿಯವಾದುದು. ಆದರೆ, ಕೆಲ ರಾಜ್ಯಗಳಲ್ಲಿ ಇದನ್ನು ಬೇರೆ ಹೆಸರಿನೊಂದಿಗೆ ಜಾರಿಗೊಳಿಸಲಾಗುತ್ತಿದೆ ಎಂದ ಅವರು, ಸ್ವಚ್ಛತಾ ಯೋಜನೆ, ಎಂಎಸ್‍ಎಂಇಗಳಿಗೆ ಹಣಕಾಸು ನೆರವು ನೀಡಲಾಗಿದೆ. ಹಾಗೆಂದು ಮೂಲ ಅವಶ್ಯಕತೆಗಳೆನಿಸಿದ ರಸ್ತೆ, ವಿಮಾನ ನಿಲ್ದಾಣಗಳನ್ನು ನಮ್ಮ ಸರಕಾರ ಮರೆತಿಲ್ಲ. ಉಡಾಣ್ ಯೋಜನೆ ಜಾರಿಯಿಂದ 65 ಲಕ್ಷ ಜನರಿಗೆ ಪ್ರಯೋಜನವಾಗಿದೆ. ಜನರನ್ನು ಸಶಕ್ತೀಕರಣಗೊಳಿಸಬೇಕು ಎಂಬ ಚಿಂತನೆಯೊಂದಿಗೆ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲೂ ಕಡಿಮೆ ಅಭಿವೃದ್ಧಿ ಹೊಂದಿದ ಜಿಲ್ಲೆಗಳ ಪ್ರಗತಿಗೆ ಆದ್ಯತೆ ಕೊಡಲಾಗಿದೆ ಎಂದು ವಿವರಿಸಿದರು.

ರಾಜಕೀಯ ಲಾಭ ದೂರವಿಟ್ಟು ಅಭಿವೃದ್ಧಿಗೆ ನೇರ ಅನುದಾನ ಕೊಡಲಾಗಿದೆ. ದೇಶದ ಪ್ರತಿ ಪಂಚಾಯಿತಿ ಮಟ್ಟಕ್ಕೆ ಆಪ್ಟಿಕಲ್ ಫೈಬರ್ ಸಂಪರ್ಕ ತಲುಪಿದ್ದು, ಇದು ಶಿಕ್ಷಣ, ಆರೋಗ್ಯ ಸುಧಾರಣೆಗೆ ನೆರವಾಗುತ್ತಿದೆ. ದೇಶದಲ್ಲಿ 5ಜಿ ಸೇವೆ ಶೀಘ್ರವೇ ಕಾರ್ಯಾರಂಭ ಮಾಡಲಿದೆ. ಹರಾಜು ಈಗಾಗಲೇ ಮುಗಿದಿದೆ ಎಂದರಲ್ಲದೆ, ಅಮೃತ ಕಾಲದತ್ತ ನಾವು ಮುನ್ನಡೆಯುತ್ತಿದ್ದೇವೆ ಎಂದು ವಿವರಿಸಿದರು ನಿರ್ಮಲಾ ಸೀತಾರಾಮನ್‌.

ಸಾರ್ವಜನಿಕ ರಂಗದ ಬ್ಯಾಂಕ್‍ಗಳು ಇದೀಗ ಅತ್ಯುತ್ತಮ ಸ್ಥಿತಿಗೆ ತಲುಪಿದ್ದು, ಲಾಭ ಮಾಡುತ್ತಿವೆ. ಬ್ಯಾಂಕ್ ಹಣ ಲೂಟಿ ಮಾಡಿದವರ ಆಸ್ತಿಯನ್ನು ಹರಾಜು ಹಾಕಿ ಹಣ ಪಡೆದು ಬ್ಯಾಂಕ್‍ಗಳಿಗೆ ಕೊಡಲಾಗುತ್ತಿದೆ. ಲೂಟಿ ಮಾಡಿದವರನ್ನು ಹಾಗೇ ಬಿಡುವ ಪ್ರವೃತ್ತಿಗೆ ವಿದಾಯ ಹೇಳಲಾಗಿದೆ ಎಂದು ಹಣಕಾಸು ಸಚಿವೆ ತಿಳಿಸಿದರು.

ವಿದ್ಯುತ್ ವಾಹನಗಳನ್ನು ಮಾರುಕಟ್ಟೆಗೆ ತರಲಾಗಿದೆ. ಪೆಟ್ರೋಲ್ ಅವಲಂಬನೆ ಕಡಿಮೆ ಮಾಡುವತ್ತ ಇದೊಂದು ಮಹತ್ವದ ಕ್ರಮವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ್ ಯೋಜನೆ ಯಶಸ್ಸು ಪಡೆದಿದೆ. ‘ಅಂತ್ಯೋದಯ’ ಚಿಂತನೆಗೆ ವಾಜಪೇಯಿ ಮತ್ತು ನರೇಂದ್ರ ಮೋದಿ ಅವರ ಅವಧಿಯಲ್ಲಿ ಆದ್ಯತೆ ಕೊಡಲಾಗಿದೆ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಕರ್ನಾಟಕ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿಗಳ ವಿಶ್ರಾಂತ ಹಣಕಾಸು ಸಲಹೆಗಾರ ಪ್ರೊ. ಕೆ.ವಿ. ರಾಜು, ಬಿಜೆಪಿ ರಾಷ್ಟ್ರೀಯ ವಕ್ತಾರ ಗೋಪಾಲಕೃಷ್ಣ ಅಗರ್ವಾಲ್, ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಸಮೀರ್ ಕಾಗಲ್ಕರ್ ಮತ್ತು ಸಹ ಸಂಚಾಲಕ ಕ್ಯಾಪ್ಟನ್ ಕರಣ್ ಜವಾಜಿ ಇದ್ದರು.

ಇದನ್ನೂ ಓದಿ | ವಿದೇಶಾಂಗ ಸಚಿವರ ಸಮ್ಮುಖದಲ್ಲಿ ಬಿಜೆಪಿ ಸೇರಿದ ಜೆಡಿಎಸ್‌ ಮಾಜಿ ಎಂಎಲ್‌ಸಿ

Exit mobile version