Site icon Vistara News

Niti Aayog | ನಾವೀನ್ಯತಾ ಸೂಚ್ಯಂಕ ಬಿಡುಗಡೆ: ಮೂರನೇ ವರ್ಷವೂ ಕರ್ನಾಟಕ ನಂ.1

CN Ashwathanarayana

ನವ ದೆಹಲಿ/ಬೆಂಗಳೂರು: ಕೇಂದ್ರ ಸರ್ಕಾರದ ನೀತಿ ಆಯೋಗವು (Niti Aayog) ಗುರುವಾರ ನಾವೀನ್ಯತಾ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು, ಕರ್ನಾಟಕವು ಸತತ ಮೂರನೇ ವರ್ಷವೂ ಪ್ರಥಮ ಸ್ಥಾನಗಳಿಸಿದೆ. ಈ ಪಟ್ಟಿಯಲ್ಲಿ ತೆಲಂಗಾಣ ಮತ್ತು ಹರಿಯಾಣ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿವೆ.

ರಾಜ್ಯದ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿರುವ ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ರಾಜ್ಯದ ಪಾಲಿಗೆ ಇದು ಚಾರಿತ್ರಿಕ ಕ್ಷಣವಾಗಿದೆ. ಜಾಗತಿಕ ಮಾನದಂಡಗಳ ಪ್ರಕಾರವೂ ಕರ್ನಾಟಕವೇ ಅಗ್ರಗಣ್ಯ ನಾವೀನ್ಯತಾ ತಾಣವಾಗಿದೆ ಎನ್ನುವುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಈ ವರದಿಯನ್ನು ನೋಡಿ, ಮತ್ತಷ್ಟು ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಹಭಾಗಿತ್ವ ಮತ್ತು ನಾವೀನ್ಯತೆಯೇ ನಮ್ಮ ಮುಂದಿನ ಹಾದಿಯಾಗಿದೆ ಎಂದಿದ್ದಾರೆ.

ಕೋವಿಡ್ ನಂತರದ ಕಾಲಘಟ್ಟದಲ್ಲಿ ಸಿದ್ಧಪಡಿಸಿರುವ ಈ ಸೂಚ್ಯಂಕವನ್ನು ಹಿಂದಿದ್ದ 32 ಸೂಚ್ಯಂಕಗಳ ಬದಲು ಹೊಸದಾಗಿ ಅಳವಡಿಸಿ ಕೊಂಡಿರುವ 66 ಮಾನದಂಡಗಳನ್ವಯ ಸಿದ್ಧಪಡಿಸಲಾಗಿದೆ. ಇದು ಜಾಗತಿಕ ನಾವೀನ್ಯತಾ ಸೂಚ್ಯಂಕಕ್ಕೆ ಅನುಗುಣವಾಗಿದೆ ಎಂದು ನೀತಿ ಆಯೋಗವು ತಿಳಿಸಿದೆ. ರಾಜ್ಯಗಳು ನಾವೀನ್ಯತೆಗೆ ಉತ್ತೇಜನ ಮತ್ತು ಅದಕ್ಕೆ ತಕ್ಕ ಕಾರ್ಯ ಪರಿಸರ ನಿರ್ಮಿಸಲು ನೀಡಿರುವ ಆದ್ಯತೆ ಹಾಗೂ ರೂಪಿಸಿರುವ ನೀತಿಗಳನ್ನು ಕೂಡ ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ| ನೀತಿ ಆಯೋಗದ ನೂತನ ಅಧ್ಯಕ್ಷರಾಗಿ ಪರಮೇಶ್ವರನ್‌ ಅಯ್ಯರ್‌ ನೇಮಕ

Exit mobile version