Site icon Vistara News

BJP Karnataka : ಸದ್ಯಕ್ಕಿಲ್ಲ ಬಿಜೆಪಿ ರಾಜ್ಯಾಧ್ಯಕ್ಷ? ಡೆಲ್ಲಿಯಿಂದ ʼತಾಂತ್ರಿಕʼ ಅಡಚಣೆ!

JP Nadda and Amith shah

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ (BJP Karnataka) ಯಾವುದೂ ಸರಿ ಆಗುತ್ತಿಲ್ಲ. ಇತ್ತ ವಿರೋಧ ಪಕ್ಷ ನಾಯಕನ (Leader of the Opposition) ಆಯ್ಕೆಯಾಗಿಲ್ಲ. ಅತ್ತ ಬಿಜೆಪಿ ರಾಜ್ಯಾಧ್ಯಕ್ಷರ (BJP state president) ಬದಲಾವಣೆಯೂ ಆಗಿಲ್ಲ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಟಿ. ರವಿ (CT Ravi) ಅವರನ್ನು ಆ ಸ್ಥಾನದಿಂದ ಕೆಳಕ್ಕಿಳಿಸದ ಮೇಲೆ ಅವರನ್ನು ರಾಜ್ಯಾಧ್ಯಕ್ಷರ ಸ್ಥಾನಕ್ಕೆ ನೇಮಿಸಲಾಗುತ್ತದೆ ಎಂದೇ ಹೇಳಲಾಗುತ್ತಿತ್ತು. ಆದರೆ, ಅಸಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಇನ್ನೂ ಹೈಕಮಾಂಡ್‌ (BJP high command) ನಿರ್ಧಾರವನ್ನೇ ಮಾಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಜತೆಗೆ “ತಾಂತ್ರಿಕ” ಖಾಲಿ ಹುದ್ದೆ ಬಗ್ಗೆ ಮಾತನಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದೊಳಗೆ ಭಾರಿ ಚರ್ಚೆಗಳು ನಡೆಯುತ್ತಿವೆ.

ಹಾಗಾದರೆ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕ ಸದ್ಯಕ್ಕಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ವಿಪಕ್ಷ ನಾಯಕನ ಘೋಷಣೆ ಇಲ್ಲದೇ ರಾಜ್ಯಾಧ್ಯಕ್ಷ ಆಯ್ಕೆಯ ನಿರ್ಧಾರ ಆಗುವುದಿಲ್ಲ ಎಂದು ಹೈಕಮಾಂಡ್‌ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ. ಸಿ.ಟಿ. ರವಿಗೆ ಕೊಕ್ ಕೊಟ್ಟ ವರಿಷ್ಠರು ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆ ಈಗ ರಾಜ್ಯ ಬಿಜೆಪಿಯಲ್ಲಿ ಭಾರಿ ಚರ್ಚೆಯಲ್ಲಿದೆ.

ಇದನ್ನೂ ಓದಿ: Mallikarjun Kharge : ಖರ್ಗೆ ಕಪ್ಪು ಎಂದ ಆರಗರನ್ನು ನಿಮ್ಹಾನ್ಸ್‌ಗೆ ಕಳಿಸುತ್ತೇವೆ: ಡಿಕೆಶಿ ಗುಡುಗು

ರಾಜ್ಯ ಬಿಜೆಪಿಗೆ ನೂತನ ನಾಯಕತ್ವ ವಿಚಾರದ ಬಗ್ಗೆ ಯಾರಲ್ಲೂ ಸ್ಪಷ್ಟತೆ ಸಿಗುತ್ತಿಲ್ಲ. ವಿಪಕ್ಷ ನಾಯಕನ ಆಯ್ಕೆಗೂ ಮುನ್ನ ರಾಜ್ಯಾಧ್ಯಕ್ಷ ಸ್ಥಾನ ಘೋಷಣೆ ಅನುಮಾನ ಎಂದೇ ಹೇಳಲಾಗುತ್ತಿದೆ. ಈ ಕುರಿತು ಮಾಹಿತಿ ಕೇಳಿದ ರಾಜ್ಯ ನಾಯಕರಿಗೆ ವರಿಷ್ಠರು ನೀಡಿರುವ ಉತ್ತರ ಎಲ್ಲರನ್ನೂ ಪೆಚ್ಚಾಗಿಸಿದೆ ಎಂದೇ ಹೇಳಲಾಗುತ್ತಿದೆ. ತಾಂತ್ರಿಕವಾಗಿ ಈಗ ವಿಪಕ್ಷ ನಾಯಕ ಸ್ಥಾನ ಮಾತ್ರ ಖಾಲಿ ಇದೆ ಎಂದು ವರಿಷ್ಠರು ಹೇಳಿದ್ದಾರೆ.

ತಾಂತ್ರಿಕವಾಗಿ ಖಾಲಿ ಅಂದರೆ?

ತಾಂತ್ರಿಕವಾಗಿ ಈಗ ವಿಪಕ್ಷ ನಾಯಕ ಸ್ಥಾನ ಮಾತ್ರ ಖಾಲಿ ಇದೆ ಎಂದು ವರಿಷ್ಠರು ಹೇಳಿರುವುದರ ಹಿಂದೆ ಏನಿದೆ ಲೆಕ್ಕಾಚಾರ ಎಂಬುದು ಬಿಜೆಪಿ ಪಾಳಯದಲ್ಲಿ ಈಗ ಬಹು ಚರ್ಚಿತ ವಿಷಯವಾಗಿದೆ. ಈ ಮೂಲಕ ಬಿಜೆಪಿ ವರಿಷ್ಠರು ಎಲ್ಲರ ತಲೆಯೊಳಗೆ ಹೊಸ ಹುಳವೊಂದನ್ನು ಬಿಟ್ಟಿದ್ದಾರೆ. ತಾಂತ್ರಿಕವಾಗಿ ಖಾಲಿ ಎಂದರೆ ಅದು ವಿಪಕ್ಷ ನಾಯಕನ ಸ್ಥಾನ ಮಾತ್ರ. ಈಗ ನಳಿನ್‌ ಕುಮಾರ್‌ ಕಟೀಲ್‌ ಅವರು ಹಾಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಹೀಗಾಗಿ ಈ ಹುದ್ದೆ ತಾಂತ್ರಿಕವಾಗಿ ಖಾಲಿ ಇಲ್ಲ ಎಂದೆಲ್ಲ ಚರ್ಚೆಗಳು ನಡೆದಿವೆ. ಅಂದರೆ ರಾಜ್ಯಾಧ್ಯಕ್ಷರ ಕುರಿತು ಚರ್ಚೆಯೇ ಆಗಿಲ್ಲವೇ? ನಳಿನ್ ಕುಮಾರ್ ಕಟೀಲ್ ಅವರೇ ಮುಂದುವರಿಯುತ್ತಾರೆಯೇ? ಎಂಬಿತ್ಯಾದಿ ಪ್ರಶ್ನೆಗಳು ಬಿಜೆಪಿ‌ ವಲಯದಲ್ಲಿ ಕೇಳಿ ಬಂದಿದೆ.

ಅಭಿಪ್ರಾಯ ಸಂಗ್ರಹ

ಇನ್ನು ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಎಲ್ಲರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಪಕ್ಷದ ಪದಾಧಿಕಾರಿಗಳು, ಶಾಸಕರು, ಸಂಸದರು, ರಾಜ್ಯಸಭೆ ಸದಸ್ಯರಿಂದ ಅಭಿಪ್ರಾಯ ಸಂಗ್ರಹವಾಗಿದೆ. ಕೋರ್ ಕಮಿಟಿ ಸಭೆಯಲ್ಲೂ ಚರ್ಚೆ ನಡೆದಿದ್ದು, ಅಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಅಂತಿಮವಾಗಿದೆ. ಆ ಹೆಸರನ್ನು ಮೊದಲು ಘೋಷಣೆ ಮಾಡಲು ವರಿಷ್ಠರು ಸಿದ್ಧತೆ ನಡೆಸಿದ್ದಾರೆ. ವಿಪಕ್ಷ ನಾಯಕನ ಘೋಷಣೆ ಬಳಿಕವೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಸರಿನ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

ಸದ್ಯಕ್ಕಿಲ್ಲ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ

ಸದ್ಯಕ್ಕೆ ವರಿಷ್ಠರಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಸಾಧ್ಯತೆ ಕಡಿಮೆ ಇದೆ. ಆಕಾಂಕ್ಷಿಗಳ ಹಾಗೂ ಸಂಭಾವ್ಯರ ಹೆಸರನ್ನು ವರಿಷ್ಠರು ಪಡೆದಿದ್ದಾರೆ. ಮೊದಲು ಎರಡೂ ಸದನಗಳಿಗೆ ವಿಪಕ್ಷ ನಾಯಕರನ್ನು ಆಯ್ಕೆ ಮಾಡುವ ಯೋಚನೆ ಮಾಡಿಕೊಳ್ಳಲಾಗಿದೆ. ಅದರ ಆಧಾರದಲ್ಲಿ ರಾಜ್ಯಾಧ್ಯಕ್ಷರ ಬಗ್ಗೆ ನಿರ್ಧಾರ ಮಾಡಲಾಗುವುದು. ವಿಪಕ್ಷ ನಾಯಕರಾಗಿ ಯಾವ ಸಮುದಾಯ, ಯಾವ ಬಣದವರು ಆಯ್ಕೆ ಆಗುತ್ತಾರೆ ಎನ್ನುವುದರ ಆಧಾರದಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿದೆ. ಇದೆಲ್ಲದರ ನಡುವೆ ವರಿಷ್ಠರ ಭೇಟಿಗಾಗಿ ದೆಹಲಿಯಲ್ಲಿ ಸಿ.ಟಿ. ರವಿ ಬೀಡುಬಿಟ್ಟಿದ್ದಾರೆ.

ಇದನ್ನೂ ಓದಿ: Gruha Lakshmi Scheme : ಗೃಹಲಕ್ಷ್ಮಿ ಗೊಂದಲಕ್ಕೆ ಮುನಿದ ಲಕ್ಷ್ಮಿ; ಐಎಎಸ್ ಅಧಿಕಾರಿ ಎತ್ತಂಗಡಿ

ಹೈಕಮಾಂಡ್‌ನಿಂದ ಸ್ಪಷ್ಟತೆ ಇಲ್ಲ

ಎರಡು ಸ್ಥಾನಗಳ ಆಯ್ಕೆ ಸಂಬಂಧ ಇನ್ನೂ ಬಿಜೆಪಿ ಹೈಕಮಾಂಡ್‌ನಲ್ಲಿ ಯಾವುದೇ ನಿಲುವು ಸ್ಪಷ್ಟವಾಗಿಲ್ಲ. ಲೋಕಸಭೆ ಚುನಾವಣೆಯನ್ನೂ ಗಮನದಲ್ಲಿರಿಸಿಕೊಂಡು ನಿರ್ಧಾರ ಕೈಗೊಳ್ಳಬೇಕಿದೆ. ಸದನದ ಒಳಗೆ ಸರ್ಕಾರದ ಗ್ಯಾರಂಟಿಗಳನ್ನು ಪ್ರಶ್ನಿಸಬೇಕು. ಆ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು. ದಾಖಲೆಗಳನ್ನು ಹಿಡಿದು ಸರ್ಕಾರದ ಹುಳುಕನ್ನು ಜನರ ಮುಂದಿಡಬೇಕು. ಇನ್ನೊಂದೆಡೆ ರಾಜ್ಯಾಧ್ಯಕ್ಷರು ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಸಂಘಟಿಸಬೇಕು. ಈ ಎಲ್ಲ ರೀತಿಯಲ್ಲಿ ಯಾರು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ತೊಡಗಿದ್ದಾರೆ ಎನ್ನಲಾಗಿದೆ.

Exit mobile version