Site icon Vistara News

Corona Virus News: ಹೊಸ ವರ್ಷಕ್ಕೆ ಯಾವುದೇ ಕೋವಿಡ್‌ ನಿರ್ಬಂಧವಿಲ್ಲ: ದಿನೇಶ್‌ ಗುಂಡೂರಾವ್‌

Minister Dinesh Gundu Rao

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ (Corona Virus News) ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಂಡುಬರುತ್ತಿದೆ. ಜತೆಗೆ ಹೊಸ ವರ್ಷ ಕೂಡ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಠಿಣ ಕೋವಿಡ್‌ ನಿರ್ಬಂಧಗಳನ್ನು ಜಾರಿ ಮಾಡಲಿದೆ ಎನ್ನಲಾಗಿತ್ತು. ಆದರೆ, ಹೊಸ ವರ್ಷ ಸಂಭ್ರಮಾಚರಣೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಸಚಿವರು, ರಾಜ್ಯದಲ್ಲಿ 34 ಕೋವಿಡ್‌ ಉಪ ತಳಿ ಜೆಎನ್1 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಯಾರೂ ಆತಂಕ ಪಡಬಾರದು. ಹೊಸ ವರ್ಷಕ್ಕೆ ಯಾವುದೇ ನಿರ್ಬಂಧವಿಲ್ಲ. ಹೊಸ ವರ್ಷಾಚರಣೆ ಸೇರಿ ಸಭೆ, ಸಮಾರಂಭಗಳಿಗೆ ಯಾವುದೇ ನಿರ್ಬಂಧವಿಲ್ಲ. ರಾಜ್ಯದಲ್ಲಿ ಈಗಿರುವ ಮಾರ್ಗಸೂಚಿಯೇ ಮುಂದುವರಿಯಲಿದೆ. ಮುಂದೆ ಏನಾದರೂ ಬದಲಾವಣೆ ಇದ್ದರೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್‌ 19 ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳ ಬಗ್ಗೆ ಚರ್ಚಿಸಲು ಡಿ.26ರಂದು ಸಚಿವ ಸಂಪುಟ ಉಪ ಸಮಿತಿ ಸಭೆ ಕರೆಯಲಾಗಿದೆ. ದೇಶ ಅಥವಾ ವಿದೇಶಗಳಲ್ಲಿ ಸದ್ಯಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಆರೋಗ್ಯ ತುರ್ತು ಪರಿಸ್ಥಿತಿ ನಿಭಾಯಿಸಲು ನಮ್ಮ ಸರ್ಕಾರ ಸಜ್ಜಾಗಿದ್ದು, ಸದ್ಯಕ್ಕೆ ರಾಜ್ಯದಲ್ಲೂ ಯಾವುದೇ ನಿರ್ಬಂಧಗಳನ್ನು ವಿಧಿಸಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ಕೇಂದ್ರ ಸರ್ಕಾರವೇ ಕನ್ನಡಿಗರ ತಲೆಮೇಲೆ ಕಲ್ಲು ಹಾಕ್ತಿದೆ; ಅಶೋಕ್‌ಗೆ ಸಿಎಂ ತಿರುಗೇಟು

34 ಮಂದಿಗೆ ಜೆಎನ್‌1 ಸೋಂಕು ದೃಢ; ಕರ್ನಾಟಕ ಇನ್‌ ಡೇಂಜರ್‌!

ಬೆಂಗಳೂರು: ಕೇರಳದಲ್ಲಿ ಕೋವಿಡ್‌ ಉಪ ತಳಿ ಜೆಎನ್‌ 1 ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ ಕರ್ನಾಟಕ ಸೇರಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಜೆಎನ್‌ 1 ಪ್ರಕರಣಗಳು (COVID Subvariant JN1) ಪತ್ತೆಯಾಗಿರುವುದು ಕಂಡುಬಂದಿದೆ. ರಾಜ್ಯದಲ್ಲಿ ಡಿ.25ರವರೆಗೆ ಕೋವಿಡ್‌-19 ಸಕ್ರಿಯ ಪ್ರಕರಣಗಳು (Corona Virus News) 436 ಇವೆ. ಆದರೆ, ಇದೀಗ ಮೈಸೂರು ಅಷ್ಟೇ ಅಲ್ಲದೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೊಸ ಕೋವಿಡ್‌ ಉಪ ತಳಿ ಜೆ.ಎನ್.1 ಪತ್ತೆಯಾಗಿದ್ದು, 34 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಈ ಬಗ್ಗೆ ಆರೋಗ್ಯ ಸಚಿವ ದಿನೇಶ್‌ ಗುಂಡುರಾವ್‌ ಅವರು ಸೋಮವಾರ ಮಾಹಿತಿ ನೀಡಿದ್ದಾರೆ. ಜಿನೋಮಿಕ್ ಸೀಕ್ವೆನ್ಸ್‌ ವರದಿ ಪ್ರಕಾರ ರಾಜ್ಯದಲ್ಲಿ ಇಲ್ಲಿವರೆಗೂ 34 ಜೆ.ಎನ್.1 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 31 ಸಕ್ರಿಯ ಪ್ರಕರಣವಿದ್ದು, ಮೂವರು ಮೃತಪಟ್ಟಿದ್ದಾರೆ. ಬೆಂಗಳೂರಿನ ದಕ್ಷಿಣ ವಲಯ, ಪಶ್ಚಿಮ ವಲಯ ಹಾಗೂ ರಾಮನಗರದಲ್ಲಿ ತಲಾ ಒಬ್ಬರು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನಲ್ಲಿ 20 ಕೇಸ್, ಮೈಸೂರು 4, ಮಂಡ್ಯ 3, ರಾಮನಗರ 1, ಬೆಂಗಳೂರು ಗ್ರಾಮಾಂತರ -1, ಕೊಡಗು 1, ಚಾಮರಾಜನಗರ 1 ಪ್ರಕರಣ ಪತ್ತೆಯಾಗಿದೆ.
ಸೋಮವಾರ 125 ಕೋವಿಡ್‌ 19 ಪ್ರಕರಣ ಪತ್ತೆ

ರಾಜ್ಯದಲ್ಲಿ ಸೋಮವಾರ ಒಟ್ಟು 125 ಪ್ರಕರಣಗಳು ದಾಖಲಾಗಿವೆ. ಇದರಿಂದ COVID 19 ಸಕ್ರಿಯ ಪ್ರಕರಣಗಳ ಸಂಖ್ಯೆ 436ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಾದ್ಯಂತ ಒಟ್ಟು ಮಂದಿಗೆ 3155 COVID 19 ತಪಾಸಣೆ (RTPCR – 2072 , RAT – 1083) ನಡೆಸಲಾಗಿದ್ದು, ಈ ಪೈಕಿ, 125 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಗುಣಮುಖರಾಗಿ 30 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 360 ಸಕ್ರಿಯ ಕೊರೊನಾ ಪ್ರಕರಣಗಳು ಇವೆ. ಒಟ್ಟಾರೆಯಾಗಿ ಆಸ್ಪತ್ರೆಯಲ್ಲಿ 36 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 400 ಮಂದಿ ಹೋಮ್ ಐಸೋಲೇಶನ್‌ನಲ್ಲಿದ್ದಾರೆ.

ನಾಳೆಯಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಸಾಧ್ಯತೆ ಇದೆ. ಹೀಗಾಗಿ ರಾಜ್ಯದ 31 ಜಿಲ್ಲೆಗಳಲ್ಲಿ 5 ಸಾವಿರ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಸೂಚಿಸಿದೆ. ಇದರಿಂದ 300-400 ಜನ ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ. ಸೋಂಕಿತರ ಪೈಕಿ ಆಸ್ಪತ್ರೆಗೆ ದಾಖಲಾಗುವವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇನ್ನು ಜೆ.ಎನ್. 1 ಪತ್ತೆಗೆ 176 ಜನ ಗಂಟಲು ದ್ರವ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸ್‌ಗೆ ಕಳುಹಿಸಲಾಗಿದ್ದು, ವರದಿ ಪ್ರಕಟ ಸಾಧ್ಯತೆ‌ ಇದೆ.

Exit mobile version