Site icon Vistara News

Karnataka Politics : ಆರೆಸ್ಸೆಸ್‌, ಬಜರಂಗ ಬ್ಯಾನ್‌ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂದ ಪರಮೇಶ್ವರ್‌

No discussion yet on Bajarang dal, RSS Ban, Says G Parameshwar

No discussion yet on Bajarang dal, RSS Ban, Says G Parameshwar

ಬೆಂಗಳೂರು: ಒಂದು ಕಡೆ ಸಿದ್ದರಾಮಯ್ಯ ಸಂಪುಟದ (Siddaramaiah Cabinet) ಕೆಲವು ಸಚಿವರು, ಕಾಂಗ್ರೆಸ್‌ ಶಾಸಕರು ಅಗತ್ಯಬಿದ್ದರೆ ಆರೆಸ್ಸೆಸ್‌ ಬ್ಯಾನ್‌ ಮಾಡುತ್ತೇವೆ, ಬಜರಂಗ ದಳ (Bajarang dal) ನಿಷೇಧಿಸುತ್ತೇವೆ ಎಂದು ನೇರವಾಗಿ ಹೇಳಿಕೆ ನೀಡುತ್ತಿದ್ದರೆ ಹಿರಿಯ ಸಚಿವರಾದ ಜಿ. ಪರಮೇಶ್ವರ್‌ (G Parameshwar) ಅವರು ಮಾತ್ರ ಈ ವಿಚಾರದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ (Karnataka Politics) ಎಂದು ಹೇಳಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಅವರು, ಆರೆಸ್ಸೆಸ್‌, ಬಜರಂಗ ದಳದ ಬ್ಯಾನ್‌ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಒಂದು ವೇಳೆ ಅವರು ಶಾಂತಿ ಕದಡುವ ಕೆಲಸ ಮಾಡಿದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಅವಶ್ಯಕತೆ ಬಿದ್ದರೆ ಬ್ಯಾನ್ ಮಾಡುತ್ತೇವೆ ಅಂತ ಹೇಳಿದ್ದೆವು. ಅದು ಬಿಟ್ಟರೆ ಬೇರೆ ಯಾವುದೇ ವಿಚಾರ ಚರ್ಚೆ ಮಾಡಿಲ್ಲ. ಕೆಲವರು ವೈಯಕ್ತಿಕವಾಗಿ ಅವರ ಅಭಿಪ್ರಾಯ ಹೇಳಿರಬಹುದು. ಆದರೆ ಇದೆಲ್ಲ ಚರ್ಚೆ ಅಗತ್ಯವಿದೆʼʼ ಎಂದು ಹೇಳಿದ್ದಾರೆ.

ಗೋ ಹತ್ಯೆ ಸೇರಿದಂತೆ ಬಿಜೆಪಿ ಅವಧಿಯ ಕಾಯಿದೆಗಳ ನಿಷೇಧ ವಿಚಾರವಾಗಿ ಕೇಳಿದಾಗ, ʻʻಯಾವುದು ಸಮಾಜದ ವಿರುದ್ಧ ಇದೆಯೋ, ಸಮಾಜದ ಶಾಂತಿ ಕದಡುವ ವಿಚಾರಗಳು ಇವೆಯೋ?, ಜನರ ವಿರೋಧಿ ಕಾಯ್ದೆಗಳು ಇವೆಯೋ.. ಅಂತಹ ನಿಯಮಗಳನ್ನು ಪರಿಶೀಲನೆ ಮಾಡುತ್ತೇವೆ. ಜನಪರ ಆಡಳಿತ ಕೊಡಲು ಬೇಕಾದ ತೀರ್ಮಾನ ತೆಗೆದುಕೊಳ್ಳುತ್ತೇವೆʼʼ ಎಂದು ಹೇಳಿದರು ಪರಮೇಶ್ವರ್‌.

ಪಠ್ಯದ ಬಗ್ಗೆ ಈಗಲೇ ತೀರ್ಮಾನವಿಲ್ಲ

ʻʻರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ರಚನೆಯಾದ ಪಠ್ಯ ಪುಸ್ತಕ ರದ್ದು ವಿಚಾರವೂ ಚರ್ಚೆ ಆಗಿಲ್ಲ. ಸರ್ಕಾರ ಸಂಪೂರ್ಣವಾಗಿ ತೀರ್ಮಾನ ತೆಗೆದುಕೊಳ್ಳುವಂತಹ ಹಂತಕ್ಕೆ ಬರಬೇಕು. ವಿಧಾನಸೌಧದಲ್ಲಿ ಸಂಪೂರ್ಣವಾದ ಸರ್ಕಾರ ಕೂತ ಮೇಲೆ, ಖಾತೆ ಹಂಚಿಕೆ ಆದಮೇಲೆ, ಯಾರು ಶಿಕ್ಷಣ ಸಚಿವರಾಗುತ್ತಾರೋ ಅವರು ಅಭ್ಯಾಸ ಮಾಡುತ್ತಾರೆ. ನಂತರ ಕ್ಯಾಬಿನೆಟ್ ನಲ್ಲಿ ತೀರ್ಮಾನ ಆಗಬೇಕು. ಒಬ್ಬೊಬ್ಬರೇ ಹೇಳಿಕೆ ಕೊಟ್ಟ ತಕ್ಷಣ ತೀರ್ಮಾನ ಆಗುವುದಿಲ್ಲʼʼ ಎಂದು ಪರಮೇಶ್ವರ್‌ ನುಡಿದರು.

ಗ್ಯಾರಂಟಿ ಯೋಜನೆಗಳ ಆದೇಶ ಆಗಿದೆ

ʻʻರಾಜ್ಯ ಸರ್ಕಾರ ಕರೆಂಟ್‌ ಬಿಲ್‌ ಕಟ್ಟಬೇಕಾಗಿಲ್ಲ ಎಂಬ ಯೋಜನೆಯನ್ನು ತಕ್ಷಣವೇ ಘೋಷಿಸಬೇಕು. ಇಲ್ಲವಾದರೆ ಕರೆಂಟ್ ಬಿಲ್ ಕಟ್ಟಬೇಡಿ ಎಂದು ಕರೆ ನೀಡುತ್ತೇನೆʼʼ ಎಂಬ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ʻʻನಾನು ಬಿಜೆಪಿ, ಜೆಡಿಎಸ್ ಅವರ ರಿಯಾಕ್ಷನ್‌ ನೋಡಿದ್ದೇನೆ. ನಾವು ಹೇಳಿದ್ದು ಮೊದಲ ಸಂಪುಟದಲ್ಲಿ ತೀರ್ಮಾನ ತಗೋತಿವಿ ಅಂತ. ರಾಹುಲ್ ಗಾಂಧಿ ಕೂಡ ಹೇಳಿದ್ದಾರೆ. ಅದೇ ಪ್ರಕಾರ ಪ್ರಮಾಣ ವಚನದ ಬಳಿಕ ಮೊದಲ ಕ್ಯಾಬಿನೆಟ್‌ನಲ್ಲೇ ಸರ್ಕಾರಿ ಆದೇಶಕ್ಕೆ ಸೂಚನೆ ಕೊಟ್ಟಿದ್ದೇವೆ. ಸಂಜೆಯೊಳಗೆ ಆದೇಶ ಆಗಿದೆ. ಅದರ ಪ್ರೊಸೀಜರ್ ವರ್ಕೌಟ್ ಮಾಡಲಾಗುತ್ತಿದೆ. ಯಾವ ರೀತಿ ಡಿಸ್ಕೌಂಟ್ ಮಾಡಬೇಕು ಎಂಬ ಬಗ್ಗೆ ಲೆಕ್ಕಾಚಾರ ನಡೆಯುತ್ತಿದೆʼʼ ಎಂದು ಹೇಳಿದ ಪರಮೇಶ್ವರ್‌ ಅವರು, ʻʻಇವರಿಗೆ ಹೊಟ್ಟೆ ಉರಿ ನಮ್ಮ ಪರಿಸ್ಥಿತಿ ಇಲ್ಲಿಗೆ ಬಂತಲ್ಲ ಅಂತ. ಅದಕ್ಕೆ ಹೀಗೆ ಹೇಳಿಕೆ ಕೊಡುತ್ತಿದ್ದಾರೆʼʼ ಎಂದು ಗೇಲಿ ಮಾಡಿದರು.

ನನಗೆ ಯಾವ ಖಾತೆ ಕೊಟ್ಟರೂ ಓಕೆ

ʻʻನಾನು ಯಾವ ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ. ನನಗೆ ಯಾವುದೂ ಕಠಿಣ ಅಲ್ಲ. ಸರ್ಕಾರ
ಯಾವ ತೀರ್ಮಾನ ತೆಗೆದುಕೊಳ್ಳುತ್ತೋ ಅದು ಅವರ ವಿವೇಚನೆಗೆ ಬಿಟ್ಟಿದ್ದುʼʼ ಎಂದು ಹೇಳಿದ ಅವರು, ನಾನು ಖಾತೆ ಕೇಳೋದಾಗಿದ್ದರೆ ದೆಹಲಿಗೆ ಹೋಗಿ ಲಾಬಿ ಮಾಡುತ್ತಿದ್ದೆ. ನನ್ನ ಅನುಭವ ಪರಿಗಣಿಸಿ ಅವರೇ ಕೊಡ್ತಾರೆ. ಅವರಿಗೆ ಗೊತ್ತಿಲ್ವಾ ಚೆನ್ನಾಗಿ ಗೊತ್ತಿದೆ ಅವರಿಗೆ. ಪಕ್ಷ ಅಂದ ಮೇಲೆ ಶಿಸ್ತಿನಿಂದ ಹೋಗಬೇಕು. ನಾನು ಅದನ್ನೇ ಮಾಡುತ್ತಿದ್ದೇನೆʼʼ ಎಂದರು.

ʻʻಸಿದ್ದರಾಮಯ್ಯಗೆ ಈ ಬಾರಿ ಫ್ರೀ ಹ್ಯಾಂಡ್ ಇಲ್ಲವಂತಲ್ಲʼʼ ಎಂದು ಕೇಳಿದಾಗ, ಅವರನ್ನೇ ಕೇಳಿ ಎಂದು ನಗುತ್ತಲೇ ಹೊರಟು ಹೋದರು ಪರಮೇಶ್ವರ್.

ಇದನ್ನೂ ಓದಿ: Loksabha Election 2024: ಲೋಕಸಭೆಗೆ ಕಾಂಗ್ರೆಸ್‌ ತಯಾರಿ; ಮಂಡ್ಯದಲ್ಲಿ ಸುಮಲತಾ ವಿರುದ್ಧ ರಮ್ಯ?

Exit mobile version