Site icon Vistara News

Davanagere Benne Dose: ದಾವಣಗೆರೆ ಬೆಣ್ಣೆ ದೋಸೆಗೆ ಜಿಐ ಟ್ಯಾಗ್‌ ಕೊಡಲ್ಲ ಎಂದ ಕೇಂದ್ರ; ಯಾಕೆಂದರೆ…

davanagere benne dose

ಬೆಂಗಳೂರು: ಬಿಸಿಯಾದ, ಗರಿಗರಿಯಾದ, ಪಕ್ಕದಲ್ಲಿ ಆಲೂ ಪಲ್ಯವನ್ನಿಟ್ಟುಕೊಂಡ, ಮೇಲೊಂದು ಕರಗುತ್ತಿರುವ ಬೆಣ್ಣೆಯ ಮುದ್ದೆ ಇಟ್ಟು ನೀಡುವ ದಾವಣಗೆರೆ ಬೆಣ್ಣೆ ದೋಸೆ (Davanagere Benne Dose) ಅದೆಷ್ಟೋ ವರ್ಷಗಳಿಂದ ಕರ್ನಾಟಕದಾದ್ಯಂತ (Karnataka) ಆಹಾರಪ್ರೇಮಿಗಳನ್ನು ತೃಪ್ತಿಪಡಿಸುತ್ತಿದೆ. ಆದರೆ ಈ ʼದಾವಣಗೆರೆ ಬೆಣ್ಣೆ ದೋಸೆʼ ಎಂಬ ಖಾದ್ಯಕ್ಕೆ ಜಿಐ ಟ್ಯಾಗ್‌ (GI tag) ಅರ್ಥಾತ್‌ ʼಭೌಗೋಳಿಕ ಗುರುತಿನʼ (Geographical Indication) ಟ್ಯಾಗ್‌ ನೀಡಲು ಸಾಧ್ಯವಿಲ್ಲವಂತೆ.

ಹೌದು, ಇದು ಕರ್ನಾಟಕದಾದ್ಯಂತ ಲಭ್ಯವಿದೆ ಎಂಬ ಅಂಶವೇ ಈ ಜನಪ್ರಿಯ ದೋಸೆಗೆ ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಪಡೆಯುವ ದಾರಿಯಲ್ಲಿ ಮುಳ್ಳಾಗಿದೆ. ʼದಾವಣಗೆರೆ ಬೆಣ್ಣೆ ದೋಸೆ ಯಾವುದೇ ಒಂದು ಸೀಮಿತ ಪ್ರದೇಶಕ್ಕೆ ನಿರ್ದಿಷ್ಟವಾಗಿಲ್ಲದ ಕಾರಣ GI ಟ್ಯಾಗ್‌ಗೆ ಅರ್ಹತೆ ಪಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ದಾವಣಗೆರೆಯ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ (davanagere MP Prabha Mallikarjun) ಅವರು ಸದನದಲ್ಲಿ ಕೋರಿದ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರಿಸಿದ್ದು, ಈ ವಿಷಯ ತಿಳಿಸಿದೆ. ತಮ್ಮ ಜಿಲ್ಲೆಯ ಸುಪ್ರಸಿದ್ಧವಾದ ದೋಸೆಗೆ GI ಟ್ಯಾಗ್ ಒದಗಿಸಿಕೊಡುವ ಕುರಿತು ಪ್ರಭಾ ಪ್ರಶ್ನಿಸಿದ್ದರು.

“ದಾವಣಗೆರೆ ಹೊರತುಪಡಿಸಿಯೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇದನ್ನು ತಯಾರಿಸಿ ಮಾರಾಟ ಮಾಡುವುದರಿಂದ ಇದನ್ನು ಸಾಮಾನ್ಯ ವಸ್ತು ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಜಿಐ ಟ್ಯಾಗ್‌ ನೀಡಲಾಗುವುದಿಲ್ಲ. ಜಿಐ ಟ್ಯಾಗ್‌ ಪಡೆಯಲು ನಿರ್ದಿಷ್ಟ ಪ್ರದೇಶವು ವಿಶಿಷ್ಟತೆಯ ಅಂಶವಾಗಿ ಅಪೇಕ್ಷಿತವಾಗಿದೆ. ಇದು ಹಲವಾರು ಸ್ಥಳಗಳಲ್ಲಿ ಉತ್ಪಾದನೆಯಾಗುತ್ತಿರುವ ಕಾರಣ ನಿರ್ದಿಷ್ಟ ಪ್ರದೇಶಕ್ಕೆ ಹೆಚ್ಚು ವಿಶಿಷ್ಟವಾಗಿಲ್ಲ” ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಹಕಾರ ಸಚಿವ ಜಿತಿನ್ ಪ್ರಸಾದ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಉತ್ತರದ ನಂತರ, ಜಿಐ ಟ್ಯಾಗ್‌ಗೆ ನೋಂದಣಿಗೆ ಕನಿಷ್ಠ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ದಾವಣಗೆರೆ ಜಿಲ್ಲಾಧಿಕಾರಿಗೆ ಈಗಾಗಲೇ ನಿರ್ದೇಶನ ನೀಡಿದ್ದೇನೆ ಎಂದು ಪ್ರಭಾ ಅವರು ತಿಳಿಸಿದ್ದಾರೆ.

“ರಸಗುಲ್ಲಾ, ಲೋನಾವಳ ಚಿಕ್ಕಿ ಮತ್ತು ಇತರ ಉತ್ಪನ್ನಗಳಿಗೆ ಈಗಾಗಲೇ ಜಿಐ ಟ್ಯಾಗ್ ಇದೆ. ಇದನ್ನು ಭಾರತದಾದ್ಯಂತ ವ್ಯಾಪಕವಾಗಿ ಉತ್ಪಾದಿಸಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ. ಅದೇ ರೀತಿ ದಾವಣಗೆರೆ ಬೆಣ್ಣೆ ದೋಸೆ ಕೂಡ ರಾಜ್ಯಾದ್ಯಂತ ಮಾರಾಟವಾಗುತ್ತಿದೆ. ಈ ಕಾರಣಕ್ಕಾಗಿ ಈ ವಿಶಿಷ್ಟ ಉತ್ಪನ್ನಕ್ಕಾಗಿ ಜಿಐ ಟ್ಯಾಗ್ ಅನ್ನು ಪಡೆದುಕೊಳ್ಳುವುದು ತಪ್ಪಬಾರದು” ಎಂದು ಪ್ರಭಾ ಹೇಳಿದ್ದಾರೆ.

“ದಾವಣಗೆರೆಯ ಯಾವುದೇ ವ್ಯಕ್ತಿ ದೇಶದ ಯಾವುದೇ ಸ್ಥಳಕ್ಕೆ ಹೋದರೆ ಅಲ್ಲಿ ಆತನನ್ನು ಮೊದಲು ಬೆಣ್ಣೆ ದೋಸೆಯ ಬಗ್ಗೆ ಕೇಳಲಾಗುತ್ತದೆ. ಈ ಉತ್ಪನ್ನಕ್ಕೆ ಅಂತಹ ಕ್ರೇಜ್ ಇದೆ. ನಾನು ಸಂಸತ್ತಿಗೆ ಹೋದ ಮೊದಲ ದಿನ, ದೇಶದ ವಿವಿಧ ಭಾಗಗಳಿಂದ ಬಂದ ನನ್ನ ಎಲ್ಲಾ ಸಹೋದ್ಯೋಗಿಗಳು ದಾವಣಗೆರೆ ಬೆಣ್ಣೆ ದೋಸೆಯ ಬಗ್ಗೆ ನನ್ನನ್ನು ಕೇಳಿದರು. ಆಗ, ಜಿಐ ಟ್ಯಾಗ್ ಪಡೆಯುವುದು ಎಷ್ಟು ಮುಖ್ಯ ಎಂದು ನಾನು ಅರಿತುಕೊಂಡೆ” ಎಂದು ಅವರು ಹೇಳಿದರು.

ಬೆಣ್ಣೆ ದೋಸೆಯ ಮೂಲವನ್ನು ನಾಲ್ಕು ಸಹೋದರರಲ್ಲಿ ಕಾಣಲಾಗುತ್ತದೆ. ಕೋಠಿನ್ ಶಾಂತಪ್ಪ, ಮಹದೇವಪ್ಪ, ಶಂಕರಪ್ಪ ಮತ್ತು ಬಸವಂತಪ್ಪ. ಇವರು ಬೆಳಗಾವಿ ಜಿಲ್ಲೆಯ ರಾಮದುರ್ಗದ ಬೀಡ್ಕಿ ಗ್ರಾಮದಿಂದ 1928ರಲ್ಲಿ ದಾವಣಗೆರೆಗೆ ಉದ್ಯೋಗದ ಹುಡುಕಾಟದಲ್ಲಿ ವಲಸೆ ಬಂದವರು. ತಮ್ಮ ತಾಯಿ ಚೆನ್ನಮ್ಮ ಅವರಿಂದ ದೋಸೆ ತಯಾರಿಕೆಯ ಕಲೆಯನ್ನು ಕಲಿತರು. ಇವರ ಅಮ್ಮ ತಮ್ಮ ಮಕ್ಕಳಿಗೆ ರುಚಿಕರವಾದ ರಾಗಿ ದೋಸೆಯನ್ನು ತಯಾರಿಸುತ್ತಿದ್ದರಂತೆ. ಈ ಸೋದರರಿಂದ ಮಸಾಲೆ ಸಹಿತದ ಬೆಣ್ಣೆ ದೋಸೆ ಜನಪ್ರಿಯವಾಯಿತು. ಇವರ ಮೊದಲ ದೋಸೆ ಆರು ಪೈಸೆಗೆ ಮಾರಾಟವಾಯಿತು. ಈಗ ಈ ಅಂಗಡಿಗಳನ್ನು ನಡೆಸುತ್ತಿರುವ ಅವರ ಮಕ್ಕಳು, ಮೊಮ್ಮಕ್ಕಳು ತಯಾರಿಸುತ್ತಿರುವ ದೋಸೆಗೆ 55ರಿಂದ 65 ರೂ. ಬೆಲೆಯಿದೆ.

ಕರ್ನಾಟಕದಲ್ಲಿ ನಂಜನಗೂಡು ರಸಬಾಳೆ, ಚನ್ನಪಟ್ಟಣದ ಮರದ ಗೊಂಬೆಗಳು, ಮೈಸೂರು ಮಲ್ಲಿಗೆ, ಮೈಸೂರು ರೇಷ್ಮೆ, ಬೀದರ್‌ನ ಬಿದರಿ ಕಲೆ, ಇಳಕಲ್‌ ಹಾಗೂ ಮೊಳಕಾಲ್ಮುರು ಸೀರೆಗಳು, ಕೊಡಗಿನ ಕಿತ್ತಳೆ, ಅಪ್ಪೆಮಿಡಿ ಮಾವು, ಧಾರವಾಡ ಪೇಡಾ, ಬಾಬಾಬುಡನ್‌ಗಿರಿಯ ಅರೇಬಿಕಾ ಕಾಫಿ ಮುಂತಾದವು ಜಿಐ ಟ್ಯಾಗ್‌ ಪಡೆದಿವೆ.

ಇದನ್ನೂ ಓದಿ: PM Narendra Modi: ಅಡಿಕೆ, ಸಿರಿಧಾನ್ಯ, ಮೀನುಗಾರಿಕೆ ಪ್ರಸ್ತಾಪಿಸಿ ಕೃಷಿಕರ ಮನ ಗೆದ್ದ ಮೋದಿ

Exit mobile version