Site icon Vistara News

BBMP hoarding rules : ಬೆಂಗಳೂರಲ್ಲಿನ್ನು ಸಿಎಂ, ಡಿಸಿಎಂ ಸೇರಿ ಯಾರ ಹೋರ್ಡಿಂಗ್ಸ್‌ ಹಾಕುವಂತಿಲ್ಲ; ಹಾಕಿದ್ರೆ FIR!

DCM DK Shivakumar infront of BBMP Hoarding and talk about hoarding policy in Bangalore

ಬೆಂಗಳೂರು: ಬೆಂಗಳೂರು ಅಂದವನ್ನು ಹಾಳು ಮಾಡುವ ಹೋರ್ಡಿಂಗ್ಸ್‌, ಕಟೌಟ್‌ಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಸಿಎಂ, ಡಿಸಿಎಂ ಸೇರಿದಂತೆ ಯಾರ ಹೋರ್ಡಿಂಗ್‌ ಅನ್ನು ಕೂಡಾ ಇನ್ನು ಅನುಮತಿ ಇಲ್ಲದೇ ಹಾಕುವಂತಿಲ್ಲ. ಒಂದು ವೇಳೆ ಹಾಕಿದರೆ ಕಾರ್ಪೊರೇಷನ್ ಅವರು ಎಫ್‌ಐಆರ್‌ (FIR) ದಾಖಲಿಸುತ್ತಾರೆ. ಇದಕ್ಕಾಗಿ ಒಂದು ನೀತಿಯನ್ನೇ (BBMP hoarding rules) ತರಲಾಗುವುದು. ಇದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಖಡಕ್‌ ಸೂಚನೆಯಾಗಿದೆ.

ಕೆಕೆಗೆಸ್ಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಅಕ್ರಮ ಹೋರ್ಡಿಂಗ್, ಕಟೌಟ್‌ಗಳನ್ನು ತೆಗೆಯಲು ಸೂಚಿಸಿದ್ದೇನೆ. ನನ್ನದು, ಸಿಎಂ ಸೇರಿದಂತೆ ಯಾರದ್ದೂ ಹಾಕುವಂತಿಲ್ಲ. ಸರ್ಕಾರದ್ದು ಹಾಕಬೇಕಾದರೂ ಸೀಮಿತ ಅನುಮತಿಯನ್ನು ಪಡೆಯುತ್ತೇವೆ. ಇದಕ್ಕೆ ಒಂದು ಪಾಲಿಸಿಯನ್ನು ತರಲಾಗುವುದು ಎಂದು ಹೇಳಿದರು.

ಈಗ ಹಾಕಿರುವ ಹೋರ್ಡಿಂಗ್‌ ಹಾಗೂ ಹೋರ್ಡಿಂಗ್‌ ಸ್ಟ್ರಕ್ಚರ್‌ಗಳನ್ನು ಸಹ ತೆಗೆದುಹಾಕಬೇಕು ಎಂಬ ಸಲಹೆ ಬಂದಿದೆ. ಆಡಳಿತ ಪಕ್ಷದ ಶಾಸಕರನ್ನು ಕರೆದು ಈಗಾಗಲೇ ಹೇಳಿದ್ದೇನೆ. ಹುಟ್ಟುಹಬ್ಬದ ಶುಭಾಶಯ, ಸಾವಿಗೆ ಶ್ರದ್ಧಾಂಜಲಿ ಸೇರಿದಂತೆ ಯಾವುದೇ ರೀತಿಯ ಶುಭಾಶಯ ಕೋರುವ ಫ್ಲೆಕ್ಸ್ ಅನ್ನು ಯಾರೂ ಕೂಡ ಹಾಕಬಾರದು ಎಂದು ಮನವಿ ಮಾಡುತ್ತೇನೆ. ಹೀಗೆ ಮಾಡಿದರೆ ಕಾರ್ಪೊರೇಷನ್ ಅವರು ಎಫ್‌ಐಆರ್‌ (FIR) ದಾಖಲಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: BBMP Bill Payment : ರಾಜ್ಯಪಾಲರ ಅಂಗಳಕ್ಕೆ ಬಿಬಿಎಂಪಿ ಬಿಲ್‌ ಗಲಾಟೆ; ಡಿಕೆಶಿ ವಿರುದ್ಧ ಕಮಿಷನ್ ದೂರು!

40 ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲು

ಧಾರ್ಮಿಕ, ರಾಜಕೀಯ, ಸಾಮಾಜಿಕ ಯಾವುದೇ ವಿಚಾರಕ್ಕೂ ಹೋರ್ಡಿಂಗ್ಸ್‌ ಹಾಕಲು ಅನುಮತಿ ಇಲ್ಲ. ನಾನು ಮಂತ್ರಿಯಾದ ಕೂಡಲೇ ಇದನ್ನು ಘೋಷಣೆ ಮಾಡಬೇಕಿತ್ತು. ಆದರೆ, ಕೆಲವು ಸಮಸ್ಯೆ ಇತ್ತು. ಹಾಗಾಗಿ ಈಗ ನಿರ್ಧಾರ ತೆಗೆದುಕೊಂಡಿದ್ದೇನೆ. ಈಗಾಗಲೇ 58 ಸಾವಿರ ಅಕ್ರಮ ಫ್ಲೆಕ್ಸ್ ತೆರವು ಮಾಡಲಾಗಿದೆ. ಈ ಸಂಬಂಧ 134 ದೂರುಗಳು ಬಂದಿದ್ದು, ಅದರಲ್ಲಿ 40 ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಟ್ರಾಫಿಕ್‌ ನಿಯಂತ್ರಣಕ್ಕೆ ಬಂದಿವೆ 70 ಸಾವಿರಕ್ಕೂ ಹೆಚ್ಚು ಸಲಹೆ

ಬೆಂಗಳೂರು ಟ್ರಾಫಿಕ್ ಕಿರಿಕಿರಿ ಬಗೆಹರಿಸುವ ನಮ್ಮ ಪ್ರಯತ್ನಕ್ಕೆ 70 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಶಾಲಾ ಮಕ್ಕಳಿಂದ ಹಿಡಿದು ಎಲ್ಲರ ಸಲಹೆ ಬಂದಿವೆ. ಇನ್ನು ಕೆಲವು ಸಂಸ್ಥೆಗಳಿಗೆ ಡಿಬೇಟ್‌ಗೆ ಅವಕಾಶ ಕೊಟ್ಟಿದ್ದೆವು. ಈ ಸಲಹೆಗಳನ್ನು ಆಧರಿಸಿ ವರದಿ ಸಿದ್ಧಪಡಿಸಿದ್ದೆವು. ದೆಹಲಿಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಯಶವಂತಪುರ, ಕೋಲಾರ, ಮೈಸೂರು, ಹೊಸಕೋಟೆ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಗಳು ಸೇರುತ್ತವೆ. ಇದರಿಂದ ಟ್ರಾಫಿಕ್ ಪ್ರಾಬ್ಲಂ ಹೆಚ್ಚಾಗಿದೆ. ವಾಹನಗಳ ಹೆಚ್ಚಳವೂ ಇದೆ. ಕೇಂದ್ರ ಸಚಿವರು ಇದಕ್ಕೆ ಸಲಹೆ ಕೊಟ್ಟಿದ್ದರು. ಟನಲ್, ಫ್ಲೈಓವರ್ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ. ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡು ಬನ್ನಿ ಎಂದಿದ್ದಾರೆ. ಗ್ಲೋಬಲ್ ಟೆಂಡರ್ ಅನ್ನು ಕರೆಯುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಅವರಿಗೆ ನೋವಾಗಿದೆ, ಅದನ್ನು ಸರಿಪಡಿಸಬೇಕು. ಯಾರನ್ನೂ ನೋಯಿಸುವುದು ನನಗೆ ಇಷ್ಟವಿಲ್ಲ. ಲೋಕಾಯುಕ್ತದಿಂದ ಸಂಪೂರ್ಣ ದಾಖಲೆಯ ವರದಿ ಇದೆ. ಯಾರು ಅಸಲಿ ಗುತ್ತಿಗೆದಾರರಿದ್ದಾರೋ ಅವರಿಗೆ ಹಣ ಸಿಗಲಿದೆ. ಶೀಘ್ರವೇ ಎಲ್ಲ ದಾಖಲೆ ಬಿಡುಗಡೆ ಮಾಡುತ್ತೇನೆ. ಒಂದು ಸಾವಿರ ಕೋಟಿ ನಕಲಿ ಬಿಲ್ ಬಿಡುಗಡೆ ಮಾಡಲಾಗಿದೆ. ಅದೆಲ್ಲದರ ವರದಿಯನ್ನು ಬಿಡುಗಡೆ ಮಾಡುತ್ತೇನೆ. ಡಿಕೆಶಿ ಹೆಸರಲ್ಲಿ ನಕಲಿ ದಾಖಲೆ ಕೊಟ್ಟರೂ ಕ್ರಮ ತೆಗೆದುಕೊಳ್ಳುತ್ತೇನೆ. ಇದು ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ರಾಜಕೀಯದಲ್ಲಿ ನನ್ನ ಸ್ಮೇಹಿತರು ಇದರ ಹಿಂದಿದ್ದಾರೆ ಅನ್ನೋದು ಗೊತ್ತಿದೆ. ಸಮಯ ಬಂದಾಗ ದಾಖಲೆ ಸಮೇತ ಬಹಿರಂಗ ಪಡಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಡಿಕೆಶಿ ಅವರೇ ಬ್ಲ್ಯಾಕ್‌ಮೇಲ್ ಮಾಡಬೇಕು, ಅವರನ್ನು ಯಾರೂ ಬ್ಲ್ಯಾಕ್‌ಮೇಲ್ ಮಾಡಲಾಗಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಅವರು ರಾಜ್ಯ ರಾಜಕಾರಣಕ್ಕೆ ಬರುತ್ತಿದ್ದು, ಬರಲಿ ಅವರಿಗೆ ಶುಭವಾಗಲಿ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ: BBMP Bill Payment : ಬ್ಲ್ಯಾಕ್‌ಮೇಲ್‌ಗೆಲ್ಲ ಬಗ್ಗಲ್ಲ, ಕೆಲಸ ಮಾಡಿದವರಿಗೆ ಮಾತ್ರ ಬಿಲ್‌ ಪಾವತಿ: ಡಿಕೆಶಿ

ಬೆಂಗಳೂರು ಸೇರುವ ನಾಲ್ಕು ಭಾಗದಲ್ಲೂ ಟನಲ್ ರಸ್ತೆ ನಿರ್ಮಾಣ ಮಾಡಲಾಗುವುದು. ಇದರ ಬಗ್ಗೆ ನಮ್ಮ ಬಳಿ ಪ್ಲ್ಯಾನ್ ಇದೆ. ಸಿಂಗಾಪುರ ರೀತಿಯಲ್ಲಿ ಇಲ್ಲಿ ಮಾಡಲು ಆಗಲ್ಲ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

Exit mobile version