Site icon Vistara News

Sankey Tank: ಬಿಬಿಎಂಪಿಯಲ್ಲಿ ಆಪ್‌ ಅಧಿಕಾರಕ್ಕೆ ಬಂದರೆ ಸ್ಯಾಂಕಿ ಟ್ಯಾಂಕ್‌ ರಸ್ತೆ ಅಗಲೀಕರಣ, ಮೆಲ್ಸೇತುವೆ ನಿರ್ಮಾಣ ಇಲ್ಲ: ಪೃಥ್ವಿ ರೆಡ್ಡಿ

No sanky tank road widening flyover construction if AAP comes to power in BBMP says Prithvi Reddy

ಬೆಂಗಳೂರು: ಸ್ಯಾಂಕಿ ಟ್ಯಾಂಕ್‌ (Sankey Tank) ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಹಾಗೂ ರಸ್ತೆ ಅಗಲೀಕರಣ ಮಾಡುವ ಬಿಬಿಎಂಪಿ ನಿರ್ಧಾರವನ್ನು ಆಮ್‌ ಆದ್ಮಿ ಪಾರ್ಟಿ ತೀವ್ರವಾಗಿ ವಿರೋಧಿಸಿದ್ದು, ಬಿಬಿಎಂಪಿಯಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ರದ್ದುಪಡಿಸಿ ಜನರ ಬಯಕೆ ಹಾಗೂ ಅಗತ್ಯಕ್ಕೆ ತಕ್ಕಂತೆ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ನೀಡುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪೃಥ್ವಿ ರೆಡ್ಡಿ, ಪರಿಸರದ ಮೇಲಾಗುವ ದುಷ್ಪರಿಣಾಮ ಹಾಗೂ ಯೋಜನೆಯಲ್ಲಿನ ಲೋಪದೋಷಗಳನ್ನು ಪರಿಗಣಿಸಿ, ಸ್ಯಾಂಕಿ ಟ್ಯಾಂಕ್‌ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣವನ್ನು ವಿರೋಧಿಸುವ ಜನರ ಜತೆ ನಾವು ನಿಲ್ಲಲಿದ್ದೇವೆ. ಈಗಾಗಲೇ ಇಂತಹ ಅನೇಕ ಯೋಜನೆಗಳು ನಗರಕ್ಕೆ ಸಾಕಷ್ಟು ಹಾನಿ ಮಾಡಿದ್ದು, ಅವುಗಳ ಸಾಲಿಗೆ ಮತ್ತೊಂದನ್ನು ಸೇರ್ಪಡೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Saradha scam case : ಪಿ.ಚಿದಂಬರಂ ಪತ್ನಿ ನಳಿನಿ ಆಸ್ತಿ ಮುಟ್ಟುಗೋಲು

ನಗರದ ಯೋಜನೆಯನ್ನು ಮಹಾನಗರ ಯೋಜನಾ ಸಮಿತಿಯು ರೂಪಿಸಬೇಕು ಹಾಗೂ ಮೊಬಿಲಿಟಿ ಯೋಜನೆಗಳನ್ನು ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ಪ್ರಾಧಿಕಾರವು ಗುರುತಿಸಿ, ಯೋಜನೆ ರೂಪಿಸಬೇಕು. ಬಿಬಿಎಂಪಿ ಬಳಿ ಇಂತಹ ಮೂಲಸೌಕರ್ಯ ಯೋಜನೆಗಳನ್ನು ಸಿದ್ಧಪಡಿಸಲು ಬೇಕಾದ ಜ್ಞಾನವಾಗಲಿ ಅಥವಾ ಸಾಮರ್ಥ್ಯವಾಗಲಿ ಇಲ್ಲ ಎಂಬುದು ಈ ಹಿಂದಿನ ಯೋಜನೆಗಳಿಂದ ಸಾಬೀತಾಗಿದೆ. ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಮೇಲ್ಸೇತುವೆ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಕೊಂಡರೆ ಅದು ಮತ್ತೊಂದು ದುರಂತವಾಗಲಿದೆ ಎಂದು ಪೃಥ್ವಿ ರೆಡ್ಡಿ ಹೇಳಿದರು.

ಕರ್ನಾಟಕದ ಬಿಜೆಪಿ ಸರ್ಕಾರವು ಕಾನೂನನ್ನು ಗೌರವಿಸಬೇಕು. ಎಂಪಿಸಿ ಸದಸ್ಯರನ್ನು ನೇಮಕ ಮಾಡಿಕೊಂಡು, ನಗರ ಪ್ರದೇಶದ ಯೋಜನೆ ರೂಪಿಸುವ ಹೊಣೆಗಾರಿಕೆಯನ್ನು ನೀಡಬೇಕು. ರಸ್ತೆ, ಸಾರಿಗೆ, ನೀರು, ವಸತಿ ಮುಂತಾದ ಯೋಜನೆಗಳನ್ನು ಇಲಾಖೆಗಳು ಅಥವಾ ಏಜೆನ್ಸಿಗಳಿಂದ ಮಾಡಿಸುವ ಬದಲು ಎಂಪಿಸಿಯಿಂದ ಮಾಡಿಸಬೇಕು. ಸಾರಿಗೆ ವಲಯದ ಯೋಜನೆಗಳ ಪ್ರಸ್ತಾವನೆಗಳು ಏಜೆನ್ಸಿ ಅಭಿವೃದ್ಧಿಪಡಿಸಿದ ಸೂಕ್ತ ಮೊಬಿಲಿಟಿ ಯೋಜನೆಯ ಆಧಾರದಲ್ಲಿ ಬಿಎಂಎಲ್‌ಟಿಎಯಿಂದ ಸಿದ್ಧಗೊಳ್ಳಬೇಕು ಎಂದು ಪೃಥ್ವಿ ರೆಡ್ಡಿ ಅಭಿಪ್ರಾಯಪಟ್ಟರು.

ಚುನಾಯಿತ ಸರ್ಕಾರಗಳು ಮೊದಲು ಜನರ ಭಾವನೆಗಳನ್ನು ಗೌರವಿಸಬೇಕು. ಈ ಯೋಜನೆಯು ಇದರಲ್ಲಿ ವಿಫಲವಾಗಿದ್ದು, ಸ್ಥಳೀಯ ಜನರಿಂದ ಹಲವು ಕಾರಣಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಯೋಜನೆಯ ಪ್ರಸ್ತಾವನೆಯನ್ನು ಸಿದ್ಧಪಡಿಸುವಾಗ ಈ ಜನರನ್ನು ಸಂಪರ್ಕಿಸಿ ಅಭಿಪ್ರಾಯ ಕೇಳಲಾಗಿಲ್ಲ. ಈ ರೀತಿ ಜನರ ಅಭಿಪ್ರಾಯವನ್ನೂ ನಿರ್ಲಕ್ಷಿಸಿ ಯೋಜನೆಯ ಪ್ರಸ್ತಾವನೆ ರೂಪಿಸುವುದನ್ನು ಆಮ್‌ ಆದ್ಮಿ ಪಾರ್ಟಿಯ ಕರ್ನಾಟಕ ಘಟಕ ವಿರೋಧಿಸುತ್ತದೆ ಎಂದು ಪೃಥ್ವಿ ರೆಡ್ಡಿ ಹೇಳಿದರು.

ಇದನ್ನೂ ಓದಿ: Kiccha Sudeep: ಸುದೀಪ್‌ಗೆ ಪಕ್ಷ ಸೇರುವಂತೆ, ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿಲ್ಲ: ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ

ಬಿಬಿಎಂಪಿಯಲ್ಲಿ ಆಮ್‌ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ರದ್ದು ಪಡಿಸುತ್ತೇವೆ. ಜನರ ಅಗತ್ಯ ಹಾಗೂ ಬಯಕೆಗೆ ತಕ್ಕಂತೆ ವಿಶ್ವದರ್ಜೆಯ ಮೂಲ ಸೌಕರ್ಯಗಳನ್ನು ಆಮ್‌ ಆದ್ಮಿ ಪಾರ್ಟಿಯು ನಮ್ಮ ಬೆಂಗಳೂರಿಗೆ ನೀಡಲಿದೆ. ದೆಹಲಿ ಹಾಗೂ ಪಂಜಾಬ್‌ ಜನರು ಆಮ್‌ ಆದ್ಮಿ ಪಾರ್ಟಿಯ ಅಭಿವೃದ್ಧಿಯನ್ನು ನೋಡಿದ್ದು, ಕರ್ನಾಟಕದಲ್ಲೂ ಅಂತಹದೇ ಅಭಿವೃದ್ಧಿ ಕಾರ್ಯಗಳು ಜಾರಿಗೆ ಬರಲಿವೆ ಎಂದು ಪೃಥ್ವಿ ರೆಡ್ಡಿ ಹೇಳಿದರು.

Exit mobile version