ಕೊಡಗು: ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಕೊಡಗಿಗೆ ಭೇಟಿ ನೀಡಿದಾಗ ಮಾಂಸದೂಟ (Non Veg) ಸೇವನೆ ಮಾಡಿಲ್ಲ ಎಂದು ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮಾಂಸಾಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ತೆರಳಿರುವ ಸುದ್ದಿ ಹೆಚ್ಚು ಸದ್ದು ಮಾಡುತ್ತಿದೆ. ಅಂದು ಸಿದ್ದರಾಮಯ್ಯ ಅವರು ಮಾಂಸಾಹಾರ ತಿಂದಿಲ್ಲ. ಬದಲಿಗೆ ಮಳೆಗಾಲದ ಕೊಡಗಿನ ವಿಶೇಷ ಕಣಿಲೆ ಮತ್ತು ಅಕ್ಕಿರೊಟ್ಟಿ ತಿಂದಿದ್ದಾರೆ. ಅದು ಬಿಟ್ಟರೆ ಅನ್ನ, ತರಕಾರಿ ಸಾಂಬಾರು ಸೇವನೆ ಮಾಡಿದ್ದು, ಸ್ವತಃ ನಾನೇ ಅವರಿಗೆ ಊಟ ಬಡಿಸಿದ್ದೇನೆ ಎಂದಿದ್ದಾರೆ.
ಆಗಸ್ಟ್ 18ರಂದು ಕೊಡಗು ಜಿಲ್ಲೆಗೆ ಸಿದ್ದರಾಮಯ್ಯ ಭೇಟಿ ನೀಡಿದಾಗ ಮಡಿಕೇರಿಯ ಸರ್ಕ್ಯೂಟ್ ಹೌಸ್‌ನಲ್ಲಿ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಮನೆಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಅವರಿಗಾಗಿ ನಾಟಿ ಕೋಳಿ ಸಾರು, ರಾಗಿ ಮುದ್ದೆ, ಅನ್ನ, ತರಕಾರಿ ಸಾರು ಮಾಡಲಾಗಿತ್ತು. ಮಾಂಸದೂಟ ತಿಂದು ಬಳಿಕ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂಬ ವಿಡಿಯೊ ವೈರಲ್ ಆಗಿತ್ತು. ಆದರೆ ಮಾಂಸಾಹಾರ ತಿಂದು ಅವರು ದೇವಸ್ಥಾನಕ್ಕೆ ಹೋಗಿಲ್ಲವೆಂದು ವೀಣಾ ಸ್ಪಷ್ಟಪಡಿಸಿದ್ದಾರೆ.
ಕಾರಿಗೆ ಮೊಟ್ಟೆ ಎಸೆತ
ಸಿದ್ದರಾಮಯ್ಯನವರು ಕೊಡಗಿಗೆ ಬರುವ ಸಂದರ್ಭದಲ್ಲಿ ಬಿಜೆಪಿಗರು ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದಿರುವ ವೀಣಾ ಅಚ್ಚಯ್ಯ, ಒಬ್ಬ ವಿಪಕ್ಷ ನಾಯಕನಿಗೆ ಸಿಎಂ ಅಷ್ಟೇ ಗೌರವ ಇದೆ. ಸಿದ್ದರಾಮಯ್ಯ ಅವರಿಗೆ ಗೌರವ ತೋರಬೇಕಿತ್ತು. ಇದು ಕೊಡಗಿನ ಜನತೆ ತಲೆ ತಗ್ಗಿಸುವ ಸಂಗತಿ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕೊಡಗಿಗೆ ಯಾರೇ ಬಂದರೂ ಅವರನ್ನು ಮರ್ಯಾದೆಯಿಂದ ಕಾಣುವ ವ್ಯವಸ್ಥೆ ನಮ್ಮದು. ಆದರೆ ಈ ರೀತಿಯ ನೀಚ ಘಟನೆಗಳು ಖಂಡನೀಯ, ಇದರ ಹಿಂದಿರುವವರನ್ನು ಕಂಡು ಹಿಡಿದು ತಕ್ಕ ಶಾಸ್ತಿ ಮಾಡುವಂತೆ ವೀಣಾ ಅಚ್ಚಯ್ಯ ಒತ್ತಾಯಿಸಿದ್ದಾರೆ. ಜತೆಗೆ ಪೊಲೀಸ್ ಇಲಾಖೆ ಎಚ್ಚರ ವಹಿಸಿದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಆದರೆ ಪೊಲೀಸ್ ಇಲಾಖೆಯನ್ನು ಕೂಡ ತಮ್ಮ ಕೈಗೊಂಬೆಯಾಗಿ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮೊಟ್ಟೆ ಎಸೆದ ಸಂಪತ್ ಕಾಂಗ್ರೆಸ್ ಕಾರ್ಯಕರ್ತ ಎಂಬ ಪ್ರಶ್ನೆಗೆ ಉತ್ತರಿಸಿ, ಆತ ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ ಕಾಂಗ್ರೆಸ್‌ನ ಯಾವುದೇ ಸಭೆ ಸಮಾರಂಭಗಳಿಗೆ ಏಕೆ ಬಂದಿಲ್ಲ? ಕಾಂಗ್ರೆಸ್ ಕಾರ್ಯಕರ್ತನೇ ಆಗಿದ್ದರೆ ನಮ್ಮೊಂದಿಗೆ ಇರಬಹುದಾಗಿತ್ತು. ಬಿಜೆಪಿ ಜತೆ ನಿಂತು ಏಕೆ ಮೊಟ್ಟೆ ಹೊಡೆದ? ಸಂಪತ್, ಶಾಸಕ ಅಪ್ಪಚ್ಚು ರಂಜನ್ ಅವರ ಶಿಷ್ಯ ಎಂದು ಗೊತ್ತಿದೆ. ಎಲ್ಲೋ ನಿಂತು ಕಾಂಗ್ರೆಸ್ ಶಲ್ಯ ಹಾಕಿಕೊಂಡ ಮಾತ್ರಕ್ಕೆ ಆತನೇನು ಕಾಂಗ್ರೆಸ್ ಕಾರ್ಯಕರ್ತನೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು?: ಸಮರ್ಥಿಸಿಕೊಂಡ ಸಿದ್ದರಾಮಯ್ಯ