ಕೊಡಗು: ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯರ ಮಾಂಸದೂಟ (Non Veg) ಮತ್ತೆ ಸದ್ದು ಮಾಡಿದೆ. ನಾಟಿ ಕೋಳಿ ಸಾರು ತಿಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ಚರ್ಚೆ ಈಗ ಆರಂಭವಾಗಿದ್ದು, ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಆಗಸ್ಟ್ 18ರಂದು ಕೊಡಗು ಜಿಲ್ಲೆಗೆ ಸಿದ್ದರಾಮಯ್ಯ ಭೇಟಿ ನೀಡಿದ್ದಾಗ ಮಡಿಕೇರಿಯ ಸರ್ಕ್ಯೂಟ್ ಹೌಸ್‌ನಲ್ಲಿ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಮನೆಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಿದ್ದರಾಮಯ್ಯ ಅವರಿಗಾಗಿ ನಾಟಿ ಕೋಳಿ ಸಾರು, ರಾಗಿ ಮುದ್ದೆ, ಅನ್ನ, ತರಕಾರಿ ಸಾರು ಮಾಡಲಾಗಿತ್ತು. ಮಾಂಸದೂಟ ತಿಂದು ಬಳಿಕ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆದರೆ, ಆಗ ಈ ವಿಷಯ ಸುದ್ದಿಯಾಗಿರಲಿಲ್ಲ. ಈಗ ನಾನ್ ವೆಜ್ ತಿಂದಿರುವ ಫೋಟೊ ಹಾಗೂ ಬಳಿಕ ಅಲ್ಲಿಂದ ದೇವಸ್ಥಾನಕ್ಕೆ ಹೋಗಿರುವ ವಿಡಿಯೊ ವೈರಲ್ ಆಗಿದೆ.
ನನ್ನ ಮನಸ್ಸಿಗೆ ನೋವು ಆಯಿತು
ಸಿದ್ದರಾಮಯ್ಯರ ನಡೆಗೆ ಮಾಜಿ ಸ್ಪೀಕರ್, ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಅವರು ಅಸಮಾಧಾನ ಹೊರಹಾಕಿದ್ದಾರೆ. ಹಿಂದುಗಳ ನಂಬಿಕೆ, ಭಾವನೆಗೆ ನೋವು ಮಾಡುವುದೇ ಸಿದ್ದರಾಮಯ್ಯರ ಕೆಲಸ ಎಂದಿರುವ ಅವರು, ಸಿದ್ದರಾಮಯ್ಯರ ನಡೆಯಿಂದ ನನ್ನ ಮನಸಿಗಂತೂ ತುಂಬಾ ನೋವಾಗಿದೆ. ಅವರು ಆತ್ಮ ಮುಟ್ಟಿ ಯೋಚನೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ಕಾಂಗ್ರೆಸಿಗರಿಗೆ ದೇವಸ್ಥಾನ ಸಂಸ್ಕೃತಿ ಇಲ್ಲ; ಅಪ್ಪಚ್ಚು ರಂಜನ್ ಕಿಡಿ
ಕಾಂಗ್ರೆಸ್ ಅವರಿಗೆ ಯಾವ ಸಂಸ್ಕೃತಿಯೂ ಇಲ್ಲ, ದೇವಸ್ಥಾನ ಸಂಸ್ಕೃತಿಯಂತೂ ಇಲ್ಲವೇ ಇಲ್ಲ ಎಂದು ಶಾಸಕ ಅಪ್ಪಚ್ಚು ರಂಜನ್ ಗರಂ ಆಗಿದ್ದಾರೆ. ಸಿದ್ದರಾಮಯ್ಯ ಈ ಹಿಂದೆ ಧರ್ಮಸ್ಥಳಕ್ಕೆ ಮೀನು, ಮಾಂಸ ತಿಂದುಕೊಂಡು ಹೋಗಿದ್ದರೂ, ಈಗ ಮಡಿಕೇರಿಯಲ್ಲಿ ಮಾಂಸ ತಿಂದು ಅಂದೇ ಕೊಡ್ಲಿಪೇಟೆ ಬಸವೇಶ್ವರ ದೇವಾಲಯಕ್ಕೆ ಹೋಗಿದ್ದಾರೆ. ಇವರಿಗೆ ದೇವರ ಮೇಲೆ ಭಕ್ತಿ ಇದ್ಯಾ? ಇವರೆಲ್ಲ ದೇವಸ್ಥಾನಕ್ಕೆ ಯಾಕೆ ಹೋಗುವುದು ಎಂದು ಕಿಡಿಕಾರಿದ್ದಾರೆ.
ಈ ಹಿಂದೆಯೂ ವಿವಾದಕ್ಕೆ ಗುರಿಯಾಗಿದ್ದರು
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ೨೦೧೭ರಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡುವ ಮುನ್ನ ಮೀನು ಊಟ ಮಾಡಿದ್ದರು ಎಂಬುದು ತೀವ್ರ ವಿವಾದವನ್ನು ಹುಟ್ಟುಹಾಕಿತ್ತು. ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆಂದು ತೀವ್ರ ಚರ್ಚೆಗಳು ನಡೆದು ಅವರ ನಡೆ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಇದಲ್ಲದೆ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದ ವೇಳೆಯೂ ಅವರು ಮಾಂಸದೂಟ ಮಾಡಿ ಹೋಗಿದ್ದರು ಎಂಬ ಆರೋಪ ಕೇಳಿಬಂದಿದ್ದಲ್ಲದೆ, ತೀವ್ರ ವಿಷಯ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ | ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದದ್ದು ಬಿಜೆಪಿ ಕಾರ್ಯಕರ್ತನಲ್ಲ, ಕಾಂಗ್ರೆಸ್ ಕಾರ್ಯಕರ್ತ! ಹಾಗಿದ್ದರೆ ಎಸೆದಿದ್ಯಾಕೆ?