Site icon Vistara News

ಬೆಂಗಳೂರಿನಲ್ಲಿ ಆರ್‌ಬಿಐ ನಿಯಮ ಉಲ್ಲಂಘಿಸಿ ನೋಟು ನಗದೀಕರಣ; ಇಬ್ಬರಿಗೆ 4 ವರ್ಷ ಜೈಲು!

Notes

Note Encashment Case In Bengaluru; Two Jailed For Four Years

ಬೆಂಗಳೂರು: ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ನಿಯಮಗಳನ್ನು ಉಲ್ಲಂಘಿಸಿ ನೋಟುಗಳನ್ನು ನಗದೀಕರಣ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯವು (CBI Special Court) ಇಬ್ಬರು ಆರೋಪಿಗಳಿಗೆ ತಲಾ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ನೋಟು ನಗದೀಕರಣ ಮಾಡಿದ ಎಸ್.‌ ಗೋಪಾಲಯ್ಯ ಹಾಗೂ ಎಲ್‌ಐಸಿ ಏಜೆಂಟ್‌ ಕೆ.ರಾಘವೇಂದ್ರ ಎಂಬುವರಿಗೆ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.

2016ರಲ್ಲಿ ಕೇಂದ್ರ ಸರ್ಕಾರವು ಐನೂರು ಹಾಗೂ ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಸಂದರ್ಭದಲ್ಲಿ ನಿಷೇಧಿತ ಕರೆನ್ಸಿಗಳ ನಗದೀಕರಣಕ್ಕೆ ಆರ್‌ಬಿಐ ಹಲವು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆದರೆ, ಇಬ್ಬರೂ ಆರ್‌ಬಿಐ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ನೋಟುಗಳನ್ನು ನಗದೀಕರಣ ಮಾಡಿಕೊಂಡಿದ್ದರು. ಹಾಗಾಗಿ, ಸಿಬಿಐ ನ್ಯಾಯಾಲಯವು ಇಬ್ಬರಿಗೂ ಜೈಲು ಶಿಕ್ಷೆಯ ಜತೆಗೆ ಭಾರಿ ದಂಡ ವಿಧಿಸಿದೆ. ಎಸ್‌.ಗೋಪಾಲಯ್ಯಗೆ 2.10 ಲಕ್ಷ ರೂ. ಹಾಗೂ ರಾಘವೇಂದ್ರಗೆ 1.6 ಲಕ್ಷ ರೂ. ದಂಡ ವಿಧಿಸಿದೆ.

money guide

ಮಾರ್ಗಸೂಚಿ ಅನುಸರಿಸದೆ ನೋಟುಗಳನ್ನು ನಗದೀಕರಣ ಮಾಡಿಕೊಂಡ ಹಿನ್ನೆಲೆಯಲ್ಲಿ ಸಿಬಿಐ 2017ರ ಮಾರ್ಚ್‌ನಲ್ಲಿ ಈಗ ಶಿಕ್ಷೆಗೆ ಗುರಿಯಾಗಿರುವ ಇಬ್ಬರು ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿತ್ತು. ತನಿಖೆ ವೇಳೆ ಇವರ ದುರುದ್ದೇಶ ಬಯಲಾಗಿತ್ತು. ತನಿಖೆ ಪೂರ್ಣಗೊಳಿಸಿದ್ದ ತಂಡವು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಅದರಂತೆ, ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿದೆ.

ಕೆಲ ತಿಂಗಳ ಹಿಂದಷ್ಟೇ, ರಾಷ್ಟ್ರೀಯ ತನಿಖಾ ದಳವು ನಕಲಿ ನೋಟು ಜಾಲದ ಮೇಲೆ ಮುಗಿಬಿದ್ದಿತ್ತು. ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಎನ್‌ಐಎ ಏಕಕಾಲದಲ್ಲಿ ದಾಳಿ ನಡೆಸಿದ್ದು, ಅದರಲ್ಲಿ ಕರ್ನಾಟಕದ ಬಳ್ಳಾರಿಯಲ್ಲೂ ಒಬ್ಬನನ್ನು ಸೆರೆ ಹಿಡಿದಿತ್ತು. ಬಳ್ಳಾರಿಯಲ್ಲಿ ಬಂಧಿತ ಆರೋಪಿಯನ್ನು ಮಹೇಂದ್ರ ಎಂದು ಗುರುತಿಸಲಾಗಿದ್ದು, ಆತನಿಂದ ಭಾರಿ ಪ್ರಮಾಣದ ನಕಲಿ ನೋಟು, ನೋಟು ತಯಾರಿಸುವ ಪೇಪರ್, ಪ್ರಿಂಟಿಂಗ್ ಮೆಷಿನ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಈತ 500, 200, ಹಾಗೂ 100 ರೂ ಮುಖಬೆಲೆಯ ನೋಟು ತಯಾರಿಸುತ್ತಿದ್ದ ಎಂದು ತಿಳಿದುಬಂದಿತ್ತು.

ಇದನ್ನೂ ಓದಿ: Fake Currency: ಬಳ್ಳಾರಿಯಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಇಬ್ಬರ ಬಂಧನ

Exit mobile version