Site icon Vistara News

High court order | ಅಶ್ಲೀಲ ವಿಡಿಯೊ ಅಪ್‌ಲೋಡ್‌: ಮೊಬೈಲ್‌ ಸಿಮ್‌ ನನ್ನದಲ್ಲ ಎಂದರೂ ಎಫ್‌ಐಆರ್‌ ರದ್ದಾಗಲ್ಲ!

porn site

ಬೆಂಗಳೂರು: ನಿಮ್ಮ ಹೆಸರಿನಲ್ಲಿ ಯಾರೋ ಮೊಬೈಲ್‌ ಸಿಮ್‌ ಖರೀದಿಸಿ ಅದರ ಮೂಲಕ ಅಶ್ಲೀಲ ವಿಡಿಯೊ ಅಪ್‌ಲೋಡ್‌ ಮಾಡಿದ್ದರೆ ಅದಕ್ಕೆ ನೀವೂ ಜವಾಬ್ದಾರರಾಗಿರಲೇಬೇಕು… ಹೀಗೆಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಮೊಬೈಲ್‌ ಯಾರ ಹೆಸರಲ್ಲಿದೆಯೋ ಅವರು ಕೂಡಾ ಈ ಕೃತ್ಯಕ್ಕೆ ಸಮಾನ ಜವಾಬ್ದಾರರಾಗುತ್ತಾರೆ ಮತ್ತು ಇದು ತಮ್ಮ ಹೆಸರಿನಲ್ಲಿ ಮೋಸದಿಂದ ಖರೀದಿಸಿದ ಸಿಮ್‌ ಎಂದು ಪ್ರೂವ್‌ ಮಾಡುವವರೆಗೆ ಅವರ ಮೇಲಿನ ಎಫ್‌ಐಆರ್‌ ರದ್ದು ಮಾಡಲಾಗದು ಎಂದು ಹೈಕೋರ್ಟ್‌ ಹೇಳಿದೆ. ದುಬೈನಲ್ಲಿರುವ ಮಹಿಳೆಯೊಬ್ಬರು ತಮ್ಮ ವಿರುದ್ಧ ಸಲ್ಲಿಸಲಾದ ಎಫ್‌ಐಆರ್‌ ರದ್ದುಪಡಿಸಲು ಕೋರಿದ್ದ ಅರ್ಜಿಯನ್ನು ಹೈಕೋರ್ಟ್‌ (High court order) ತಿರಸ್ಕರಿಸಿದೆ.

ಏನಿದು ಪ್ರಕರಣ?
ಕಳೆದ 13 ವರ್ಷಗಳಿಂದ ದುಬೈನಲ್ಲಿ ನೆಲೆಸಿರುವ ಹಾಜೀರಾ ಆಸ್ಮಾ ಅವರ ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಒಂದು ಎಫ್‌ಐಆರ್‌ ದಾಖಲಾಗಿತ್ತು. ಅವರ ಹೆಸರಿನಲ್ಲಿರುವ ಮೊಬೈಲ್‌ ಸಿಮ್‌ ಮೂಲಕ ಅಶ್ಲೀಲ ವಿಡಿಯೊ ಅಪ್‌ಲೋಡ್‌ ಆಗಿದೆ ಎನ್ನುವುದು ಅದರ ಸಾರಾಂಶ. ಆದರೆ, ತನ್ನ ಬೆಂಗಳೂರು ವಿಳಾಸವನ್ನು ಬಳಸಿ ಯಾರೋ ಸಿಮ್‌ ಕಾರ್ಡ್‌ ಪಡೆದು ಅದನ್ನು ದುರ್ಬಳಕೆ ಮಾಡಿದ್ದಾರೆ. ಹೀಗಾಗಿ ತಮ್ಮ ವಿರುದ್ಧದ ಎಫ್‌ಐಆರ್‌ನ್ನು ರದ್ದುಪಡಿಸಿ ಎಂದು ಮಹಿಳೆ ಕೋರಿದ್ದರು. ಆದರೆ, ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠ ಅದನ್ನು ವಜಾಗೊಳಿಸಿದೆ.

ಅರ್ಜಿ ವಜಾಗೊಳಿಸಲು ಕೋರ್ಟ್‌ ನೀಡಿದ ಕಾರಣವೇನು?
ಕೃತ್ಯಕ್ಕೆ ಬಳಕೆಯಾಗಿರುವ ಸಿಮ್ ಕಾರ್ಡ್ ಅನ್ನು ಅರ್ಜಿದಾರರೇ ಖರೀದಿಸಿದ್ದರೋ ಅಥವಾ ಪ್ರಕರಣದ ಮತ್ತೊಬ್ಬ ಆರೋಪಿಯಾಗಿರುವ ಮೊಹಮ್ಮದ್ ತಾಹಾ, ಅರ್ಜಿದಾರರ ಫೋಟೊ ಹಾಗೂ ಹೆಸರು ದುರ್ಬಳಕೆ ಮಾಡಿಕೊಂಡು ಸಿಮ್ ಖರೀದಿಸಿದ್ದಾರೋ ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ. ಅರ್ಜಿದಾರ ಮಹಿಳೆ ಪೊಲೀಸರ ಮುಂದೆ ಹಾಜರಾಗಿ ತಾವು ಯಾವುದೇ ಸಿಮ್ ಖರೀದಿಸಿಲ್ಲ, ತಮ್ಮ ಹೆಸರಿನಲ್ಲಿ ಮತ್ತೊಬ್ಬರು ಖರೀದಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ದೃಢಪಡಿಸಿದರೆ, ಪೊಲೀಸರು ಅವರ ಹೆಸರನ್ನು ತೆಗೆದು ಸಿಮ್ ಖರೀದಿಸಿದ ವ್ಯಕ್ತಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಯಾಗಿರುವುದರಿಂದ ಪ್ರಕರಣದಲ್ಲಿ ಅವರ ಹೆಸರನ್ನು ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಆಕೆಯೇ ಅಪರಾಧಿ ಎಂದರ್ಥವಲ್ಲ. ಅವರು ಶಂಕಿತ ಆರೋಪಿಯಷ್ಟೇ ಆಗಿದ್ದು, ತನಿಖೆಯ ಉದ್ದೇಶಕ್ಕೆ ಅವರ ಉಪಸ್ಥಿತಿ ಅಗತ್ಯವಾಗಿದೆ. ಆದ್ದರಿಂದ, ಈ ಹಂತದಲ್ಲಿ ಎಫ್ಐಆರ್ ರದ್ದುಪಡಿಸಲಾಗದು ಎಂದಿರುವ ನ್ಯಾಯಾಲಯ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಅರ್ಜಿದಾರರ ವಾದವೇನಾಗಿತ್ತು?
“ಹಾಜಿರಾ ಆಸ್ಮಾ ಅವರು ಕಳೆದ 13 ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದಾರೆ. ಹೀಗಿರುವಾಗ ಬೆಂಗಳೂರಿನ ಮನೆಯ ವಿಳಾಸ ನೀಡಿ ಸಿಮ್ ಖರೀದಿಸಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆಕೆಯ ಹೆಸರಿನಲ್ಲಿ ಬೇರೆಯವರು ಸಿಮ್ ಖರೀದಿಸಿದ್ದರೆ ಅದಕ್ಕೆ ಅರ್ಜಿದಾರರು ಜವಾಬ್ದಾರರಲ್ಲ. ಅವರ ವಿರುದ್ಧದ ತನಿಖೆ ಮುಂದುವರಿಸಿದರೆ ಅದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ. ಆದ್ದರಿಂದ, ಎಫ್ಐಆರ್ ರದ್ದುಪಡಿಸಬೇಕು” ಎಂದು ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಸಯ್ಯದ್‌ ಪೀರ್‌ ಉಲ್ಲಾ ಶಾ ಖಾದ್ರಿ ಹೇಳಿದ್ದರು.

ಮೂಲ ಪ್ರಕರಣ ಏನು?
ಅಪ್ರಾಪ್ತರ ನಗ್ನ ವಿಡಿಯೊಗಳನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿದ ಆರೋಪದಲ್ಲಿ ಬೆಂಗಳೂರು ಪೂರ್ವ ವಿಭಾಗದ ಸಿಇಎನ್ ಪೊಲೀಸರು 2021ರ ಜನವರಿ 16ರಂದು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67 ಹಾಗೂ 67(ಬಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಮೊಬೈಲ್ ಸೇವೆ ಒದಗಿಸುವ ಸಂಸ್ಥೆಯಿಂದ ಮಾಹಿತಿ ಪಡೆದ ಪೊಲೀಸರಿಗೆ ಹಾಜೀರಾ ಆಸ್ಮಾ ಅವರ ಬೆಂಗಳೂರಿನ ವಿಳಾಸ ನೀಡಿ ಖರೀದಿಸಿದ್ದ ಸಿಮ್ ಬಳಸಿ ವಿಡಿಯೊ ಅಪ್ಲೋಡ್ ಮಾಡಿರುವ ವಿಚಾರ ತಿಳಿದಿತ್ತು. ತನಿಖೆ ಆರಂಭಿಸಿದ್ದ ಪೊಲೀಸರು ಮೊಹಮ್ಮದ್ ತಾಹಾ ಎಂಬಾತನನ್ನು ಶಂಕಿತ ಆರೋಪಿಯಾಗಿ ಗುರುತಿಸಿದ್ದರು. ಆತ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದ. ಆಸ್ಮಾ ಅವರ ಮೇಲಿನ ಎಫ್‌ಐಆರ್‌ ರದ್ದತಿಗೆ ಕೋರ್ಟ್‌ ಸಮ್ಮತಿ ನೀಡಿಲ್ಲ.

ಇದನ್ನೂ ಓದಿ | Accident coverage | ಅಕ್ರಮ ಸಂಬಂಧದ ಮಗುವೇ ಆದರೂ ಅಪಘಾತ ವಿಮೆ ಪಡೆಯಲು ಅರ್ಹತೆ ಇದೆ ಎಂದ ಹೈಕೋರ್ಟ್‌

Exit mobile version