ಬೆಂಗಳೂರು: ರಾಜ್ಯದ ರಾಜಕಾರಣಿಗಳೆಲ್ಲ ಕುಖ್ಯಾತ ಕ್ರಿಮಿನಲ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯ (Santro Ravi case) ಭಯದಲ್ಲಿ ಮುಳುಗಿದ್ದಾರೆ ಎಂಬ ಆಪಾದನೆಗಳ ನಡುವೆಯೇ ಇದೀಗ ಮೈಸೂರಿನ ಒಡನಾಡಿ ಸಂಸ್ಥೆ ಆತನ ಕುಕೃತ್ಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಆರ್ಥಿಕ ವ್ಯವಹಾರಗಳ ತನಿಖಾ ಸಂಸ್ಥೆಗಳ ಗಮನ ಸೆಳೆದಿದೆ.
ಒಡನಾಡಿ ಸಂಸ್ಥೆಯು ಸ್ಯಾಂಟ್ರೋ ರವಿ ವಿರುದ್ದ ಪ್ರಧಾನಿ, ಗೃಹ ಸಚಿವರು, ವಾಣಿಜ್ಯ ಸಚಿವೆ ನಿರ್ಮಲಾ ಸೀತರಾಮನ್ ದೂರು ನೀಡಿದೆ. ಜತೆಗೆ ಸ್ಯಾಂಟ್ರೋ ರವಿ ವಿರುದ್ಧ ಐಟಿ, ಇಡಿ ಹಾಗೂ ಸಿಬಿಐ ಪ್ರತ್ಯೇಕವಾಗಿ ದೂರು ನೀಡಿದೆ.
ಒಡನಾಡಿ ಸಂಸ್ಥೆಯ ಪರಶುರಾಮ್ ಹಾಗೂ ಸ್ಟ್ಯಾನ್ಲಿ ಅವರು ಬೆಂಗಳೂರಲ್ಲಿ ದೂರು ನೀಡಿದ್ದು, ಮುಖ್ಯವಾಗಿ ಸ್ಯಾಂಟ್ರೋ ರವಿಯ ಸಂಪತ್ತು, ಆರ್ಥಿಕ ವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಸ್ಯಾಂಟ್ರೋ ರವಿ ಒಬ್ಬ ಗೂಂಡಾ ಕಾಯಿದೆಗೆ ಒಳಗಾಗಿದ್ದ ವ್ಯಕ್ತಿ, ಹೆಣ್ಣು ಮಕ್ಕಳನ್ನು ಅಕ್ರಮವಾಗಿ ಬಳಸಿಕೊಂಡು ಮಾನವ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದಾನೆ, ಹಣ, ಐಷಾರಾಮಿ ಜೀವನದ ಆಸೆ ತೋರಿಸಿ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ದಾನೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ಸ್ಯಾಂಟ್ರೋ ರವಿ ಯಾವುದೇ ನಿರ್ದಿಷ್ಟ ಕೆಲಸ ಮಾಡುತ್ತಿಲ್ಲ. ಆದರೆ, ದೊಡ್ಡ ಮೊತ್ತದ ಆರ್ಥಿಕ ವ್ಯವಹಾರಗಳನ್ನು ಮಾಡುತ್ತಾನೆ. ಕೋಟ್ಯಂತರ ರೂ. ಹಣ ಸಂಪಾದನೆ ಮಾಡಿದ್ದಾನೆ. ಕಾನೂನುಬಾಹಿರವಾಗಿ ಅಕ್ರಮವಾಗಿ ಹಣ ಸಂಗ್ರಹಣೆ ಮಾಡಿ ಮನೆಯಲ್ಲಿ ದಾಸ್ತಾನು ಮಾಡಿದ್ದಾನೆ, ಹಲವಾರು ಐಷಾರಾಮಿ ಮನೆ, ಸೈಟ್‌ಗಳನ್ನು ಮಾಡಿಕೊಂಡಿದ್ದಾನೆ, ಐಷಾರಾಮಿ ಕಾರುಗಳಿವೆ ಎಂಬೆಲ್ಲ ಲೆಕ್ಕಾಚಾರಗಳನ್ನು ಒದಗಿಸಿದೆ.
ಈತನ ಜೊತೆ ಐಎಎಸ್, ಐಪಿಎಸ್ ಅಧಿಕಾರಿಗಳು ಕೂಡಾ ಶಾಮೀಲಾಗಿರುವುದನ್ನು ಪೊಲೀಸ್ ಅಧಿಕಾರಿಗಳ ಜೊತೆ ನಡೆಸಿರೋ ವಾಟ್ಸಾಪ್ ಚಾಟ್ ಕಾಲ್ ಸಮೇತ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ದೂರಿನ ಬಗ್ಗೆ ಪ್ರಧಾನಿ ಮೋದಿ, ಅಮಿತ್ ಶಾ ಏನಾದರೂ ಕ್ರಮ ಕೈಗೊಳ್ಳುತ್ತಾರಾ, ಈ ಹಿರಿಯ ನಾಯಕರಿಗೂ ದೂರು ತಲುಪಿದೆ ಎಂಬ ಕಾರಣಕ್ಕಾಗಿಯಾದರೂ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತದಾ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ | Santro Ravi case | ಸ್ಯಾಂಟ್ರೋ ರವಿ ಮಾತು ಕೇಳಿ ಸಿಕ್ಕಾಕಿಕೊಂಡ ಕಾಟನ್‌ಪೇಟೆ ಇನ್ಸ್‌ಪೆಕ್ಟರ್: ಅಮಾನತು ಸಾಧ್ಯತೆ