ಬೆಂಗಳೂರು: ರಾಜ್ಯಸಭೆ ಸದಸ್ಯರಾಗಿ ಕರ್ನಾಟಕದಿಂದ ನಾಲ್ವರನ್ನು ಆಯ್ಕೆ ಮಾಡುವ ಚುನಾವಣೆಗೆ ಇನ್ನು 24 ಗಂಟೆಯಷ್ಟೆ ಉಳಿದಿದೆ. ಶುಕ್ರವಾರ ಬೆಳಗ್ಗೆಯಿಂದ ಮತದಾನ ಆರಂಭವಾಗಲಿದೆ. ಇದರ ಜತೆಗೆ, ನಾಲ್ಕನೇ ಅಭ್ಯರ್ಥಿಯನ್ನು ಗೆಲ್ಲಿಸುವ ಕುರಿತು ಕಾಂಗ್ರೆಸ್ ಹಾಗೂ ಜೆಡಿಎಸ್ ಪರಸ್ಪರರಿಗೆ ನೀಡಿದ್ದ ʼಓಪನ್ ಆಫರ್ʼಗಳ ವಾಯಿದೆ ಮುಕ್ತಾಯಕ್ಕೂ ಸಮಯ ಹತ್ತಿರವಾಗುತ್ತಿದೆ.
ಇದೀಗ ಸದಸ್ಯರಾಗಿರುವ ಕಾಂಗ್ರೆಸ್‌ನ ಜೈರಾಮ್ ರಮೇಶ್, ಬಿಜೆಪಿಯ ನಿರ್ಮಲಾ ಸೀತಾರಾಮನ್ ಅವರಿಗೆ ಅವೆರಡೂ ಪಕ್ಷಗಳು ಮತ್ತೆ ಅವಕಾಶ ಕಲ್ಪಿಸಿವೆ. ಇನ್ನು, ಕೆ.ಸಿ. ರಾಮಮೂರ್ತಿ ಹಾಗೂ 2021ರ ಸೆಪ್ಟೆಂಬರ್ 13ರಂದು ನಿಧನರಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ಸ್ಥಾನಕ್ಕೆ ಇಬ್ಬರನ್ನು ಆಯ್ಕೆ ಮಾಡಬೇಕಿದೆ. ಇದರಲ್ಲಿ ಬಿಜೆಪಿಯಿಂದ ನವರಸನಾಯಕ ಜಗ್ಗೇಶ್ ಆಯ್ಕೆಯಾಗುವುದು ಖಚಿತವಾಗಿದೆ. ಉಳಿದ ಒಂದು ಸ್ಥಾನಕ್ಕೆ ಅಂದರೆ ನಾಲ್ಕನೇ ರಾಜ್ಯಸಭೆ ಸ್ಥಾನಕ್ಕೆ ಮೂವರು ಪೈಪೋಟಿಯಲ್ಲಿದ್ದಾರೆ.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಸಾಧ್ಯ: ಬೊಮ್ಮಾಯಿ
ರಾಜ್ಯಸಭೆ ಚುನಾವಣೆಗೆ ನಾಲ್ಕನೇ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಯುತ್ತಿರುವಂತೆಯೇ ಕಾಂಗ್ರೆಸ್ ಅಚ್ಚರಿಯ ನಡೆ ಇಟ್ಟಿತ್ತು. ಅದಾಗಲೇ ಒಂದು ಸ್ಥಾನಕ್ಕೆ ಜೈರಾಮ್ ರಮೇಶ್ ಅವರ ಹೆಸರು ಘೋಷಿಸಿದ್ದ ಕಾಂಗ್ರೆಸ್, ಮತ್ತೊಬ್ಬ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಹಿರಿಯ ನಾಯಕ ರೆಹಮಾನ್ ಖಾನ್ ಪುತ್ರ ಮನ್ಸೂರ್ ಖಾನ್ ಅವರನ್ನು ಕಣಕ್ಕಿಳಿಸಿತು. ತಮ್ಮ ಬದ್ಧವೈರಿ ಜೆಡಿಎಸ್ ಅಭ್ಯರ್ಥಿ ಗೆಲ್ಲಬಾರದು ಎಂದು ಸಿದ್ದರಾಮಯ್ಯ ಅವರು ಹೂಡಿದ ತಂತ್ರ ಇದು ಎಂಬುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತು.
ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಅವಶ್ಯಕ ಹೆಚ್ಚುವರಿ ಮತಗಳನ್ನು ಜೆಡಿಎಸ್‌ಗೆ ನೀಡುವಂತೆ ದೇವೇಗೌಡರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಳಿಯೇ ಮಾತುಕತೆ ನಡೆಸಿದ್ದರು ಎನ್ನುವುದು ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತು. ಹೀಗೆ ನಡೆದಿದ್ದ ಮಾತುಕತೆಯನ್ನು ವಿಫಲಗೊಳಿಸಲು ಸಿದ್ದರಾಮಯ್ಯ ತಂತ್ರ ಹೂಡಿದ್ದು, ಇದರಿಂದಾಗಿ ಬಿಜೆಪಿ ಅಭ್ಯರ್ಥಿ ಲೆಹರ್‌ಸಿಂಗ್ ಸಿರೋಯಾ ಗೆದ್ದುಬರುತ್ತಾರೆ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಯವರು ಸಿದ್ದರಾಮಯ್ಯ ವಿರುದ್ಧ ಮಂಗಳವಾರ ಹರಿಹಾಯ್ದಿದ್ದರು.
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಬಳಿ 32 ಮತಗಳಿವೆ, ಕಾಂಗ್ರೆಸ್‌ನಲ್ಲಿ ಹೆಚ್ಚುವರಿ 24 ಮತಗಳಿವೆ. ಕಾಂಗ್ರೆಸ್ ಸದಸ್ಯರ ಎರಡನೇ ಪ್ರಾಶಸ್ತ್ಯದ ಮತಗಳಿಂದಲೂ ಎರಡನೇ ಅಭ್ಯರ್ಥಿ ಮನ್ಸೂರ್ ಖಾನ್ ಗೆಲ್ಲುವುದಿಲ್ಲ. ಜೆಡಿಎಸ್ ತನ್ನ ಎರಡನೇ ಪ್ರಾಶಸ್ತ್ಯದ ಮತವನ್ನು ಕಾಂಗ್ರೆಸ್‌ಗೆ ಕೊಟ್ಟರೂ ಪ್ರಯೋಜನ ಆಗುವುದಿಲ್ಲ. ಕಾಂಗ್ರೆಸ್‌ನ ಎರಡನೇ ಪ್ರಾಶಸ್ತ್ಯದ ಮತಗಳನ್ನು ಜೆಡಿಎಸ್‌ಗೆ ನೀಡಲಿ. ಈ ಮೂಲಕ ಬಿಜೆಪಿ ಅಭ್ಯರ್ಥಿಯ ಗೆಲುವನ್ನು ತಡೆಯಬಹುದು. ಈ ಪ್ರಸ್ತಾವನೆಯನ್ನು ಸ್ವೀಕರಿಸಿ ಎಂದು ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡಿದ್ದರು.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ಕೇಂದ್ರ ಸಚಿವ ಕಿಶನ್ ರೆಡ್ಡಿ ಉಸ್ತುವಾರಿ: ಎಲ್ಲರ ಅರ್ಜಿ ಊರ್ಜಿತ
ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದರು. ಈ ಹಿಂದೆ ದೇವೇಗೌಡರು ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಾಗ ಕಾಂಗ್ರೆಸ್ ಬೆಂಬಲ ನೀಡಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ್ದೆವು. ಅವರ ಸಂಖ್ಯೆ ಕಡಿಮೆ ಇದ್ದರೂ ನಾವು ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದೆವು. ಪ್ರತಿ ಬಾರಿ ನಾವೇ ಸೋಲಬೇಕೆ? ನಮ್ಮಿಂದ ಅಭ್ಯರ್ಥಿಯನ್ನು ಮೊದಲೇ ಕಣಕ್ಕಿಳಿಸಿದ್ದೇವೆ. ಅಲ್ಪಸಂಖ್ಯಾತ ಅಭ್ಯರ್ಥಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಜೆಡಿಎಸ್‌ಗೆ ಅಲ್ಪಸಂಖ್ಯಾತರ ಮೇಲೆ ಅಭಿಮಾನವಿದ್ದರೆ, ಕೋಮುವಾದಿ ಪಕ್ಷ ಗೆಲ್ಲಬಾರದು ಎಂಬ ಆಸೆಯಿದ್ದರೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕು ಎಂದು ಪ್ರಸ್ತಾವನೆ ಮುಂದಿಟ್ಟಿದ್ದಾರೆ.
ಇಬ್ಬರೂ ನಾಯಕರು ಪರಸ್ಪರ ಆಫರ್‌ಗಳನ್ನು ಮುಂದಿಟ್ಟು ಜಗಳವಾಡುತ್ತಿದ್ದಾರೆ. ಇಬ್ಬರ ಆಫರ್‌ಗಳೂ ಇನ್ನು ಕೆಲವೇ ಗಂಟೆಗಳಲ್ಲಿ ಮುಕ್ತಾಯವಾಗುತ್ತವೆ. ಇವೆರಡರಲ್ಲಿ ಯಾವುದೇ ಪಕ್ಷ ಮತ್ತೊಂದು ಪಕ್ಷದ ಆಫರ್ ಅನ್ನು ಒಪ್ಪಿದರೆ ಬಿಜೆಪಿ ಅಭ್ಯರ್ಥಿ ಸೋಲುವುದು ಅಸಾಧ್ಯ. ಆದರೆ ಈಗಿನ ಸನ್ನಿವೇಶದಲ್ಲಿ ಈ ಆಫರ್‌ಗಳು ಉಪಯೋಗಕ್ಕೆ ಬಾರದೆ ಮುಕ್ತಾಯವಾಗುವ ಲಕ್ಷಣಗಳೇ ಕಾಣುತ್ತಿದೆ. ಇದೆಕ್ಕೆಲ್ಲ ಸದ್ಯದಲ್ಲೆ ಉತ್ತರ ಸಿಗಲಿದೆ.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ಕಾಂಗ್ರೆಸ್ ಎರಡನೇ ಅಭ್ಯರ್ಥಿ ಕಣಕ್ಕೆ: JDS ಮೈತ್ರಿಗೆ ಸಿದ್ದು ಗುದ್ದು