ಶಿವಮೊಗ್ಗ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ (Karnataka Election 2023) ಆರಂಭವಾಗಿರುವ ಕಾರಣ ಚುನಾವಣೆ ಅಧಿಕಾರಿಗಳು ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ. ಮುಖ್ಯಮಂತ್ರಿಯವರ ಕಾರಿನಿಂದ ಹಿಡಿದು ಸಾಮಾನ್ಯರು, ಗಣ್ಯರು ಎನ್ನದೆ ಎಲ್ಲರ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಆ ಮೂಲಕ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಇನ್ನಿಲ್ಲದ ಶ್ರಮ ವಹಿಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ತುಮಕೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಲಿಕಾಪ್ಟರ್‌ಗಳನ್ನು ಚುನಾವಣೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಬಿಎಸ್‌ವೈ ಹೆಲಿಕಾಪ್ಟರ್ ತಪಾಸಣೆ
ಹೆಲಿಕಾಪ್ಟರ್‌ನಲ್ಲಿ ಶಿವಮೊಗ್ಗದ ಪ್ರವಾಸಿ ಮಂದಿರದ ಹೆಲಿಪ್ಯಾಡ್‌ಗೆ ಬಿ.ಎಸ್.ಯಡಿಯೂರಪ್ಪ ಅವರಿದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಲೇ ಚುನಾವಣೆ ಅಧಿಕಾರಿಗಳು ಅದನ್ನು ತಪಸಾಣೆ ಮಾಡಿದರು. ಅಲ್ಲದೆ, ಹೆಲಿಪ್ಯಾಡ್‌ನಿಂದ ಯಡಿಯೂರಪ್ಪ ಅವರನ್ನು ಕರೆದುಕೊಂಡು ಹೋಗಲು ತಂದಿದ್ದ ಕಾರನ್ನೂ ಅಧಿಕಾರಿಗಳು ತಪಾಸಣೆ ಮಾಡಿದರು. ಹೆಲಿಕಾಪ್ಟರ್ ಒಳಭಾಗ, ಹಿಂಬದಿ, ಲಗೇಜ್ ಕ್ಯಾಬಿನ್ ಸೇರಿ ಇಡೀ ಹೆಲಿಕಾಪ್ಟರ್‌ಅನ್ನು ಅಧಿಕಾರಿಗಳು ಪರಿಶೀಲಿಸಿದರು. ಹಾಗೆಯೇ, ಹೆಲಿಕಾಪ್ಟರ್ ಲ್ಯಾಂಡ್ ಆಗುವುದು ಮತ್ತು ತಪಾಸಣೆ ನಡೆಸುವುದನ್ನು ವಿಡಿಯೊ ಚಿತ್ರೀಕರಣ ಮಾಡಲಾಯಿತು.
ಡಿಕೆಶಿ ಹೆಲಿಕಾಪ್ಟರ್ ತಪಾಸಣೆ
ಚುನಾವಣೆ ಹಿನ್ನೆಲೆಯಲ್ಲಿ ತುಮಕೂರಿಗೆ ತೆರಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಲಿಕಾಪ್ಟರ್‌ಅನ್ನು ಕೂಡ ಚುನಾವಣೆ ಅಧಿಕಾರಿಗಳು ತಪಾಸಣೆ ಮಾಡಿದರು. ಚುನಾವಣೆ ನೀತಿ ಸಂಹಿತೆ ಜಾರಿ ಇರುವ ಕಾರಣ ಹೆಲಿಕಾಪ್ಟರ್‌ನಲ್ಲಿದ್ದ ಬ್ಯಾಗ್, ಪ್ರಥಮ ಚಿಕಿತ್ಸೆ ಕಿಟ್, ಕ್ಯಾಪ್ಟನ್‌ನ ಲಗೇಜ್ ಸೇರಿ ಹಲವೆಡೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚುನಾವಣೆ ಅಧಿಕಾರಿಗಳು, ಪೊಲೀಸರು ಕಣ್ಗಾವಲು ಇರಿಸಿದ್ದಾರೆ. ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಹಣ, ಮದ್ಯ ಸೇರಿ ಯಾವುದೇ ವಸ್ತುಗಳನ್ನು ಸಾಗಣೆ ಮಾಡುವುದನ್ನು ತಡೆಯಲು ಸಕಲ ಕ್ರಮ ಕೈಗೊಂಡಿದ್ದಾರೆ. ಆ ಮೂಲಕ ನೂರಾರು ಕೋಟಿ ರೂಪಾಯಿ ಮೌಲ್ಯದ ವಸ್ತುಗಳು, ನಗದನ್ನು ವಶಪಡಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರನ್ನೂ ಅಧಿಕಾರಿಗಳು ಪರಿಶೀಲಿಸಿದ್ದರು.
ಇದನ್ನೂ ಓದಿ: BJP Karnataka: ಬಿ.ಎಲ್. ಸಂತೋಷ್ ವಿರುದ್ಧ ಮಾತನಾಡಿದ್ದು ಶೆಟ್ಟರ್‌ಗೆ ಶೋಭೆಯಲ್ಲ: ಬಿ.ಎಸ್. ಯಡಿಯೂರಪ್ಪ