Site icon Vistara News

SCST ಮೀಸಲು| ಒಕ್ಕಲಿಗರಿಂದಲೂ ಮೀಸಲು ಹೆಚ್ಚಳ ಬೇಡಿಕೆ: 4%ನಿಂದ 12ಕ್ಕೆ ಏರಿಸಿ ಎಂದ ನಿರ್ಮಲಾನಂದನಾಥ ಶ್ರೀ

Nirmalanandanatha sree

ಕೋಲಾರ: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದ ಬೆನ್ನಿಗೇ ಉಳಿದ ಸಮುದಾಯಗಳಿಂದ ಮೀಸಲು ಹೆಚ್ಚಳದ ಬೇಡಿಕೆ ಬರಲಿದೆ ಎಂಬ ಅಭಿಪ್ರಾಯ ನಿಜವಾಗಿದೆ. ರಾಜ್ಯದ ಪ್ರಬಲ ಸಮುದಾಯಗಳಲ್ಲಿ ಒಂದಾದ ಒಕ್ಕಲಿಗರ ಸಮುದಾಯ ತಮಗಿರುವ ಮೀಸಲು ಕೋಟಾವನ್ನು ಶೇ. ೪ರಿಂದ ಶೇ. ೧೨ಕ್ಕೆ ಏರಿಸಬೇಕು ಎಂಬ ಹಕ್ಕೊತ್ತಾಯ ಮಂಡಿಸಿದೆ.

ನಮಗೆ ಶೇ. ೪ ಮೀಸಲಾತಿ ಸಾಕಾಗುವುದಿಲ್ಲ. ಅದನ್ನು ಶೇ. ೧೨ಕ್ಕೆ ಏರಿಸಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾಗಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಆಗ್ರಹಿಸಿದ್ದಾರೆ. ಕೋಲಾರದಲ್ಲಿ ಸೋಮವಾರ ವಕ್ಕಲಿಗರ ಸಮುದಾಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಭವನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಈ ಆಗ್ರಹ ಮಂಡಿಸಿದ್ದಾರೆ.

ರಾಜ್ಯ ಸರಕಾರ ಇತ್ತೀಚೆಗೆ ಪರಿಶಿಷ್ಟ ಜಾತಿಯ ಮೀಸಲನ್ನು ಶೇ. ೧೫ರಿಂದ ೧೭ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲು ಪ್ರಮಾಣವನ್ನು ಶೇ. ೩ರಿಂದ ೭ಕ್ಕೆ ಏರಿಸಿದೆ. ಈ ಬಗ್ಗೆ ಸರ್ವ ಪಕ್ಷ ಸಭೆ ಮತ್ತು ಸಂಪುಟದಲ್ಲಿ ಅನುಮತಿ ದೊರೆತಿದ್ದು, ಸದ್ಯವೇ ಗಜೆಟ್‌ ಅಧಿಸೂಚನೆಯೂ ಆಗಲಿದೆ. ಈ ಮೀಸಲಾತಿ ಹೆಚ್ಚಳದಿಂದ ಒಟ್ಟಾರೆ ಮೀಸಲಾತಿ ಪ್ರಮಾಣ ಶೇ. ೫೦ರ ನಿಗದಿತ ಗಡಿಯನ್ನು ಮೀರಲಿದೆ. ಇದಕ್ಕೆ ಸಾಂವಿಧಾನಿಕವಾಗಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದಾರೆ.

ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಸ್ವಾಮೀಜಿ ಅವರು ಮಾತನಾಡಿದ್ದಾರೆ.

ʻʻನಮಗೆ 4% ಮೀಸಲಾತಿ ಸಾಕುಗುವುದಿಲ್ಲ ಎಂಬ ಕೂಗು ಹಿಂದಿನಿಂದಲೂ ಇದೆ. ಆದರೆ, ಒಟ್ಟಾರೆ ಮೀಸಲಾತಿ ಶೇ. ೫೦ರ ಗಡಿಯನ್ನು ಮೀರಲಾಗದು ಎಂಬ ವಾದವಿತ್ತು. ಹಾಗಾಗಿ ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಮಾತನಾಡುವುದು ಬೇಡ ಎಂದು ಸುಮ್ಮನಿದ್ದೆವು. ಈಗ ಸಂವಿಧಾನದ ಚೌಕಟ್ಟಿನಲ್ಲೇ ಮೀಸಲಾತಿ ಹೆಚ್ಚಿಸುವುದಾದರೆ ನಮಗೂ ಕೊಡಿ ಎಂದು ನಾವು ಮನವಿ ಮಾಡುತ್ತೇವೆ. ನಮಗೂ 8% ಮೀಸಲಾತಿ ಹೆಚ್ಚಿಸಿ ಎನ್ನುವುದು ನಮ್ಮ ಬೇಡಿಕೆʼʼ ಎಂದು ಅವರು ಹೇಳಿದರು.

ʻಮೀಸಲಾತಿ ಹೆಚ್ಚಳದ ಬೇಡಿಕೆ ಬಂದಾಗ ಕೆಲವರು ನಾವು ಕೊಡಲಿಕ್ಕೆ ಇರುವವರು ಕೇಳಲಿಕ್ಕೆ ಇರುವವರು ಅಲ್ಲ ಎಂಬ ಮಾತು ಹೇಳಿದ್ದರು. ಆದರೆ, ಈಗ ಕೇಳುತ್ತೇವೆ ಮತ್ತು ಹಕ್ಕಿಗಾಗಿ ಧ್ವನಿ ಎತ್ತುವುದು ಅವಶ್ಯವಾದರೆ ಅದನ್ನೂ ಮಾಡುತ್ತೇವೆ. ಕಾನೂನು ಸಮ್ಮತವಾಗಿ ನಮ್ಮ ಬೇಡಿಕೆ ಈಡೇರದಿದ್ದರೆ ಹಂತ ಹಂತವಾಗಿ ಹೋರಾಟದ ರೂಪುರೇಷೆ ಸಿದ್ಧಗೊಳಿಸುತ್ತೇವೆ. ಇದಿಷ್ಟು ವಿಚಾರಗಳನ್ನು ತುಂಬ ಸೂಕ್ಷ್ಮವಾಗಿ ಹೇಳಿದ್ದೇವೆʼʼ ಎಂದು ಸ್ವಾಮೀಜಿ ತಿಳಿಸಿದರು.

ಡಿ.ಕೆ ಶಿವಕುಮಾರ್‌ ಪ್ರತಿಕ್ರಿಯೆ
ಈ ನಡುವೆ ಸ್ವಾಮೀಜಿ ಅವರ ಮಾತುಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ʻʻಅದರ ಬಗ್ಗೆ ಮಾತನಾಡೋಣ. ಅವರರವರ ಧರ್ಮದ ವಿಚಾರದಲ್ಲಿ ಸಮಾಜಗಳು ಬೇಡಿಕೆ ಇರುವುದು ತಪ್ಪೇನು ಅಲ್ಲ. ಅದರ ಬಗ್ಗೆ ಚರ್ಚೆಯಾಗಲಿʼʼ ಎಂದರು.

ಕೆಲವು ದಿನಗಳ ಹಿಂದೆ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷರಾದ ಎಚ್‌.ಸಿ. ಬಾಲಕೃಷ್ಣ ಅವರೂ ಒಕ್ಕಲಿಗರ ಮೀಸಲು ಹೆಚ್ಚಳದ ಬೇಡಿಕೆಯನ್ನು ಮುಂದಿಟ್ಟಿದ್ದರು. ಇದೀಗ ಶ್ರೀಗಳೇ ಮುಂಚೂಣಿಗೆ ಬಂದಿರುವುದರಿಂದ ಮುಂದೆ ಏನೇನಾಗಲಿದೆ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ | SCST ಮೀಸಲು ಲಾಭ ಪಡೆಯಲು ಕಾಂಗ್ರೆಸ್‌-JDS ಪೈಪೋಟಿ: ತಮ್ಮದೇ ಕೊಡುಗೆ ಎನ್ನುತ್ತಿರುವ ನಾಯಕರು

Exit mobile version