ಬೆಂಗಳೂರು: ರಾಜಧಾನಿಯಲ್ಲಿ ಓಲಾ, ಉಬರ್ ಆಟೋ ಸೇವೆ ಕುರಿತು ಸರಕಾರ ಮತ್ತು ಅಗ್ರಿಗೇಟರ್ ಸಂಸ್ಥೆಗಳ ನಡುವಿನ ಹಗ್ಗ ಜಗ್ಗಾಟ ಮತ್ತೆ ಮುಂದುವರಿದಿದೆ. ದರ ನಿಗದಿಗೆ ಸಂಬಂಧಿಸಿ ರಾಜ್ಯ ಹೈಕೋರ್ಟ್‌ನಲ್ಲಿ ಸೋಮವಾರ ಮಹತ್ವದ ವಿಚಾರಣೆ ಇತ್ತು. ಒಂದು ಮಹತ್ವದ ತೀರ್ಪು ಬರಬಹುದು ಎಂಬ ನಿರೀಕ್ಷೆಯೂ ಇತ್ತು. ಆದರೆ, ರಾಜ್ಯ ಸರಕಾರದ ನಿಲುವಿಗೆ ಅಗ್ರಿಗೇಟರ್ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನ. ೧೬ಕ್ಕೆ ಮುಂದೂಡಲಾಗಿದೆ.
ಓಲಾ ಮತ್ತು ಉಬರ್ ಅಗ್ರಿಗೇಟರ್ ಸಂಸ್ಥೆಗಳ ಸೇವೆಗೆ ಸಂಬಂಧಿಸಿ ಎರಡು ಪ್ರಮುಖ ವಿವಾದಗಳು ಹುಟ್ಟಿಕೊಂಡಿದ್ದವು. ಮೊದಲನೆಯದು ಈ ಎರಡೂ ಸಂಸ್ಥೆಗಳು ಕನಿಷ್ಠ ದರವನ್ನು ೧೦೦ ರೂ.ಗಳಿಗೆ ನಿಗದಿಪಡಿಸಿರುವುದು, ಎರಡನೆಯದು ಅನುಮತಿಯನ್ನೇ ಪಡೆಯದೆ ಆಟೋ ಸೇವೆ ಒದಗಿಸುತ್ತಿರುವುದು. ಅನುಮತಿಗೆ ಸಂಬಂಧಿಸಿ ತುಂಬ ಸಮಸ್ಯೆ ಇದ್ದಂತಿಲ್ಲ. ಅರ್ಜಿ ಸಲ್ಲಿಸಿದ ಬಳಿಕ ಅದರ ಪರಿಶೀಲನೆ ನಡೆಸಿ ಸರಕಾರ ತೀರ್ಮಾನವನ್ನು ತೆಗೆದುಕೊಳ್ಳಬಹುದು. ಆದರೆ, ದರಕ್ಕೆ ಸಂಬಂಧಿಸಿ ದೊಡ್ಡ ಮಟ್ಟದ ವಿವಾದವೇ ಹುಟ್ಟಿಕೊಂಡಿದೆ.
ಅಗ್ರಿಗೇಟರ್ ಸಂಸ್ಥೆಗಳು ಸರಕಾರ ನಿಗದಿಪಡಿಸಿದ ಆಟೋ ದರ ನೀತಿಯನ್ನು ಪಾಲಿಸದೆ ತಮ್ಮದೇ ಆದ ದರಗಳನ್ನು ನಿಗದಿಪಡಿಸಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಅದರಲ್ಲೂ ಕನಿಷ್ಠ ದೂರವನ್ನು ನಾಲ್ಕು ಕಿ.ಮೀ.ಗೆ ನಿಗದಿಪಡಿಸಿ, ಅದಕ್ಕೆ ೧೦೦ ರೂ.ಗಿಂತಲೂ ಹೆಚ್ಚು ದರ ನಿಗದಿ ಮಾಡಿದ್ದು ಗ್ರಾಹಕರನ್ನು ಕೆರಳಿಸಿತ್ತು.
ಈ ನಡುವೆ, ಸಾರಿಗೆ ಇಲಾಖೆ ಮತ್ತು ಅಗ್ರಿಗೇಟರ್ ಸಂಸ್ಥೆಗಳ ನಡುವಿನ ಮಾತುಕತೆ ಯಾವುದೇ ಫಲ ನೀಡಿರಲಿಲ್ಲ. ವಿವಾದ ಹೈಕೋರ್ಟ್ ಮೆಟ್ಟಿಲು ಏರಿದ್ದರಿಂದ ಸರಕಾರ ಮತ್ತು ಅಗ್ರಿಗೇಟರ್ ಸಂಸ್ಥೆಗಳು ಕೋರ್ಟ್ ಮುಂದೆಯೇ ತಮ್ಮ ವಾದವನ್ನು ಮಂಡಿಸುತ್ತಿವೆ.
ಇತ್ತೀಚೆಗೆ ಹೈಕೋರ್ಟ್ ಈ ಸಮಸ್ಯೆ ಪರಿಹಾರಕ್ಕಾಗಿ, ಚಾಲಕರ ಸಂಘಟನೆಗಳು ಮತ್ತು ಪ್ರಯಾಣಿಕರ ವೇದಿಕೆಗಳ ಸಭೆ ನಡೆಸಿ ಒಂದು ಪರಿಹಾರ ರೂಪಿಸಲು ಹೈಕೋರ್ಟ್ ಸರಕಾರಕ್ಕೆ ಸೂಚನೆ ನೀಡಿತ್ತು. ಆದರೆ, ಸಾರಿಗೆ ಇಲಾಖೆ ಇದುವರೆಗೂ ದರ ನಿಗದಿ ಮಾಡಿರಲಿಲ್ಲ. ಇದರ ಬಗ್ಗೆ ನಡೆದಿದ್ದ ಚರ್ಚೆ ಅಪೂರ್ಣವಾಗಿತ್ತು.
ಈ ನಡುವೆ, ಸರಕಾರ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಸಾರಿಗೆ ಇಲಾಖೆ ನಿಗದಿಪಡಿಸಿದ ದರಕ್ಕಿಂತ ಶೇ. ೧೦ರಷ್ಟು ಹೆಚ್ಚಿಸಲು ಮಾತ್ರ ಅವಕಾಶ ಎಂಬ ಅಂಶವನ್ನು ಉಲ್ಲೇಖ ಮಾಡಿತ್ತು.
ಹಗ್ಗ ಜಗ್ಗಾಟ: ಓಲಾ, ಉಬರ್ ಹೇಳುವುದೇನು?
ಈ ನಡುವೆ ಅರ್ಜಿ ವಿಚಾರಣೆಯ ವೇಳೆ, ಶೇಕಡಾ ೧೦ ಹೆಚ್ಚುವರಿ ದರ ನಿಗದಿಯಿಂದ ಯಾವುದೇ ಲಾಭವಿಲ್ಲ. ಇದರಿಂದ ಗ್ರಾಹಕರಿಗೆ ಸೇವೆ ಸಲ್ಲಿಸಲು ಸಾಧ್ಯವಿಲ್ಲ ಎಂಬ ವಾದವನ್ನು ಓಲಾ ಮತ್ತು ಉಬರ್ ಪರ ವಕೀಲರು ಮಂಡಿಸಿದ್ದರು. ನಿಗದಿತ ಆರಂಭಿಕ ಸ್ಥಳಕ್ಕೆ ತೆರಳಲು ಹೆಚ್ಚುವರಿ ದೂರ ಕ್ರಮಿಸಬೇಕಾಗುತ್ತದೆ. ಸಂಚಾರ ದಟ್ಟಣೆ ಇದ್ದಾಗ ದಾರಿ ಬದಲಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ನಿಗದಿತ ಮೊತ್ತದಲ್ಲಿ ಸಾಗಲು ಸಾಧ್ಯವಿಲ್ಲ ಎನ್ನುವುದು ಅದರ ವಾದ.
ನಾಲ್ಕು ವಾರ ಕಾಲಾವಕಾಶ ಕೇಳಿದ ಸರಕಾರ
ಅಗ್ರಿಗೇಟರ್ ಸಂಸ್ಥೆಗಳ ವಾದದ ಬಳಿಕ ಈ ವಿಚಾರಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಾಲ್ಕು ವಾರದ ಕಾಲಾವಕಾಶ ಕೋರಿತ್ತು. ಆದರೆ, ಅಷ್ಟು ದೀರ್ಘ ಕಾಲಾವಕಾಶ ನೀಡಲು ಒಪ್ಪದ ಹೈಕೋರ್ಟ್, ಐದು ದಿನದಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ಮುಂದಿನ ವಿಚಾರಣೆಯನ್ನು ನವೆಂಬರ್ ೧೬ಕ್ಕೆ ಮುಂದೂಡಿತು.
ಏನಿದು ವಿವಾದ?
ಓಲಾ, ಉಬರ್ ಮೊದಲಾದ ಸಂಸ್ಥೆಗಳು ಕಳೆದ ಆರು ವರ್ಷಗಳಿಂದ ಕರ್ನಾಟಕದಲ್ಲಿ ಆಟೋ-ರಿಕ್ಷಾಗಳ ಒಟ್ಟುಗೂಡುವಿಕೆಗೆ ಪರವಾನಗಿ ಇಲ್ಲದೆ ವ್ಯವಹಾರ ನಡೆಸಿವೆ. 2016 ರ ಕರ್ನಾಟಕ ಆನ್-ಡಿಮಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್ ನಿಯಮಗಳ ಅಡಿಯಲ್ಲಿ ಪರವಾನಗಿಗಳು ಅತ್ಯಗತ್ಯವಾಗಿರುತ್ತದೆ.
ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ಸ್ ನಿಯಮಗಳಡಿ ಟ್ಯಾಕ್ಸಿ ಸೇವೆ ಒದಗಿಸಲು ಓಲಾ ಮತ್ತು ಉಬರ್ ಕಂಪೆನಿಗಳಿಗೆ ಪರವಾನಗಿ ನೀಡಲಾಗಿದೆ. ಆದರೆ, ಪರವಾನಗಿ ಪಡೆಯದೆ ಆಟೋ ಸೇವೆ ಒದಗಿಸಲಾಗುತ್ತಿದೆ, ಜೊತೆಗೆ ಅಗ್ರಿಗೇಟರ್‌ಗಳು ಹೆಚ್ಚಿನ ಅನುಕೂಲಕ್ಕಾಗಿ ಶುಲ್ಕವನ್ನು ವಿಧಿಸುತ್ತಿದ್ದರು.
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಸಾರಿಗೆ ಇಲಾಖೆ, ಆ್ಯಪ್ ಆಧಾರಿತ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸುವ ವಿಚಾರವಾಗಿ ವಿವರಣೆ ಕೇಳಿ ಅಕ್ಟೋಬರ್ 6 ರಂದು ನೋಟಿಸ್ ನೀಡಿತ್ತು. ಸೇವೆ ಸ್ಥಗಿತಗೊಳಿಸಲು ಅ. 11ರಂದು ಸರ್ಕಾರ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರ ಕಂಪೆನಿಗಳು ಹೈಕೋರ್ಟ್ ಮೊರೆ ಹೋಗಿದ್ದವು, ಹೈಕೋರ್ಟ್ ಇದಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಹಮತದ ತೀರ್ಮಾನ ಕೈಗೊಳ್ಳುವಂತೆ ಸರಕಾರಕ್ಕೆ ಸೂಚಿಸಿತ್ತು. ಅದರ ವಿಚಾರಣೆ ಈಗ ನಡೆಯುತ್ತಿದೆ.