ಬೆಂಗಳೂರು: ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯನ್ನು ಕೊಲೆ ಮಾಡಿರುವುದು ನಗರದ ಎಚ್‌ಎಸ್ಆರ್ ಲೇಔಟ್ ಫುಡ್ ಡೇಸ್ ಸರ್ಕಲ್ ಬಳಿ ನಡೆದಿದೆ. ದಿವಂಗತ ಶ್ರೀನಿವಾಸನ್ ಎಂಬುವವರ ಪತ್ನಿ ಜಯಶ್ರೀ(60) ಕೊಲೆಯಾದ ವೃದ್ಧೆ.
ಶುಕ್ರವಾರ ರಾತ್ರಿ ಚಿನ್ನಾಭರಣಕ್ಕಾಗಿ ವೃದ್ಧೆಯ ಕೈಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಚ್‌ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧೆ ಕೊಲೆಯ ಬಗ್ಗೆ ಅಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಪ್ರತಿಕ್ರಿಯಿಸಿ, ಒಂಟಿಯಾಗಿ ವಾಸವಾಗಿದ್ದ ಮಹಿಳೆಯನ್ನು ಚಿನ್ನಾಭರಣಕ್ಕಾಗಿ ಕೊಲೆ ಮಾಡಲಾಗಿದೆ. ವೃದ್ಧೆಗೆ ಇಬ್ಬರು ಮಕ್ಕಳು ಇದ್ದು, ಒಬ್ಬರು ಕೆನಾಡದಲ್ಲಿ ಹಾಗೂ ಮತ್ತೊಬ್ಬರು ಬೆಂಗಳೂರಿನಲ್ಲೇ ವಾಸವಿದ್ದಾರೆ. ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದ್ದು, ಪ್ರಕರಣ ಕುರಿತು ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಕೊಲೆ ಮಾಡುತ್ತಾರೆ ಎಂದು ಹೇಳುತ್ತಿದ್ದ ಜಯಶ್ರೀ!
ಕೊಲೆಯಾದ ವೃದ್ಧೆ ಜಯಶ್ರೀ ಆಗಾಗ ಪೊಲೀಸ್ ಠಾಣೆಗೆ ಕರೆ ಮಾಡಿ ನನ್ನನ್ನು ಯಾರೋ ಕೊಲೆ ಮಾಡಲು ಬರುತ್ತಾರೆ ಎಂದು ಮಾಹಿತಿ ನೀಡಿದ್ದರು. ಹೀಗಾಗಿ ವಾರದಲ್ಲಿ ಎರಡು ದಿನ ಎಚ್ಎಸ್ಆರ್ ಲೇಔಟ್ ಪೊಲೀಸರು ವೃದ್ಧೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು. ಮೃತೆ ಜಯಶ್ರೀ ಪತಿ ಶ್ರೀನಿವಾಸನ್ ಪೊಲೀಸ್ ಅಧಿಕಾರಿಯಾಗಿದ್ದರು. ಅವರು ಕೇಂದ್ರ ಗೃಹ ಇಲಾಖೆಯ ಇಂಟರ್ ಸ್ಟೇಟ್ ಪೊಲೀಸ್ ವೈರ್‌ಲೆಸ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಶ್ರೀನಿವಾಸನ್ ಮೃತರಾದ ಬಳಿಕ ಜಯಶ್ರೀ ಮಕ್ಕಳಿದ್ದರೂ ಒಂಟಿಯಾಗಿ ಎಚ್‌ಎಸ್‌ಆರ್ ಲೇಔಟ್‌ನ ಮನೆಯಲ್ಲಿ ವಾಸವಾಗಿದ್ದರು.
ಇದನ್ನೂ ಓದಿ | Dowry Harassment | ಆನೇಕಲ್‌ನಲ್ಲಿ ಗೃಹಿಣಿಯ ಅನುಮಾನಾಸ್ಪದ ಸಾವು; ವರದಕ್ಷಿಣೆ ಕಿರುಕುಳದ ಆರೋಪ