Site icon Vistara News

Operation Ajay: ಇಸ್ರೇಲಿನಿಂದ ಬಂದಿಳಿದ ಮೊದಲ ವಿಮಾನ, ಐವರು ಕನ್ನಡಿಗರು ತಾಯ್ನಾಡಿಗೆ

operation ajay

ಹೊಸದಿಲ್ಲಿ: ಯುದ್ಧಗ್ರಸ್ತ ಇಸ್ರೇಲಿನಿಂದ (Israel palestine war) ಭಾರತೀಯರನ್ನು ಮರಳಿ ಕರೆತರುವ ʼಆಪರೇಶನ್‌ ಅಜಯ್‌ʼಗೆ (Operation Ajay) ಚಾಲನೆ ದೊರೆತಿದೆ. ಅಲ್ಲಿಂದ 212 ಭಾರತೀಯರನ್ನು ಹೊತ್ತ ಮೊದಲ ವಿಮಾನ ದೆಹಲಿ ತಲುಪಿದೆ.

ಇಸ್ರೇಲ್‌ನಿಂದ ಭಾರತೀಯರನ್ನು ಹೊತ್ತು ತಂದ ಏರ್ ಇಂಡಿಯಾ ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ಬಂದಿಳಿಯಿತು. ಭಾರತದ ನೆಲದಲ್ಲಿ ವಿಮಾನ ಇಳಿಯುತ್ತಿದ್ದಂತೆ ಪ್ರಯಾಣಿಕರು ʼಭಾರತ್‌ ಮಾತಾ ಕಿ ಜೈʼ ʼವಂದೇ ಮಾತರಂʼ ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು.

ಮುಂಜಾನೆ 5 ಗಂಟೆಗೆ ಬರಬೇಕಿದ್ದ ವಿಮಾನ ಒಂದು ಗಂಟೆ ತಡವಾಗಿ ಆಗಮಿಸಿತು. ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದಿಂದ ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನ 1140 ಹಾರಿತು.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ದೆಹಲಿ ವಿಮಾನ ನಿಲ್ದಾಣದಲ್ಲಿದ್ದು ಪ್ರಯಾಣಿಕರನ್ನು ಸ್ವಾಗತಿಸಿದರು. ಇಸ್ರೇಲ್‌ನಿಂದ ಬಂದಿರುವ ಕನ್ನಡಿಗರನ್ನು ಬರಮಾಡಿಕೊಳ್ಳಲು ರಾಜ್ಯದ ದೆಹಲಿ ಪ್ರತಿನಿಧಿ ಟಿ.ಬಿ ಜಯಚಂದ್ರ ವಿಮಾನ ನಿಲ್ದಾಣದಲ್ಲಿದ್ದರು. ದೆಹಲಿಯಿಂದ ಕರ್ನಾಟಕಕ್ಕೆ ತೆರಳಲು ಸಾರಿಗೆ ವೆಚ್ಚದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಆಪರೇಷನ್ ಅಜಯ್ ಮೂಲಕ ಭಾರತೀಯರ ಮೊದಲ ಬ್ಯಾಚ್ ತಾಯಿನಾಡಿಗೆ ಮರಳಿ ಬಂದಿದೆ. ಮೊದಲ ಬ್ಯಾಚ್‌ನಲ್ಲಿ 212 ಜನ ಭಾರತೀಯ ಪ್ರಜೆಗಳು ಪ್ರಯಾಣಿಸಿದ್ದಾರೆ. ಮೊದಲ ಬ್ಯಾಚ್‌ನಲ್ಲಿ 5 ಜನ ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾರೆ. ಬಿಜಾಪುರ ಜಿಲ್ಲೆಯ ಈರಣ್ಣ, ಪ್ರೀತಿ ರಾಜಮನ್ನಾರ್, ಅಶ್ವಿನಿ ಕೃಷ್ಣ, ಕಲ್ಪನಾ ಮತ್ತು ಜಯೇಶ್ ತಾಕರ್ಶಿ ವಾಪಸ್‌ ಬಂದವರು.

ಒಟ್ಟು 18000ಕ್ಕೂ ಹೆಚ್ಚು ಭಾರತೀಯರು ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಇಸ್ರೇಲ್‌ ಹಮಾಸ್‌ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ ಸಾರಿದೆ. ಇಸ್ರೇಲ್‌ ತೊರೆದು ಭಾರತಕ್ಕೆ ಮರಳಲು ಇಚ್ಛಿಸುವವರು ಅರ್ಜಿ ಸಲ್ಲಿಸಬೇಕು. ಮೊದಲು ಅರ್ಜಿ ಸಲ್ಲಿಸುವವರಿಗೆ ಆದ್ಯತೆ ಮೇರೆಗೆ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ.

ಇದನ್ನೂ ಓದಿ: Operation Ajay: ಇಸ್ರೇಲ್‌ನಿಂದ ಭಾರತೀಯರ ರಕ್ಷಣೆಗೆ ಆಪರೇಷನ್‌ ಅಜಯ್; ಏನಿದು? ಪ್ಲಾನ್‌ ಹೇಗಿದೆ?

Exit mobile version