Site icon Vistara News

Operation Cheetah | ಹಿಂಡಲಗಾದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ; 22 ಶಾಲೆಗಳಿಗೆ ರಜೆ ಘೋಷಣೆ

ಚಿರತೆ

ಬೆಳಗಾವಿ: ಕಳೆದ ೧೮ ದಿನಗಳಿಂದ ಬೆಳಗಾವಿ ನಗರವನ್ನು ಭಯಕ್ಕೆ ದೂಡಿರುವ ಚಿರತೆಯೊಂದು (Operation Cheetah) ಇಲ್ಲಿನ ಹಿಂಡಲಗಾದಲ್ಲಿ ಬೆಳಗ್ಗೆ ಮತ್ತೆ ಕಾಣಿಸಿಕೊಳ್ಳುವ ಮೂಲಕ ಸ್ಥಳೀಯರಲ್ಲಿ ನಡುಕ ಹುಟ್ಟಿಸಿದೆ. ಖಾಸಗಿ ಕಂಪನಿಯ ಬಸ್ ಚಾಲಕರೊಬ್ಬರ ಮೊಬೈಲ್‌ನಲ್ಲಿ ಚಿರತೆ ಚಲನವಲನ ಸೆರೆಯಾಗಿದೆ. ಕೂಗಳತೆ ದೂರದಲ್ಲಿಯೇ ಚಿರತೆ ರಸ್ತೆ ದಾಟಿ ಹೋಗಿದ್ದು, ಚಿರತೆ ಚಲನವಲನ ವಿಡಿಯೋ ವೈರಲ್ ಆಗುತ್ತಿದ್ದಂತೆ ಅರಣ್ಯ ಅಧಿಕಾರಿಗಳು ಫೀಲ್ಡಿಗಿಳಿದು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹಿಂಡಲಗಾ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ

ಹಿಂಡಲಗಾದಲ್ಲಿ ರಸ್ತೆಯಲ್ಲಿ ಬೆಳಗ್ಗೆ 6.15ರ ಸುಮಾರಿಗೆ ಖಾಸಗಿ ಬಸ್‌ವೊಂದು ಹೋಗುತ್ತಿದ್ದಾಗ ಮೊಬೈಲ್ ಕ್ಯಾಮೆರಾ ಮೂಲಕ ಸುಮ್ಮನೆ ಚಿತ್ರೀಕರಣ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಇದೇ ವೇಳೆ ಪ್ರಾಣಿಯೊಂದು ರಸ್ತೆಗೆ ಬಂದಿದೆ. ಮೊದಲು ಯಾವುದೋ ಪ್ರಾಣಿ ಅಂದುಕೊಂಡವರಿಗೆ ನಂತರ ಅದು ಚಿರತೆ ಎಂದು ತಿಳಿದು ಗಾಬರಿಗೊಂಡಿದ್ದಾರೆ. ಚಿರತೆ, ಚಿರತೆ ಎಂದು ಕೂಗಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಅಲ್ಲಿಂದ ಮಾಯವಾಗಿದೆ.

೨೦೦ ಸಿಬ್ಬಂದಿ ಜಂಟಿ ಕಾರ್ಯಾಚರಣೆ

ಚಿರತೆ ಪ್ರತ್ಯಕ್ಷವಾದ ಸ್ಥಳಕ್ಕೆ ಅರಣ್ಯ, ಪೊಲೀಸ್ ಅಧಿಕಾರಿಗಳು ದೊಣ್ಣೆ, ಏರ್ ಗನ್, ಅರವಳಿಕೆ ಗನ್‌ನೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದು, ಚಿರತೆ ಹೆಜ್ಜೆ ಗುರುತು ಪರಿಶೀಲನೆ ನಡೆಸುತ್ತಿದ್ದಾರೆ. ಈಚೆಗಷ್ಟೇ ಗಾಲ್ಫ್ ಮೈದಾನದಲ್ಲಿ ಅರಣ್ಯ, ಪೊಲೀಸ್ ಇಲಾಖೆಯ ತಲಾ 100 ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಅಂದು ಚಿರತೆಯ ಸುಳಿವು ಸಿಕ್ಕಿರಲಿಲ್ಲ.

18 ದಿನಗಳ ಬಳಿಕ ಮತ್ತೆ ಪ್ರತ್ಯಕ್ಷ

ಆಗಸ್ಟ್ 5ರಂದು ಜಾಧವ್ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ ಮಾಡಿತ್ತು. ಆ ಬಳಿಕ ಆಗಸ್ಟ್ 7, 8ರಂದು ಗಾಲ್ಫ್ ಮೈದಾನದ ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆಗಸ್ಟ್ 7, 8ರ ಬಳಿಕ ಚಿರತೆ ಚಲನವಲನ ಸೆರೆಯಾಗಿರಲಿಲ್ಲ. ಕಳೆದ 18 ದಿನಗಳಿಂದ ಚಿರತೆ ಸೆರೆಗೆ ಶೋಧ ಕಾರ್ಯ ಮುಂದುವರಿದಿತ್ತು. ಸೋಮವಾರ (ಆಗಸ್ಟ್‌ 22) ಬೆಳಗ್ಗೆ ಚಿರತೆಯು ಬೆಳಗಾವಿಯ ಹಿಂಡಲಗಾ ರಸ್ತೆಯಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ.

ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿ 22 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿ ಡಿಡಿಪಿಐ ಬಸವರಾಜ ನಾಲತವಾಡ ಮಾಹಿತಿ ನೀಡಿದ್ದಾರೆ.

ಎಚ್ಚರಿಕೆಯಲ್ಲಿ ಇರುವಂತೆ ಪೊಲೀಸರಿಂದ ಅನೌನ್ಸ್‌

ಹಿಂಡಲಗಾ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ ಹಿನ್ನೆಲೆ ಜನ ಎಚ್ಚರದಿಂದ ಇರುವಂತೆ ಪೊಲೀಸ್‌ ಸಿಬ್ಬಂದಿ ಮೈಕ್‌ನಲ್ಲಿ ಅನೌನ್ಸ್ ಮಾಡುತ್ತಿದ್ದಾರೆ. ಈಗಾಗಲೇ ಬೆಳಗಾವಿ ಹಿಂಡಲಗಾ ರಸ್ತೆ ಬಂದ್ ಮಾಡಿಸಿದ್ದು, ಪರ್ಯಾಯ ಮಾರ್ಗ ಅನುಸರಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ | ಬೃಹತ್‌ ಆಪರೇಷನ್‌ಗೂ ಸಿಗದ ಬೆಳಗಾವಿ ಚಿರತೆ, ಹಾಗಿದ್ದರೆ ಗಾಲ್ಫ್‌ ಮೈದಾನ ಪ್ರದೇಶ ಬಿಟ್ಟು ಹೋಗಿದ್ಯಾ?

Exit mobile version