Site icon Vistara News

ಬೃಹತ್‌ ಆಪರೇಷನ್‌ಗೂ ಸಿಗದ ಬೆಳಗಾವಿ ಚಿರತೆ, ಹಾಗಿದ್ದರೆ ಗಾಲ್ಫ್‌ ಮೈದಾನ ಪ್ರದೇಶ ಬಿಟ್ಟು ಹೋಗಿದ್ಯಾ?

cheetah

ಬೆಳಗಾವಿ: ಇಲ್ಲಿನ ಜಾಧವ ನಗರದಲ್ಲಿ ಕಳೆದ ೨೦ ದಿನಗಳಿಂದ ಆತಂಕ ಸೃಷ್ಟಿಸಿರುವ ಚಿರತೆಯನ್ನು ಹೇಗಾದರೂ ಮಾಡಿ ಹಿಡಿಯಲೇ ಬೇಕು ಎಂಬ ಉದ್ದೇಶದಿಂದ ಶುಕ್ರವಾರ ನಡೆಸಲಾದ ಬೃಹತ್‌ ಆಪರೇಷನ್‌ ಚೀತಾ ಫಲ ನೀಡಿಲ್ಲ. ಹಾಗಂತ ಇದು ವಿಫಲವಾಗಿದೆ ಎಂದೇನೂ ಅಲ್ಲ. ಯಾಕೆಂದರೆ, ಚಿರತೆ ಆ ಪ್ರದೇಶವನ್ನೇ ಬಿಟ್ಟು ಹೋಗಿರಬಹುದು, ಹಾಗಾಗಿ ಸಿಕ್ಕಿಲ್ಲ ಎಂಬ ತರ್ಕವೂ ಇದೆ.

ಜಾಧವ್‌ ನಗರದ ಬಳಿ ಆಗಸ್ಟ್‌ ೫ರಂದು ಕಾರ್ಮಿಕರೊಬ್ಬರ ಮೇಲೆ ದಾಳಿ ಮಾಡಿದ ಚಿರತೆ ಬಳಿಕ ನಾಪತ್ತೆಯಾಗಿತ್ತು. ಜಾಧವ್‌ ನಗರದ ಗಾಲ್ಫ್‌ ಮೈದಾನದಲ್ಲಿ ಈ ಚಿರತೆ ಅಡಗಿಕೊಂಡಿದೆ ಎಂದು ಕಳೆದ ೧೫ ದಿನಗಳಿಂದ ಹುಡುಕಾಟ ನಡೆದಿದೆ. ಗಾಲ್ಫ್ ಮೈದಾನ ಇರುವ 250 ಎಕರೆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. 22 ಟ್ರ್ಯಾಪ್ ಕ್ಯಾಮೆರಾ, 8 ಬೋನುಗಳನ್ನು ಇರಿಸಲಾಗಿದೆ. ೫೦ ಮಂದಿ ಅರಣ್ಯ ಮತ್ತು ಪೊಲೀಸ್‌ ಸಿಬ್ಬಂದಿ ಕಾವಲು ಕಾಯುತ್ತಿದ್ದರು. ಆದರೂ ಚಿರತೆ ಕಣ್ಣಿಗೆ ಬಿದ್ದಿಲ್ಲ. ಈ ನಡುವೆ, ಆಗಸ್ಟ್‌ ೭ ಮತ್ತು ೮ರಂದು ಸಿಸಿ ಕ್ಯಾಮೆರಾದಲ್ಲಿ ಚಿರತೆ ಸೆರೆಯಾಗಿತ್ತು. ಚಿರತೆಯ ಕಾರಣದಿಂದಾಗಿ ಜಾಧವ ನಗರ ಹಲವು ದಿನಗಳ ಕಾಲ ಪೂರ್ಣವಾಗಿ ಬಂದ್‌ ಆಗಿತ್ತು. ಶಾಲೆಗಳನ್ನೂ ಮುಚ್ಚಲಾಗಿತ್ತು. ೧೧ ದಿನಗಳಿಂದ ಮುಚ್ಚಿದ್ದ ಶಾಲೆಗಳನ್ನು ಎರಡು ದಿನದ ಹಿಂದಷ್ಟೇ ತೆರೆಯಲಾಗಿತ್ತು.

ಈ ನಡುವೆ, ಶುಕ್ರವಾರ ಬೃಹತ್‌ ಕಾರ್ಯಾಚರಣೆಯ ಮೂಲಕ ಎಲ್ಲಿದ್ದರೂ ಹುಡುಕುವ ಪ್ರಯತ್ನವೊಂದು ನಡೆಯಿತು. ಆದರೆ, ಆಗಲೂ ಚಿರತೆ ಕಣ್ಣಿಗೆ ಬಿದ್ದಿಲ್ಲ. ಪೊಲೀಸ್-ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಈ ಕಾರ್ಯಚರಣೆ ನಡೆಸಿತ್ತು. ಅರಣ್ಯ-ಪೊಲೀಸ್ ಇಲಾಖೆಯ ತಲಾ 100 ಸಿಬ್ಬಂದಿ ಇದರಲ್ಲಿ ಭಾಗವಹಿಸಿದ್ದರು. ಎಸಿಎಫ್ ಮಂಜುನಾಥ ಕುಸನಾಳ, ಡಿಸಿಪಿ ರವೀಂದ್ರ ಗಡಾಡಿ ಅವರು ನೇತೃತ್ವ ವಹಿಸಿದ್ದರು.

ಇಬ್ಬರು ಅರಿವಳಿಕೆ ತಜ್ಞರು, ಅರಿವಳಿಕೆ ಮದ್ದು ಸಮೇತ ಸಿದ್ಧರಾಗಿದ್ದರು. ಬಡಿಗೆ, ಹೆಲ್ಮೆಟ್, ರಕ್ಷಣಾ ವಸ್ತುಗಳ ಸಮೇತ ಸಿಬ್ಬಂದಿ ಬಂದಿದ್ದರು. ಇಷ್ಟೆಲ್ಲ ಸಿದ್ಧತೆಗಳಿದ್ದರೂ ಚಿರತೆಯೇ ಕಾಣಿಸಿರಲಿಲ್ಲ. ಹೀಗಾಗಿ, ಬಹುತೇಕ ಚಿರತೆ ಈ ಭಾಗದಿಂದ ಆಗಲೇ ತಪ್ಪಿಸಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಹಿಂದಿನ ಸುದ್ದಿ |ಇನ್ನೂ ಪತ್ತೆಯಾಗದ ಬೆಳಗಾವಿ ಚಿರತೆ, 10 ದಿನದ ಬಳಿಕ 22 ಶಾಲೆ ಮತ್ತೆ ಆರಂಭ.. ಆದರೆ Conditions Apply

Exit mobile version