ಬೆಳಗಾವಿ: ಇಲ್ಲಿನ ಹಿಂಡಲಗಾದಲ್ಲಿ ಚಿರತೆ ಶೋಧ ಕಾರ್ಯವು 19ನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ ಬೀಸಿದ ಬಲೆಗೆ ಬೀಳದೆ ಕಣ್ಣೆದುರೇ ಡಬಲ್ ರೋಡ್ ಪಾಸ್ ಮಾಡಿ ಮತ್ತೆ ಗಾಲ್ಫ್ ಮೈದಾನಕ್ಕೆ ಚಿರತೆ (Operation leopard) ನುಗ್ಗಿರುವುದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಈ ಹಿನ್ನೆಲೆಯಲ್ಲಿ ಸೆರೆ ಹಿಡಿಯುವ ಕಾರ್ಯತಂತ್ರವನ್ನೇ ಬದಲಿಸಲಾಗಿದೆ.
ಚಿರತೆ ಸೆರೆಗೆ ಶತಾಯಗತಾಯ ಪ್ರಯತ್ನಿಸುತ್ತಿರುವ ಜಿಲ್ಲಾಡಳಿತ ಹುಕ್ಕೇರಿಯಿಂದ ಶ್ವಾನ, ಶಿವಮೊಗ್ಗದಿಂದ ಆನೆ, ಬೆಂಗಳೂರಿಂದ ಡ್ರೋಣ್ ಮೂಲಕ ಶೋಧ ಕಾರ್ಯಕ್ಕೆ ತಯಾರಿ ನಡೆದಿದೆ. ಬುಧವಾರ ಬೆಳಗ್ಗೆ ಕಾರ್ಯಾಚರಣೆಗೆ ಸಿಬ್ಬಂದಿ ಗಾಲ್ಫ್‌ಗೆ ಇಳಿಯಲಿದ್ದು, ಚಿರತೆ ಪ್ರತ್ಯಕ್ಷವಾದ ಹಿಂಡಲಗಾ ರಸ್ತೆಯನ್ನು ಬ್ಲಾಕ್ ಮಾಡಲಾಗಿದೆ.
ಸೋಮವಾರ ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ನಿರಂತರ ಶೋಧ ನಡೆಸುತ್ತಿರುವಾಗಲೇ, ಎರಡೆರಡು ಬಾರಿ ಪ್ರತ್ಯಕ್ಷವಾಗಿದ್ದ ಚಿರತೆ, ಐದೇ ಸೆಕೆಂಡ್‌ಗಳಲ್ಲಿ ಹಿಂಡಲಗಾ ರಸ್ತೆ ಪಾಸ್ ಮಾಡಿ ತಂತಿ ಬೇಲಿ ದಾಟಿ ಒಳನುಗ್ಗಿತ್ತು.
ರಕ್ಷಣಾ ಇಲಾಖೆಯ ತೊಡಕು
ಚಿರತೆಯನ್ನು ಸೆರೆಹಿಡಿಯಲು ಬೆಂಗಳೂರಿನಿಂದ ಡ್ರೋಣ್ ಎಕ್ಸ್‌ಪರ್ಟ್ಸ್ ಅತ್ಯಾಧುನಿಕ ಇನ್‌ಫ್ರಾರೆಡ್ ಕ್ಯಾಮರಾಗಳ ಸಮೇತ ಆಗಮಿಸಿದ್ದರು. ಆದರೆ, ತಾಂತ್ರಿಕ ಕಾರಣದಿಂದ ಡ್ರೋಣ್ ಹಾರಾಡಲಿಲ್ಲ. ಮತ್ತೊಂದೆಡೆ ಡ್ರೋನ್ ಹಾರಾಟಕ್ಕೆ ರಕ್ಷಣಾ ಇಲಾಖೆ ಅನುಮತಿ ಸಿಗದೆ ಇರುವುದು ಕಾರ್ಯಾಚರಣೆಗೆ ತೊಡಕುಂಟಾಗಿದೆ. ಈ ನಿಟ್ಟಿನಲ್ಲಿ ಹೈಡೆಫಿನಿಷನ್ ಕ್ಯಾಮರಾಗಳ ಸಹಾಯದಿಂದ ಗಾಲ್ಫ್ ಮೈದಾನದ 250 ಎಕರೆ ಪ್ರದೇಶದಲ್ಲಿ ಚಿರತೆಗಾಗಿ ಶೋಧಕಾರ್ಯ ನಡೆಯುತ್ತಿದೆ.
ರಕ್ಷಣಾ ಇಲಾಖೆಗೆ ಸೇರಿದ 250 ಎಕರೆ ಪ್ರದೇಶದಲ್ಲಿ ಮರ, ಗಿಡಗಂಟಿಗಳಿರುವ ದಟ್ಟವಾದ ಪ್ರದೇಶದಲ್ಲಿ ಚಿರತೆ ಅಡಗಿರುವ ಶಂಕೆ ಇದೆ. ಹೀಗಾಗಿ ಹಗಲಿರುಳು ಕಾರ್ಯಾಚರಣೆ ನಡೆಸಿದರೂ ಚಿರತೆ ಸಿಗುತ್ತಿಲ್ಲ. ಮತ್ತೊಂದೆಡೆ ಕಂಟೋನ್ಮೆಂಟ್ ಪ್ರದೇಶದಲ್ಲಿ ಕಸಾಯಿಖಾನೆ ಇದ್ದು ಅಲ್ಲಿಯ ತ್ಯಾಜ್ಯ ತಿನ್ನಲು ಚಿರತೆ ಆಗಮಿಸಿ ಮರಳಿ ಗಾಲ್ಫ್ ಮೈದಾನ ಪ್ರವೇಶಿಸುತ್ತಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಕಸಾಯಿಖಾನೆ ಬಳಿಯೂ ಕ್ಯಾಮರಾ ಅಳವಡಿಸಿದ್ದಾಗಿ ಶಾಸಕ ಅನಿಲ್ ಬೆನಕೆ ಹೇಳಿದ್ದಾರೆ.
ಚಿರತೆ ಬೇಟೆಗಾಗಿ ಶ್ವಾನ, ಶಿವಮೊಗ್ಗ ಆನೆ!
ಗಾಲ್ಫ್ ಮೈದಾನದಲ್ಲಿ ಸಿಸಿಎಫ್ ಮಂಜುನಾಥ ಚೌಹಾನ್ ಹಾಗೂ ಡಿಎಫ್ಒ ಆ್ಯಂಥೋನಿ ಮರಿಯಪ್ಪ ಅವರ ತಂಡ ಮೊಕ್ಕಾಂ ಹೂಡಿದೆ. ಗಾಲ್ಫ್ ಮೈದಾನದ ಸುತ್ತಮುತ್ತ ಅಡ್ಡಾಡುತ್ತಿರುವ ಚಿರತೆಯನ್ನು ಸೆರೆ ಹಿಡಿಯಲು ಅಲೆಮಾರಿ ಜನಾಂಗದವರ ಶ್ವಾನಗಳನ್ನು ಬಳಕೆ ಮಾಡಲಾಗಿದೆ. ಆದರೆ, ಬೇರೆ ಪ್ರಾಣಿಗಳ ಬೇಟೆಯಾಡಿದ ಕುರುಹುಗಳು ಪತ್ತೆಯಾಗಿಲ್ಲ ಎಂದು ಸಿಸಿಎಫ್ ಮಂಜುನಾಥ ಚೌಹಾನ್ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಕ್ರೆಬೈಲು ಆನೆ ಬಿಡಾರದಿಂದ ಆಲೆ ಮತ್ತು ನೇತ್ರಾ ಎಂಬ ಎರಡು ಆನೆಗಳು ಬೆಳಗಾವಿಗೆ ಆಗಮಿಸುತ್ತಿದ್ದು, ಮಂಗಳವಾರ ರಾತ್ರಿ ತಲುಪಲಿವೆ. ಅರಣ್ಯ ಇಲಾಖೆ ಮಾರ್ಗಸೂಚಿಯಂತೆ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ. ಬುಧವಾರ ಎರಡು ಆನೆಗಳನ್ನು ಬಳಸಿ ಶೋಧ ಕಾರ್ಯ ನಡೆಸಲಿದ್ದು ಶೀಘ್ರವೇ ಚಿರತೆ ಸೆರೆ ಹಿಡಿಯುತ್ತೇವೆ ಎಂದು ಸಿಸಿಎಫ್ ಮಂಜುನಾಥ ಚೌಹಾನ್ ತಿಳಿಸಿದ್ದಾರೆ.
ಬುಧವಾರವೂ ಶಾಲೆಗಳಿಗೆ ರಜೆ ಮುಂದುವರಿಕೆ?
ಚಿರತೆ ಸೆರೆ ಸಿಗದ ಹಿನ್ನೆಲೆ ಗಾಲ್ಫ್ ಮೈದಾನದ ಒಂದು ಕಿ.ಮೀ ವ್ಯಾಪ್ತಿಯ 22 ಶಾಲೆಗಳಿಗೆ ಮಂಗಳವಾರ ರಜೆ ನೀಡಲಾಗಿದ್ದು, ಮಕ್ಕಳಿಗೆ ಆನ್‌ಲೈನ್ ಮೂಲಕ ಪಾಠ ಮಾಡಲು ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿರುವುದಾಗಿ ಶಾಸಕ ಅನಿಲ್ ಬೆನಕೆ ತಿಳಿಸಿದ್ದಾರೆ. ಬುಧವಾರ ಚಿರತೆ ಸೆರೆ ಕಾರ್ಯಾಚರಣೆಗೆ ಇರಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳಿಗೆ ರಜೆ ಮುಂದುವರಿಯುವ ಸಾಧ್ಯತೆ ಇದೆ.
ಇದನ್ನೂ ಓದಿ | ಚಿರತೆ ಆಯ್ತು, ಕರಡಿ ಆಯ್ತು, ಈಗ ನರಿ ದಾಳಿ: ಚಿತ್ತಾಪುರದಲ್ಲಿ ನಾಲ್ವರಿಗೆ ಗಾಯ, ಇಂಥ ಗುಳ್ಳೆ ನರಿಯ ಅಂತ್ಯ ಹೇಗಾಯ್ತು?