ಬೆಂಗಳೂರು: ವಸತಿ ಸಚಿವ ವಿ. ಸೋಮಣ್ಣ ಅವರು ಮಹಿಳೆಯೊಬ್ಬರ ಕಪಾಳಕ್ಕೆ ಹೊಡೆದಿರುವ ಘಟನೆ ಇದೀಗ ರಾಜಕೀಯ ವಿವಾದವಾಗಿ ಪರಿಣಮಿಸಿದ್ದು, ಕೂಡಲೇ ಸಚಿವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಚಾಂರಾಜನಗರದಲ್ಲಿ ಮಹಿಳೆಗೆ ಹೊಡೆದ ನಂತರ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣವಿತ್ತು. ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ, ರೈತ ಮುಖಂಡರು ಸೋಮಣ್ಣ ವಿರುದ್ಧ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ | ನಿವೇಶನ ಕೇಳಲು ಬಂದ ಮಹಿಳೆಯ ಕಪಾಳಕ್ಕೆ ಹೊಡೆದ ಸಚಿವ ವಿ. ಸೋಮಣ್ಣ
ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ರೈತ ಮುಖಂಡರು, ಗೋ ಬ್ಯಾಕ್ ಸೋಮಣ್ಣ ಎಂದು ಘೋಷಣೆ ಕೂಗಿದರು. ಈ ಬಗ್ಗೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಬೇಕು. ಸಚಿವ ಸೋಮಣ್ಣ ಅವರನ್ನು ಸಚಿವ ಸಂಪುಟದದಿಂದ ಕೈ ಬಿಡಬೇಕು. ಇದು ಗೋವಿಂದರಾಜನಗರವಲ್ಲ, ಇದು ಚಾಮರಾಜನಗರ. ಇಲ್ಲಿ ನಿಮ್ಮ ಆಟ ನಡೆಯಲ್ಲ ಎಂದು ಆಕ್ರೋಶ ಹೊರಹಾಕಿದರು.
ದಾವಣಗೆರೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಇದರಿಂದ ಬಿಜೆಪಿ ಸಂಸ್ಕೃತಿ ತಿಳಿದು ಬರುತ್ತದೆ. ಸೋಮಣ್ಣ ಸಚಿವನಾಗಲು ನಾಲಾಯಕ್. ಒಬ್ಬ ಮಂತ್ರಿಗೆ ಅಧಿಕಾರ ಕೊಟ್ಟಿರೋದು ಮಹಿಳೆ ಮೇಲೆ ದಲಿತರ ಮೇಲೆ ಕೈ ಮಾಡಲಿಕ್ಕಾ…? ಅಂತವರೆಲ್ಲ ಮಂತ್ರಿ ಮಂಡಲದಲ್ಲಿ ಇರಬಾರದು. ತಾಳ್ಮೆ, ಸಹನೆ, ಜನರ ಕಷ್ಟ ಕೇಳೋಕೆ ಆಗದಿದ್ದಕ್ಕೆ ಮಂತ್ರಿ ಯಾಕೇ ಆಗಬೇಕು? ರಾಜಿನಾಮೆ ಕೊಟ್ಡು ಮನೆಗೆ ಹೋಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಯಚೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲ, ದೇಶದ ಸ್ತ್ರೀಯರನ್ನು ರಕ್ಷಣೆ ಮಾಡಬೇಕು ಎಂದು ಕೆಂಪುಕೋಟೆ ಮೇಲಿನಿಂದ ಪ್ರಧಾನಿ ಮೋದಿ ಭಾಷಣ ಮಾಡುತ್ತಾರೆ. ಆದರೆ ಕರ್ನಾಟಕ ಸರ್ಕಾರದ ಒಬ್ಬ ಹಿರಿಯ ಸಚಿವ, ಮಹಿಳೆಯ ಕೆನ್ನಗೆ ಹೊಡೆದಿದ್ದಾರೆ.ಇದೇನಾ ನೀವು ಮಹಿಳೆಯರಿಗೆ ಕೊಡುವ ಗೌರವ? ಮೊದಲು ಸೋಮಣ್ಣ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಸುರ್ಜೇವಾಲಾ ಒತ್ತಾಯ ಮಾಡಿದ್ದಾರೆ.
ಈ ಕುರಿತು ರಾಯಚೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಟಿವಿ ಮಾಧ್ಯಮಗಳಲ್ಲಿ ಈ ವಿಚಾರವನ್ನು ನಾನು ಗಮನಿಸಿದೆ. ಈ ವಿಚಾರ ಕೇಳಿ ನನಗೆ ಶಾಕ್ ಆಯಿತು. ಬಿಜೆಪಿ ನಾಯಕರಿಗೆ ಮಹಿಳೆಯರನ್ನು ಕಂಡರೆ ಮೊದಲೇ ಅಗೌರವ. ಅವರ ಹಕ್ಕುಗಳನ್ನು ಕೇಳಲು ಬಂದಾಗ ಇವರು ನಡೆಸಿಕೊಳ್ಳುವ ರೀತಿ ಕ್ಷಮಾಪಣೆಗೆ ಅರ್ಹವಾದದಲ್ಲ.
ಬೊಮ್ಮಾಯಿ ಸರಕಾರಕ್ಕೆ ನಾವು ಕೇಳುವುದು ಇಷ್ಟೇ. ನಿಮ್ಮ ಸಂಪುಟದಲ್ಲಿ ಮಹಿಳಾ ವಿರೋಧಿ ಸಚಿವರನ್ನು ಏಕೆ ಇಟ್ಟುಕೊಂಡಿದ್ದೀರ? ಅವರ ಮೇಲೆ ನೀವು ಏಕೆ ಕ್ರಮ ಜರುಗಿಸುವುದಿಲ್ಲ? ಈ ಹಿಂದೆ ಅರವಿಂದ ಲಿಂಬಾವಳಿ ಕೂಡ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿದ್ದರು. ಬಿಜೆಪಿಯವರು ಬೇಟಿ ಬಚಾವೋ ಬೇಟಿ ಪಡಾವೋ ಎನ್ನುತ್ತಾರೆ, ಆದರೆ ಈ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಸೋಮಣ್ಣ ಮಹಿಳೆಯ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಬೇಕು. ಕೆಂಪಮ್ಮ ಎಸ್‌ಟಿ ಸಮುದಾಯಕ್ಕೆ ಸೇರಿದ ಮಹಿಳೆ. ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡುತ್ತೇವೆ. ಈ ವಿಡಿಯೋ ಆಧರಿಸಿ ಪೊಲೀಸ್ ಇಲಾಖೆಗೂ ದೂರು ಸಲ್ಲಿಕೆ ಮಾಡುತ್ತೇವೆ ಎಂದರು.
ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಮಾಝಿ ಸಚಿವ ದಿನೇಶ್ ಗುಂಡೂರಾವ್, ಗುಂಡ್ಲುಪೇಟೆಯ ಹಂಗಳದಲ್ಲಿ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯೊಬ್ಬರ ಕಪಾಳಕ್ಕೆ ಸಚಿವ ಸೋಮಣ್ಣ ಹೊಡೆದಿದ್ದಾರೆ. ಸೋಮಣ್ಣ ಒಬ್ಬ ಹಿರಿಯ ಸಚಿವ. ನಾಲ್ಕು ಜನರಿಗೆ ಬುದ್ಧಿ ಹೇಳುವ ಸ್ಥಾನದಲ್ಲಿದ್ದು ಈ ರೀತಿ ವರ್ತಿಸುವುದು ಶೋಭೆಯಲ್ಲ. ಸ್ತ್ರೀಯರೊಂದಿಗೆ ಸಂಸ್ಕಾರಯುತವಾಗಿ ವರ್ತಿಸಬೇಕು ಅನ್ನೋ ಕನಿಷ್ಠ ಜ್ಞಾನವೂ ಸೋಮಣ್ಣರಗಿಲ್ಲವೇ.?
ಸ್ತ್ರೀ ನಿಂದನೆ, ಸ್ತ್ರೀ ಪೀಡನೆ, ಸ್ತ್ರೀ ಶೋಷಣೆ BJPಯವರ ಹುಟ್ಟುಗುಣ. ಮಹಿಳೆಯ ಕೆನ್ನೆಗೆ ಹೊಡೆಯುವ ಮೂಲಕ ಸ್ತ್ರೀಯರ ಬಗ್ಗೆ BJPಯವರ ಮನಸ್ಥಿತಿಯನ್ನು ಸೋಮಣ್ಣ ಅನಾವರಣ ಮಾಡಿದ್ದಾರೆ. ಸಾರ್ವಜನಿಕವಾಗಿಯೇ ಸೋಮಣ್ಣ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ. ಸ್ತ್ರೀಯರ ಬಗ್ಗೆ ಗೌರವವಿಲ್ಲದ ವ್ಯಕ್ತಿಗಳಿಂದ ಮಾತ್ರ ಇಂತಹ ವರ್ತನೆ ತೋರಿಸಲು ಸಾಧ್ಯ ಎಂದಿದ್ದಾರೆ.
ಕ್ಷಮೆ ಯಾಚಿಸಿದ ಸೋಮಣ್ಣ
ವಿವಾದ ತೀವ್ರವಾಗುತ್ತಿರುವಂತೆಯೇ ಸಚಿವ ವಿ. ಸೋಮಣ್ಣ ಕ್ಷಮೆ ಯಾಚಿಸಿದ್ದಾರೆ. 45 ವರ್ಷ ರಾಜಕೀಯದಲ್ಲಿ ಹಲವು ಏಳುಬೀಳು ಕಂಡಿದ್ದೇನೆ. ಶನಿವಾರದ ಕಾರ್ಯಕ್ರಮದಲ್ಲಿ ಸಣ್ಣ ಅಪಚಾರವನ್ನೂ ಮಾಡಿಲ್ಲ. ಪ್ರಾಯಶಃ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದಾರೆ ಕ್ಷಮೆ ಯಾಚಿಸುತ್ತೇನೆ, ವಿಷಾದ ವ್ಯಕ್ತಪಡಿಸ್ತೇನೆ.
ನಿನ್ನೆಯ ಘಟನೆ ಘಟನೆಯೇ ಅಲ್ಲ. ಹೆಣ್ಣು ಮಗಳು ಪದೇಪದೇ ವೇದಿಕೆ ಮೇಲೆ ಬರ್ತಾ ಇದ್ದಳು. ತಾಯಿ ಎಷ್ಟು ಸಾರಿ ಬರ್ತೀಯ ಅಂತ ವಿಚಾರಿಸಿದೆ, ನಿನ್ನ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಕೈಯಲ್ಲಿ ಪಕ್ಕಕ್ಕೆ ಸರಿಸಿದ್ದೇನೆ. ಅಷ್ಟೇ ವಿನಃ ಇನ್ನೇನೂ ಉದ್ದೇಶ ಇರಲ್ಲಿಲ್ಲ.
ಹೆಣ್ಣು ಮಕ್ಕಳ ಬಗ್ಗೆ ಅಪಾರವಾದ ಗೌರವ, ಮಮಕಾರ ಇದೆ. ನಾನು ಕೂಡ ಬಡತನದಿಂದಲೇ ಬಂದವನು. ಆ ಹೆಣ್ಣು ಮಗಳಿಗೆ ಸಹ ಹಕ್ಕು ಪತ್ರ ಕೊಡಿಸಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ | ವಿ. ಸೋಮಣ್ಣ ಫೋಟೊ ಇಟ್ಕೊಂಡು ಪೂಜೆ ಮಾಡ್ತೀನಿ ಎಂದರು ಕಪಾಳಕ್ಕೆ ಏಟು ತಿಂದ ಮಹಿಳೆ!