Site icon Vistara News

Karnataka Election 2023: ಈಶ್ವರಪ್ಪ ನಿರ್ಧಾರಕ್ಕೆ ಭುಗಿಲೆದ್ದ ಆಕ್ರೋಶ: ಮೇಯರ್‌ ಸೇರಿ 19 ಪಾಲಿಕೆ ಸದಸ್ಯರ ರಾಜೀನಾಮೆ ನಿರ್ಧಾರ

Outrage erupted over Eshwarappa decision Resignation decision of 19 corporation members including mayor Karnataka Election 2023 updates

ಶಿವಮೊಗ್ಗ: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ದಿನೇ ದಿನೆ ಸಾಕಷ್ಟು ರಂಗು ಪಡೆದುಕೊಳ್ಳುತ್ತಿದೆ. ಮಂಗಳವಾರ (ಏ. 11) ಬಿಜೆಪಿ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಸಾಕಷ್ಟು ರಾಜಕೀಯ ಬೆಳವಣಿಗೆ ನಡೆದಿದೆ. ಇನ್ನು ಟಿಕೆಟ್‌ ಘೋಷಣೆಗೂ ಮೊದಲೇ ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ಚುನಾವಣಾ ರಾಜಕೀಯ ನಿವೃತ್ತಿಯನ್ನು ಘೋಷಣೆ ಮಾಡಿದ್ದರು. ಈಗ ಅವರ ಈ ನಿರ್ಧಾರಕ್ಕೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದ್ದು, ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂಬ ಒತ್ತಾಯ ಕೇಳಿಬಂದಿದೆ. ಅಲ್ಲದೆ, ಮೇಯರ್ ಉಪ ಮೇಯರ್‌ ಸೇರಿ ಎಲ್ಲ 19 ಜನ ಬಿಜೆಪಿ ಸದಸ್ಯರು ರಾಜೀನಾಮೆಗೆ ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಬುಧವಾರ (ಏಪ್ರಿಲ್‌ 12) ಈಶ್ವರಪ್ಪ ಅಭಿಮಾನಿಗಳು ಬಿಜೆಪಿ ಜಿಲ್ಲಾ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಪಕ್ಷದ ವಿವಿಧ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಕಚೇರಿ ಎದುರು ರಸ್ತೆ ತಡೆ ನಡೆಸಿ ಆಕ್ರೋಶವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ: ‌R. Ashok: ಆರ್‌. ಅಶೋಕ್‌ ಪದ್ಮನಾಭನಗರದಲ್ಲೂ ಸೋಲುತ್ತಾರೆ: ರಘುನಾಥ ನಾಯ್ಡುವೇ ಅಭ್ಯರ್ಥಿ ಎಂದ ಡಿ.ಕೆ. ಶಿವಕುಮಾರ್‌

ರಾಜೀನಾಮೆಗೆ ನಿರ್ಧಾರ

ರಾಜೀನಾಮೆ ಪತ್ರ ಸಿದ್ಧ ಮಾಡಿಕೊಂಡಿರುವ ಪದಾಧಿಕಾರಿಗಳು, ಸಾಮೂಹಿಕ ರಾಜೀನಾಮೆಗೆ ತೀರ್ಮಾನಿಸಿದ್ದಾರೆ. ವಿವಿಧ ಘಟಕಗಳ ಪದಾಧಿಕಾರಿಗಳು ಈ ನಿರ್ಧಾರಕ್ಕೆ ಬಂದಿದ್ದರು. ಈ ನಡುವೆ ಮಧ್ಯಪ್ರವೇಶ ಮಾಡಿರುವ ಮುಖಂಡರು, ಪ್ರತಿಭಟನಾಕಾರರನ್ನು ಕಚೇರಿಯೊಳಗೆ ಕರೆದೊಯ್ದು ಮಾತುಕತೆ ನಡೆಸಿದ್ದಾರೆ. ಕಾರ್ಯಕರ್ತರ ಅಹವಾಲುಗಳನ್ನು ಆಲಿಸಿದ್ದಾರೆ.

ಈ ವೇಳೆ ಮಾತನಾಡಿದ ಕಾರ್ಯಕರ್ತರು, ಈಶ್ವರಪ್ಪ ಅವರ ನಿವೃತ್ತಿ ಘೋಷಣೆಯನ್ನು ಅಂಗೀಕರಿಸಬಾರದು. ಈಶ್ವರಪ್ಪ ಅವರಿಗೇ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು. ನಗರಾಧ್ಯಕ್ಷ ಜಗದೀಶ್, ವಿಭಾಗ ಉಸ್ತುವಾರಿ ಗಿರೀಶ್ ಪಟೇಲ್, ಶಿವಮೊಗ್ಗ ಕ್ಷೇತ್ರ ಉಸ್ತುವಾರಿ ಜ್ಞಾನೇಶ್ವರ ಮತ್ತಿತರರು ಭಾಗಿಯಾಗಿದ್ದರು. ಆದರೆ, ಮಾತುಕತೆ ಫಲಪ್ರದ ಆಗಿರುವ ಹಿನ್ನೆಲೆಯಲ್ಲಿ ರಾಜೀನಾಮೆಗೆ ನಿರ್ಧರಿಸಿದ್ದಾರೆ.

ಬೆಂಗಳೂರಿಗೆ ಹೊರಟ ಬಿಜೆಪಿ ಪಾಲಿಕೆ ಸದಸ್ಯರು

ಇದೇ ವೇಳೆ ಪಾಲಿಕೆ ಸದಸ್ಯರು ನಗರಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಬೆಂಗಳೂರಿಗೆ ಹೊರಟಿದ್ದಾರೆ. ಟಿಟಿ ವಾಹನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಬಿಎಸ್‌ವೈ ಅವರಿಂದ ನ್ಯಾಯ ಸಿಗುವ ಭರವಸೆ ಇದೆ ಎಂದು ಸಹ ಈ ವೇಳೆ ಹೇಳಿಕೊಂಡಿದ್ದಾರೆ. ಮೇಯರ್ ಶಿವಕುಮಾರ್ ಉಪ ಮೇಯರ್ ಲಕ್ಷ್ಮಿ ಸೇರಿದಂತೆ 15ಕ್ಕೂ ಹೆಚ್ಚು ಸದಸ್ಯರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

ಪಾಲಿಕೆ ಸದಸ್ಯರಿಂದ ರಾಜೀನಾಮೆಗೆ ನಿರ್ಧಾರ

ಪಾಲಿಕೆ ಸದಸ್ಯರು ಸಹ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಮೇಯರ್ ಉಪ ಮೇಯರ್‌ ಸೇರಿ ಎಲ್ಲ 19 ಜನರು ರಾಜೀನಾಮೆಗೆ ನಿರ್ಧಾರ ಮಾಡಿದ್ದಾಗಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮೂಹಿಕ ಸಹಿಯುಳ್ಳ ಪತ್ರವನ್ನು ಬಿಜೆಪಿ ನಗರಾಧ್ಯಕ್ಷರಿಗೆ ಸಲ್ಲಿಕೆ ಮಾಡಲಾಗಿದೆ ಎಂದು ಕಾರ್ಪೋರೇಟರ್ ಶಂಕರ್ ಗ‌ನ್ಬಿ ಹೇಳಿದರು. ಮೇಯರ್, ಉಪ ಮೇಯರ್ ನೇತೃತ್ವದಲ್ಲಿ ಪಕ್ಷದ ಕಚೇರಿಗೆ ಬಂದ ಪಾಲಿಕೆ ಸದಸ್ಯರು, ಈಶ್ವರಪ್ಪ ಅವರ ನಿರ್ಧಾರದ ಬಗ್ಗೆ ಆಕ್ರೋಶವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ: Karnataka Election 2023: ಬಿಜೆಪಿಯವರು ಎಲ್.ಕೆ ಆಡ್ವಾಣಿಯನ್ನೇ ಮನೆಗೆ ಕಳಿಸಿದ್ದಾರೆ, ಇನ್ನು ಇಲ್ಲಿಯವರು ಯಾವ ಲೆಕ್ಕ: ಎಚ್.ಡಿ. ಕುಮಾರಸ್ವಾಮಿ

ಜೆ.ಪಿ. ನಡ್ಡಾಗೆ ಪತ್ರ ಬರೆದು ರಾಜಕೀಯ ನಿವೃತ್ತಿ ಘೋಷಿಸಿದ್ದ ಈಶ್ವರಪ್ಪ

ರಾಜ್ಯ ಬಿಜೆಪಿಯ ಆರಂಭದಿಂದಲೂ ಜತೆಯಲ್ಲೇ ಇರುವ ಹಾಗೂ ಬಹುತೇಕ ಎಲ್ಲ ಬಿಜೆಪಿ ಸರ್ಕಾರಗಳಲ್ಲೂ ಸಚಿವರಾಗಿದ್ದ ಕೆ.ಎಸ್‌. ಈಶ್ವರಪ್ಪ ಅವರು ಮಂಗಳವಾರ ರಾಜಕೀಯ ನಿವೃತ್ತಿ ಘೋಷಿಸಿದ್ದರು. ʼನಾನು ಸ್ವಯಿಚ್ಛೆಯಿಂದ ಚುನಾವಣಾ ರಾಜಕಾರಣದಿಂದ ನಿವೃತ್ತನಾಗಲು ಬಯಸಿದ್ದೇನೆ. ಹಾಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದಾಗಿ ವಿನಂತಿ” ಎಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಬರೆದಿದ್ದಾರೆ.

“ಕಳೆದ 40 ವರ್ಷದ ರಾಜಕೀಯ ಜೀವನದಲ್ಲಿ ಬೂತ್‌ ಮಟ್ಟದಿಂದ ರಾಜ್ಯದ ಉಪ ಮುಖ್ಯಮಂತ್ರಿಯವರೆಗೆ ಗೌರವದ ಸ್ಥಾನಮಾನಗಳನ್ನು ನೀಡಿದ ಪಕ್ಷದ ಹಿರಿಯರಿಗೆ ನನ್ನ ಅನಂತ ಧನ್ಯವಾದಗಳು” ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ.

ಶಿವಮೊಗ್ಗ ನಗರದಿಂದ ಸತತ ಶಾಸಕರಾಗುತ್ತಿರುವ ಈಶ್ವರಪ್ಪ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಎಂಬಾತ ಈಶ್ವರಪ್ಪ ಅವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪೊಲೀಸ್‌ ತನಿಖೆಯಲ್ಲಿ ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್‌ ಸಿಕ್ಕಿತ್ತು.

ನಂತರವಾದರೂ ತಮ್ಮನ್ನು ಸಚಿವರಾಗಿ ತೆಗೆದುಕೊಳ್ಳಬೇಕು ಎಂದು ಈಶ್ವರಪ್ಪ ಸತತ ಪ್ರಯತ್ನ ಮಾಡಿದರು. ಆದರೆ ಸಂಪುಟ ಪುನಾರಚನೆ ಹಾಗೂ ವಿಸ್ತರಣೆಗೆ ಕೇಂದ್ರದ ವರಿಷ್ಠರು ಒಪ್ಪಿಗೆ ನೀಡದ ಪರಿಣಾಮ ಈಶ್ವರಪ್ಪ ಸಚಿವರಾಗಲು ಸಾಧ್ಯವಾಗಲೇ ಇಲ್ಲ. ಇದೀಗ ಶಿವಮೊಗ್ಗ ಕ್ಷೇತ್ರದಿಂದ ಈಶ್ವರಪ್ಪ ಬದಲಿಗೆ ತಮಗೆ ಟಿಕೆಟ್‌ ನೀಡಬೇಕು ಎಂದು ಆಯನೂರು ಮಂಜುನಾಥ್‌ ಪ್ರಯತ್ನಿಸುತ್ತಿದ್ದಾರೆ.

ಈಶ್ವರಪ್ಪ ಅವರು ತಮ್ಮ ಪುತ್ರ ಕೆ.ಈ. ಕಾಂತೇಶ್‌ ಅವರಿಗೆ ಟಿಕೆಟ್‌ ಕೇಳುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಶಿವಮೊಗ್ಗದ ಮನೆಯಲ್ಲಿ ಮಾಧ್ಯಮಗಳೊಂದಿಗೆ ಈಶ್ವರಪ್ಪ ಮಾತನಾಡಿದ್ದಾರೆ.

ಇದನ್ನೂ ಓದಿ: Actor Upendra : ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೇ ಉಪೇಂದ್ರರ ಪಕ್ಷ; ಟ್ವೀಟ್‌ನಲ್ಲಿ ರಿಯಲ್‌ ಸ್ಟಾರ್‌ ಹೇಳಿದ್ದೇನು?

ನಾನು ಬಿಜೆಪಿ ನಾಯಕರಿಗೆ ಕಳುಹಿಸಿರುವ ಪತ್ರವನ್ನು ಕರ್ನಾಟಕದಲ್ಲಿ ಎಲ್ಲ ಕಾರ್ಯಕರ್ತರೂ ಮೆಚ್ಚಿದ್ದಾರೆ. ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರ್ಕಾರವನ್ನು ತರಬೇಕು ಎನ್ನುವುದು ಮುಖ್ಯ. ಇದಕ್ಕಾಗಿ ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಚುನಾವಣಾ ಸಮಿತಿ ತೀರ್ಮಾನ ಮಾಡುವವರು ಸ್ಪರ್ಧೆ ಮಾಡುತ್ತಾರೆ. ಎಲ್ಲರನ್ನೂ ಗೆಲ್ಲಿಸಲು ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ. ಕಾಂತೇಶ್‌ ಅವರಿಗೆ ಟಿಕೆಟ್‌ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಚುನಾವಣಾ ಸಮಿತಿ ಆ ನಿರ್ಧಾರ ಮಾಡಲಿದೆ ಎಂದಷ್ಟೇ ತಿಳಿಸಿದ್ದಾರೆ.

Exit mobile version