ಚಿಕ್ಕೋಡಿ: ಪಂಚಮಸಾಲಿಗಳಿಗೆ ೨ಎ ಮೀಸಲಾತಿ ನೀಡಲು ಮೀನ ಮೇಷ ಎಣಿಸುತ್ತಿರುವ ಸರಕಾರದ ವಿರುದ್ಧ ಚಿಕ್ಕೋಡಿಯಲ್ಲಿ ಆಯೋಜಿಸಲಾಗಿರುವ ಪಂಚಮಸಾಲಿ ಸಮಾವೇಶ ರಾಜಕೀಯ ಜಗ್ಗಾಟಕ್ಕೂ ಕಾರಣವಾಯಿತು. ಬಿಜೆಪಿ ಮತ್ತು ಕಾಂಗ್ರೆಸ್‌ನ ಪಂಚಮಸಾಲಿ ನಾಯಕರು ಭಾಗವಹಿಸಿದ್ದ ಈ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ವಿಜಯಾನಂದ ಕಾಶಪ್ಪನವರ ಹೇಳಿಕೆ ಭಾರಿ ಕಿಚ್ಚು ಹಚ್ಚಿತು. ಮಾಜಿ ಸಚಿವ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಅವರ ಪುತ್ರ ಪ್ರಥ್ವಿ ಕತ್ತಿ ಅವರನ್ನು ತೀವ್ರವಾಗಿ ಕೆರಳಿಸಿತು.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ವಿಜಯಾನಂದ ಕಾಶಪ್ಪನವರ ಅವರು, ಮುಂದಿನ ಬಾರಿ ಹುಕ್ಕೇರಿ ಮತ ಕ್ಷೇತ್ರದಲ್ಲಿ ಪಂಚಮಸಾಲಿಗಳನ್ನೇ ಗೆಲ್ಲಿಸಿ ಎಂದು ಕರೆ ನೀಡಿದರು. ಯಾರೆಲ್ಲ ಅಭ್ಯರ್ಥಿಗಳು ಹುಕ್ಕೇರಿಯಿಂದ ಸ್ಪರ್ಧಿಸಬಹುದು ಎಂದು ಉಲ್ಲೇಖಿಸುತ್ತಾ ಎ.ಬಿ. ಪಾಟೀಲ್ ಅವರ ಹೆಸರನ್ನು ಎತ್ತಿದರು. ಎ.ಬಿ. ಪಾಟೀಲ್ ಅವರು ಕಾಂಗ್ರೆಸ್ ಟಿಕೆಟ್‌ನ ಆಕಾಂಕ್ಷಿಯಾಗಿದ್ದಾರೆ.
ಹುಕ್ಕೇರಿ ಕ್ಷೇತ್ರವನ್ನು ಇದುವರೆಗೆ ಪ್ರತಿನಿಧಿಸುತ್ತಿದ್ದವರು ಮಾಜಿ ಸಚಿವ, ಬಿಜೆಪಿಯ ಉಮೇಶ್ ಕತ್ತಿ. ಅವರ ನಿಧನದಿಂದ ಈಗ ಕ್ಷೇತ್ರ ತೆರವಾಗಿದೆ. ಈ ನಡುವೆ, ಎ.ಬಿ. ಪಾಟೀಲ್ ಅವರ ಹೆಸರು ಎತ್ತುತ್ತಿದ್ದಂತೆಯೇ ಸಭೆಯಲ್ಲಿ ಗದ್ದಲ ಶುರುವಾಯಿತು. ಸಭಿಕರ ಮಧ್ಯೆ ಕುಳಿತಿದ್ದ ಉಮೇಶ್ ಕತ್ತಿ ಅವರ ಸೋದರ ಬಿಡಿಸಿಸಿ ಅಧ್ಯಕ್ಷ ರಮೇಶ್ ಕತ್ತಿ ಅವರ ಪುತ್ರ ಪ್ರಥ್ವಿ ಕತ್ತಿ ಅವರು ಸಿಟ್ಟಿಗೆದ್ದರು. ಪಂಚಮಸಾಲಿ ಸಮಾವೇಶದಲ್ಲಿ ರಾಜಕೀಯ ಮಾತಾಡ್ತೀರಾ ಎಂದು ಅಬ್ಬರಿಸಿದರು. ಆದರೆ, ಕಾಶಪ್ಪನವರ ಇದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲಿಲ್ಲ. ನಾನು ಪಂಚಮಸಾಲಿಗಳನ್ನು ಗೆಲ್ಲಿಸಿ ಎಂದು ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡರು. ಉಮೇಶ್ ಕತ್ತಿ ಅವರು ಬಣಜಿಗ ಲಿಂಗಾಯತ ವರ್ಗಕ್ಕೆ ಸೇರಿದವರು.
ಪ್ರಥ್ವಿ ಕತ್ತಿ ಅವರು ಕಾಶಪ್ಪನವರನ್ನು ಉಲ್ಲೇಖಿಸಿ ಕೆಳಗೆ ಬಾ ಎಂದು ಸವಾಲು ಹಾಕಿದರು. ಆಗ ಕಾಶಪ್ಪನವರ ಅವರು ಯಾರದು ಎಂದು ಕೇಳಿದರು. ಅಷ್ಟು ಹೊತ್ತಿಗೆ ಸಭೆಯಿಂದ ರಮೇಶ್ ಕತ್ತಿಯವರ ಮಗ ಎಂದು ಯಾರೋ ಹೇಳಿದರು. ಆಗ ಕಾಶಪ್ಪನವರ ಅವರು, ʻʻಯಾರ ಮಗನಾದರೆ ನನಗೇನು? ನಾನೂ ಸಹ ಒಬ್ಬ ಮಂತ್ರಿಯ ಮಗನೇʼ ಎಂದರು. ಮಾತಿಗೆ ಮಾತು ಹೆಚ್ಚಾಗುತ್ತಿದ್ದಂತೆಯೇ ಪ್ರಥ್ವಿ ಕತ್ತಿ ಅವರನ್ನು ಕರೆದುಕೊಂಡು ಹೊರನಡೆದರು. ಹೊರಗಡೆ ಹೋದ ಬಳಿಕವೂ ಪ್ರಥ್ವಿ ಕತ್ತಿ ಜೋರಾಗಿ ಬೊಬ್ಬೆ ಹೊಡೆಯುತ್ತಲೇ ಇದ್ದರು.
ಇನ್ನೂ ಹಲವರ ಕಾಲೆಳೆದ ಕಾಶಪ್ಪನವರ
೨ಎ ಮೀಸಲಾತಿ ಹೋರಾಟದ ಕುರಿತು ಮಾತನಾಡಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಇನ್ನೂ ಹಲವರ ಕಾಲೆಳೆದರು. ವೇದಿಕೆಗೆ ಬರುತ್ತಿದ್ದಂತೆಯೇ ಮೊದಲು ಕಾಲೆಳೆದದ್ದೇ ಹೆಂಡತಿಯದ್ದು!
ಒಬ್ಬೊಬ್ಬ ನಾಯಕರನ್ನು ಒಬ್ಬೊಬ್ಬ ಹೋರಾಟಗಾರರಿಗೆ ಹೋಲಿಸಿ ಮಾತನಾಡಿದ ಕಾಶಪ್ಪನವರ, ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಹುಲಿ, ಹೆಬ್ಬುಲಿ, ಬಾಹುಬಲಿ ಎಂದೆಲ್ಲ ವರ್ಣಿಸಿದರು. ಕೊನೆಗೆ, ವೇದಿಕೆಯ ಮೇಲೆ ಕುಳಿತಿದ್ದಾಳೆ ನನ್ ಹೆಂಡ್ತಿ ಬೆಳವಡಿ ಮಲ್ಲಮ್ಮ ಎಂದು ವೀಣಾ ಕಾಶಪ್ಪನವರ ಬಗ್ಗೆ ಹೇಳಿದರು.
ʻʻಹೂಂ ಹೌದು ಮತ್ತೆ.. ಆಕೀದು ಹೇಳಬೇಕು. ಮತ್ ಮನಿಗೆ ಹೋಗಿ ನನ್ ಕೇಳ್ತಾಳುʼʼ ಎಂದು ಕಾಶಪ್ಪನವರ ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.
ಕಾರು ಹಿಡ್ಕೊಂಡು ಹೋದ ಸ್ವಾಮೀಜಿ
ʻʻನಮ್ಮ ಕರೆಗೆ ಓಗೊಟ್ಟು ಬಹಳ ಜನ ಸ್ವಾಮೀಜಿಗಳು ಬಂದ್ರು. ಪಾದಯಾತ್ರೆ ಮಾಡಿ ಕಾಲಲ್ಲಿ ಗುಳ್ಳೆ ಎಬ್ಬಿಸಿಕೊಂಡ್ರು. ಅದನ್ನ ಫೇಸ್ಬುಕ್ ಹಾಗೂ ಪೇಪರ್ ನಲ್ಲಿ ಹಾಕಿಸಿದರು. ಆದರೆ, ಕೆಲವು ಸ್ವಾಮೀಜಿಗಳು ಕಾರು ಪಡೆದುಕೊಂಡು ಹೋದವರು ಮತ್ತೆ ಬಂದಿಲ್ಲ. ಮಠದಲ್ಲಿ ಕುಳಿತು ಹೋರಾಟ ಮಾಡ್ರೀ ಎಂದು ಹೇಳಿದ್ದರುʼʼ ಎಂದು ಸ್ವಾಮೀಜಿಯೊಬ್ಬರಿಗೆ ಕಾಶಪ್ಪನವರ ಟಾಂಗ್ ಹೊಡೆದರು
ʻʻಮಠದಲ್ಲಿ ಕುಳಿತು ನೀವು ಹೇಗೆ ಹೋರಾಟ ಮಾಡ್ತೀರಿ? ಎಸಿಯಲ್ಲಿ ಕುಳಿತುಕೊಂಡು ಹೋರಾಟ ಮಾಡ್ತೀರಾ?ʼ ಎಂದು ಕೇಳಿದರು ಕಾಶಪ್ಪನವರ.
ಹೋರಾಟಕ್ಕೆ ಬರದ ನಾಯಕರನ್ನೂ ತರಾಟೆಗೆ ತೆಗೆದುಕೊಂಡ ಕಾಶಪ್ಪನವರ, ʻʻನೀವು ಪಂಚಮಸಾಲಿಯವರಿಗೆ ಹುಟ್ಟಿದ್ದು ನಿಜವಾʼ ಎಂದು ಪ್ರಶ್ನಿಸಿದರು.
ʻʻಪ್ರತಿಯೊಬ್ಬರಿಗೂ ಕೈ ಮುಗಿದು ಕೇಳಿಕೊಳ್ತೀನಿ. ಯಾರಿಗೂ ಹೆದರದೆ ಹೋರಾಟಕ್ಕೆ ಬನ್ನಿ, ಪಂಚಮಸಾಲಿಗಳ ತಲೆಯ ಮೇಲೆ ಕಾಲಿಟ್ಟು ಅಧಿಕಾರಕ್ಕೆ ಬರ್ತೀರಿ. ಆದರೆ ಕಡೆಗೆ ಪಂಚಮಸಾಲಿಗಳನ್ನು ನಿರ್ಲಕ್ಷ್ಯ ಮಾಡ್ತೀರಿ. ಇನ್ಮುಂದೆ ನಿಮ್ ಆಟ ಬಂದ್ ಆಗುತ್ತೆ. ನೀವು ಬಂದು ಜಯಮೃತ್ಯುಂಜಯ ಸ್ವಾಮೀಜಿಗಳ ಕಾಲು ಹಿಡಿಬೇಕುʼʼ ಎಂದು ಎಚ್ಚರಿಸಿದರು.