ಶಿಗ್ಗಾಂವ್ (ಹಾವೇರಿ ಜಿಲ್ಲೆ): ೨ಎ ಮೀಸಲಾತಿಗಾಗಿ ಕಳೆದ ಹಲವು ವರ್ಷದಿಂದ ಹೋರಾಟ ಮಾಡುತ್ತಿರುವ ಪಂಚಮಸಾಲಿ ಸಮಾಜ ಸೋಮವಾರ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವ್ ನಿವಾಸಕ್ಕೇ ಮುತ್ತಿಗೆ ಹಾಕಿದೆ.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೆಳಗ್ಗಿನಿಂದಲೇ ಇಲ್ಲಿ ಬೃಹತ್ ಪ್ರತಿಭಟನೆ ಆರಂಭಗೊಂಡಿದ್ದು, ಬಳಿಕ ಮೆರವಣಿಗೆ ಮೂಲಕ ಮಧ್ಯಾಹ್ನ ೨ ಗಂಟೆ ಹೊತ್ತಿಗೆ ಮುಖ್ಯಮಂತ್ರಿಗಳ ನಿವಾಸವನ್ನು ತಲುಪಿದೆ. ಸವಣೂರು-ಶಿಗ್ಗಾಂವ್ ರಸ್ತೆಯನ್ನು ಬಂದ್ ಮಾಡಿ ನಡೆಸಿರುವ ಈ ಪ್ರತಿಭಟನೆ ಮತ್ತು ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದಾರೆ.
ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಧರಣಿ, ಮೆರವಣಿಗೆ ನಡೆದಿದೆ. ಸಮಾಜದ ಮುಖಂಡರಾದ ಬಸವನಗೌಡ ಪಾಟೀಲ್ ಯತ್ನಾಳ, ವಿಜಯಾನಂದ ಕಾಶಪ್ಪನವರ, ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ನಾಲ್ಕು ಬಾರಿ ಮಾತು ತಪ್ಪಿದೆ
ಜಯ ಮೃತ್ಯುಂಜಯ ಸ್ವಾಮಿ ನೇತೃತ್ವದಲ್ಲಿ ಕಳೆದ ಎರಡು ವರ್ಷದಿಂದ ಮೀಸಲಿಗಾಗಿ ಹೋರಾಟ ನಡೆಯುತ್ತಲೇ ಇದೆ. ರಾಜ್ಯ ಸರಕಾರ ಪ್ರತಿ ಬಾರಿ ಪ್ರತಿಭಟನೆ ನಡೆದಾಗಲೂ ಒಂದೊಂದು ಗಡುವನ್ನು ನೀಡುತ್ತಿದ್ದು, ಹೀಗೆ ನಾಲ್ಕು ಬಾರಿ ಪ್ರತಿಭಟನೆಗಳನ್ನು ಮಾತಿನ ನೆಲೆಯಲ್ಲಿ ನಿಲ್ಲಿಸಲಾಗಿತ್ತು. ಸರಕಾರ ನಾಲ್ಕು ಬಾರಿಯೂ ಮಾತಿಗೆ ತಪ್ಪಿದೆ. ಈ ಕಾರಣಕ್ಕಾಗಿ ಈ ಬಾರಿ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ನಲ್ಲಿರುವ ಸಿಎಂ ಅವರ ಮನೆಗೇ ಮುತ್ತಿಗೆ ಹಾಕಲು ನಿರ್ಧರಿಸಲಾಗಿತ್ತು.
ಮಂಗಳವಾರ ಮುಂಜಾನೆ ಒಂಬತ್ತು ಗಂಟೆಯಿಂದಲೇ ರಸ್ತೆಯಲ್ಲಿ ಪೆಂಡಾಲ್ ಹಾಕಿ ಧರಣಿ ನಡೆದಿದೆ. ಶಿಗ್ಗಾಂವ್‌ನ ಚೆನ್ನಮ್ಮ ವೃತ್ತದಲ್ಲಿ ಧರಣಿ ನಡೆದಿದ್ದು, ಶ್ರೀಗಳು ಶಿಗ್ಗಾಂವ್ ಪಟ್ಟಣದಲ್ಲಿರುವ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಧರಣಿಯನ್ನು ಉದ್ಘಾಟಿಸಿದರು. ಮಾಲಾರ್ಪಣೆ ಬಳಿಕ ಸ್ವಾಮೀಜಿ ಜನರತ್ತ ಟವೆಲ್ ಬೀಸಿದರು. ಸಾವಿರಾರು ಮಂದಿ ರಾಜ್ಯದ ಹಲವು ಭಾಗಗಳಿಂದ ಆಗಮಿಸಿದ್ದು, ಅವರೆಲ್ಲರೂ ಪಂಚಮಸಾಲಿ ಸಮುದಾಯದ ಕೇಸರಿ ಧ್ವಜವನ್ನು ಬೀಸುತ್ತಾ ಮೆರವಣಿಗೆಯಲ್ಲಿ ಭಾಗಿಯಾದರು.
ಸಿಎಂ ನಿವಾಸಕ್ಕೆ ಬಿಗೂ ಪೊಲೀಸ್ ಭದ್ರತೆ
ಈ ನಡುವೆ ಶಿಗ್ಗಾಂವ್-ಸವಣೂರ ಪಟ್ಟಣದ ನಡುವೆ ಇರುವ ಸಿಎಂ ನಿವಾಸಕ್ಕೂ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.