Site icon Vistara News

ಪಂಚಮಸಾಲಿ ಮೀಸಲಾತಿ: ಎರಡು ತಿಂಗಳು ಬೀಸೊ ದೊಣ್ಣೆಯಿಂದ ಬೊಮ್ಮಾಯಿ ಪಾರು

basava jayamrutyunjaya swamiji

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಕುರಿತಂತೆ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬುಧವಾರ ಮಹತ್ವದ ಸಭೆ ನಡೆಯಿತು. ಪಂಚಮಸಾಲಿ ಮೀಸಲಾತಿ ನೀಡುವುದಾಗಿ ಈ ಹಿಂದೆ ತಿಳಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆ ಎದುರು ಹೋರಾಟ ನಡೆಸುವ ತೀರ್ಮಾನವನ್ನು ಎರಡು ತಿಂಗಳವರೆಗೆ ಮುಂದೂಡಿರುವುದಾಗಿ ಸ್ವಾಮೀಜಿ ತಿಳಿಸಿರುವುದು ಬೊಮ್ಮಾಯಿ ಅವರಿಗೆ ಸ್ವಲ್ಪ ನಿರಾಳತೆ ನೀಡಿದೆ.

ಪಂಚಮಸಾಲಿ ಸಮುದಾಯದ ಬೇಡಿಕೆಯನ್ನು ಆಳಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಈ ಹಿಂದೆ ಹೇಳಿದ್ದರು. ಈ ಕಾರ್ಯಕ್ಕಾಗಿ ಸಚಿವ ಸಿಸಿ ಪಾಟೀಲ್‌ ಅವರನ್ನು ಸರ್ಕಾರದ ಪ್ರತಿನಿಧಿಯಾಗಿ ನಿಯೋಜನೆ ಮಾಡಿದ್ದರು.

ಇದನ್ನೂ ಓದಿ | ಪಂಚಮಸಾಲಿ ಸಮುದಾಯದಿಂದ 2ಎ ಮೀಸಲಾತಿ ಹೋರಾಟ, ಸಿಎಂ ನಿವಾಸದ ಮುಂದೆ ಧರಣಿಗೆ ದಿನ ನಿಗದಿ

ಅದರಂತೆ ಸ್ವಾಮೀಜಿ, ನಿಯೋಗದ ಜತೆಗೆ ಸಿಸಿ ಪಾಟೀಲ್‌ ಬುಧವಾರ ಸಭೆ ನಡೆಸಿದರು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌, ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌,ಅರವಿಂದ ಬೆಲ್ಲದ್, ಸಿದ್ದು ಸವದಿ, ಮಾಜಿ‌ ಸಚಿವ ವಿನಯ್ ಕುಲಕರ್ಣಿ, ಕಳಕಪ್ಪ ಬಂಡಿ, ಎಂ.ಪಿ. ನಾಡಗೌಡ ಸೇರಿ ಮುಖಂಡರು ಭಾಗಿಯಾಗಿದ್ದರು. ಸಭೆಯ ನಂತರ ಸಿಸಿ ಪಾಟೀಲ್‌ ಹಾಗೂ ಯತ್ನಾಳ್‌, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸಭೆಗೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹಾಗೂ ಸಚಿವ ಮುರುಗೇಶ್ ನಿರಾಣಿ ಗೈರಾಗಿದ್ದರು. ಕಳೆದ ವರ್ಷದ ಪಾದಯಾತ್ರೆ ನಂತರದಲ್ಲಿ ಇಬ್ಬರೂ ಮೀಸಲಾತಿ ಕುರಿತಂತೆ ತುಸು ಅಂತರವನ್ನು ಕಾಯ್ದುಕೊಂಡಿದ್ದಾರೆ.

ಸಭೆಯಲ್ಲಿ ಯಾವ ವಿಚಾರ ಚರ್ಚೆ ಆಯಿತು, ಯಾವ ನಿರ್ಧಾರ ಕೈಗೊಳ್ಳಲಾಯಿತು ಎಂಬ ಕುರಿತ ಮಾಧ್ಯಮಗಳ ಪ್ರಶ್ನೆಗೆ, ಪ್ಲೀಸ್‌ ಪ್ಲೀಸ್‌ ಎನ್ನುತ್ತ ತಲೆಯಾಡಿಸಿದ ಸಿಸಿ ಪಾಟೀಲ್‌ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಂತರ ಆಗಮಿಸಿದ ಯತ್ನಾಳ್‌, ಸಿಸಿ ಪಾಟೀಲರತ್ತ ಬೆರಳು ತೋರಿಸಿ ಮೌನವಾಗಿ ಹೊರನಡೆದರು. ಸಿಎಂ ಬಸವರಾಜ ಬೊಮ್ಮಾಯಿ ಸಹ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಸ್ವತಃ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.

ಆಗಸ್ಟ್‌ ೨೨ರವರೆಗೆ ಗಡುವು

ಈ ಕುರಿತು ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮೀಸಲಾತಿ ನೀಡುವ ಕುರಿತು ಸರ್ಕಾರ ನಮ್ಮ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಸಿಎಂ ನಿವಾಸದೆದುರು ಹೋರಾಟ ಮಾಡಲು ತೀರ್ಮಾನ ಮಾಡಿದ್ದೆವು. ಈಗಾಗಲೇ ಸಾಕಷ್ಟು ಪೂರ್ವಭಾವಿ ಸಭೆ ಕೂಡ ನಡೆಸಿದ್ದೇವೆ. ಈಗಾಗಲೇ ಒಂದು ಸುತ್ತಲಿನ ಸಭೆ ಕೂಡ ಸೇರಿ ಮಾತುಕತೆ ಆಗಿದೆ.

ಆದರೆ ಈಗ ಸಿಎಂ ಬಸವರಾಜ ಬೊಮ್ಮಾಯಿ‌ ಭರವಸೆ ಕೊಟ್ಟಿದ್ದಾರೆ. ಸಿಎಂ ಅವರಿಂದ ಭರವಸೆ ಸಿಗುವವರೆಗೂ ಹೊರಟ ಕೈ ಬಿಡುವುದಿಲ್ಲ ಎಂದು ಹೇಳಿದ್ದೆವು. ಎರಡು ತಿಂಗಳ ಒಳಗೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಆಗಸ್ಟ್‌ ೨೨ರೊಳಗೆ ಮೀಸಲಾತಿ ನೀಡುವುದಾಇ ಹೇಳಿದ್ದಾರೆ. ಹೀಗಾಗಿ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡುವ ಪ್ರಸ್ತಾವವನ್ನು ಮುಂದೂಡಲಾಗಿದೆ. ಸದ್ಯಕ್ಕೆ ಗದಗ ಹಾಗೂ ಹಾವೇರಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಭರವಸೆ ಈಡೇರಿಲ್ಲ ಎಂದರೆ ಶಿಗ್ಗಾಂವ್‌ನಲ್ಲಿ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಸ್ವಾಮೀಜಿ ಹೇಳಿದ್ದಾರೆ.

ಇದನ್ನೂ ಓದಿ | ಬೇಡಿಕೆ ಈಡೇರಿಸಿದರೆ CMಗೆ ಶೇಂಗಾ ಹೋಳಿಗೆ ಊಟ, ಕಲ್ಲುಸಕ್ಕರೆ ತುಲಾಭಾರ!

Exit mobile version