ಹಾವೇರಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಕ್ಕೆ ಆಗಸ್ಟ್ 22ರ ಮಧ್ಯರಾತ್ರಿ 12ಗಂಟೆವರೆಗೆ ಗಡುವು ನೀಡಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಮೀಸಲಾತಿ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ ಎಂದು ಜೂನ್ 27ರಂದು ಬೆಂಗಳೂರಿನಲ್ಲಿ ಸಿಎಂ ಮನೆಗೆ ಮುತ್ತಿಗೆ ಹಾಕಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿತ್ತು. ಈ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಮಾತುಕತೆ ನಡೆಸಿದ್ದರು.
ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಕೊಟ್ಟಿದ್ದಾರೆ. ಸಿಎಂ ಅವರಿಂದ ಭರವಸೆ ಸಿಗುವವರೆಗೂ ಹೊರಾಟ ಕೈ ಬಿಡುವುದಿಲ್ಲ ಎಂದು ಹೇಳಿದ್ದೆವು. ಎರಡು ತಿಂಗಳ ಒಳಗೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಆಗಸ್ಟ್ ೨೨ರೊಳಗೆ ಮೀಸಲಾತಿ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡುವ ಪ್ರಸ್ತಾವವನ್ನು ಮುಂದೂಡಲಾಗಿದೆ. ಸದ್ಯಕ್ಕೆ ಗದಗ ಹಾಗೂ ಹಾವೇರಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಭರವಸೆ ಈಡೇರಿಲ್ಲ ಎಂದರೆ ಶಿಗ್ಗಾಂವ್‌ನಲ್ಲಿ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದ್ದರು.
ಇದೇ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ನೀಡುವಂತೆ ಆಗ್ರಹಿಸಿ ಜೂನ್ 27 ರಂದು ಉಪವಾಸ ಸತ್ಯಾಗ್ರಹವನ್ನು ಮಾಡಲು ತೀರ್ಮಾನ ಮಾಡಲಾಗಿತ್ತು. ಮುಖ್ಯಮಂತ್ರಿಗಳು ಮೂರು ಸಲ ಮಾತುಕತೆ ಕರೆದರೂ ನಾವು ಹೋಗಿರಲಿಲ್ಲ. ಆದರೆ ಸಚಿವ ಸಿ.ಸಿ. ಪಾಟೀಲ್ ಮನವಿ ಮೇರೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ನಾವೆಲ್ಲ ಸಿಎಂ ಜತೆ ಮಾತುಕತೆ ನಡೆಸಿದ್ದೆವು. 6 ತಿಂಗಳು ಅವಕಾಶ ಮಾಡಿಕೊಡಿ ,ಆಯೋಗದವರು ಹಾವೇರಿ ಜಿಲ್ಲೆಯಲ್ಲಿ ಅದ್ಯಯನ ಮಾಡುತ್ತಿದ್ದಾರೆ ಎಂದು ಸಿಎಂ ಕೇಳಿಕೊಂಡರು. 6 ತಿಂಗಳು ಕಾಯಲು ಆಗುವುದಿಲ್ಲ, 2 ತಿಂಗಳು ಕಾಲಾವಕಾಶ ಕೊಡುತ್ತೇವೆ ಎಂದು ಒಪ್ಪಿಕೊಂಡೆವು.
ಇದನ್ನೂ ಓದಿ | ಪಂಚಮಸಾಲಿ ಮೀಸಲಾತಿ: ಎರಡು ತಿಂಗಳು ಬೀಸೊ ದೊಣ್ಣೆಯಿಂದ ಬೊಮ್ಮಾಯಿ ಪಾರು
ಸಿಎಂ ಮನವಿ ಮೇರೆಗೆ ಸತ್ಯಾಗ್ರಹವನ್ನು 2 ತಿಂಗಳು ಮುಂದೂಡಿದೆವು. ಆಗಸ್ಟ್ 22ಕ್ಕೆ ಸರ್ಕಾರಕ್ಕೆ ಕೊಟ್ಟ ಕಾಲಾವಕಾಶ ಮುಗಿಯುತ್ತಿದೆ. 2 ತಿಂಗಳಲ್ಲಿ ಮೀಸಲಾತಿ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳದಿದ್ದರೆ ತಾವೇ ಬಂದು ಸಿಎಂ ಮನೆ ಮುಂದೆ ಹೋರಾಟ ಮಾಡುತ್ತೇನೆ ಎಂದು ಯತ್ನಾಳ್ ಹೇಳಿದ್ದರು. ಸಿಎಂ ಮಾತು ಕೊಟ್ಟ ಹಾಗೆ ನಡೆದುಕೊಳ್ಳಬೇಕು. ನಾವು 2 ತಿಂಗಳು ಸುಮ್ಮನೆ ಕುಳಿತಿಲ್ಲ. ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್‌ನಲ್ಲಿ ಸತ್ಯಾಗ್ರಹ ಮಾಡಿದ್ದೆವು. ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಪ್ರಲ್ಹಾದ ಜೋಶಿಯವರ ಮೇಲೂ ಒತ್ತಡ ಹಾಕಿದ್ದೇವೆ. ಈ ತಿಂಗಳು ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಶಿವಮೊಗ್ಗದಲ್ಲಿ ಹೋರಾಟ ಶುರು ಮಾಡಿಕೊಂಡಿದ್ದೇವೆ. ಯಡಿಯೂರಪ್ಪನವರ ಮೂಲಕ ಸಿಎಂ ಮೇಲೆ ಒತ್ತಡ ಹಾಕಲು ಶಿವಮೊಗ್ಗ ಜಿಲ್ಲೆಯಲ್ಲಿ ಹೋರಾಟ ಮಾಡಲಾಗುತ್ತಿದೆ ಎಂದರು.
ಮಧ್ಯರಾತ್ರಿ 12ರವರೆಗೆ ಕಾಯುತ್ತೇವೆ
ಸಿಎಂ ಬೊಮ್ಮಾಯಿಯವರ ಮೇಲೆ ಬಹಳ ನಂಬಿಕೆ ಇಟ್ಟಿದ್ದೇವೆ ಎಂದ ಸ್ವಾಮೀಜಿ, ಪದೇಪದೆ ಮಾತು ಕೊಟ್ಟು ಹೋರಾಟದ ಕಾವು ಕಡಿಮೆ ಮಾಡಲು ಸರ್ಕಾರ ಪ್ರಯತ್ನ ಮಾಡಬಾರದು. ಮೀಸಲಾತಿ ಕೊಡುವುದಾದರೆ ಕೊಟ್ಟು ಬಿಡಿ. ಇಲ್ಲದಿದ್ದರೆ ಆಗುವುದಿಲ್ಲ ಎಂದು ಹೇಳಿಬಿಡಿ. ಅಗಸ್ಟ್ 22ರ ಮದ್ಯರಾತ್ರಿವರೆಗೂ ಕಾಯುತ್ತೇವೆ. ನಿಮ್ಮ ಸಿಹಿ ಸುದ್ದಿಗಾಗಿ ಕಾಯುತ್ತೇವೆ. ವಿನಾಕಾರಣ ವಿಳಂಬ ಮಾಡದೇ ಮೀಸಲಾತಿ ಘೋಷಣೆ ಮಾಡಿ. ವಿಜಯಪುರ , ಧಾರವಾಡ, ಭಾಗಲಕೋಟೆ ಜಿಲ್ಲೆಗಳಲ್ಲಿ ಇನ್ನೂ ಆಯೋಗದ ಸಮೀಕ್ಷೆ ನಡೆದಿಲ್ಲ. ಅಗಸ್ಟ್ 22ಕ್ಕೆ ಮೀಸಲಾತಿ ಘೋಷಣೆ ಮಾಡಿದರೆ ಮಾರನೇ ದಿನ ಶಿಗ್ಗಾಂವಿಯ ಚೆನ್ನಮ್ಮ ಸರ್ಕಲ್‌ನಲ್ಲಿ ಸನ್ಮಾನ ಮಾಡುತ್ತೇವೆ. ಬಸವರಾಜ ಬೊಮ್ಮಾಯಿ ಕಟ್‌ಔಟ್‌ಗೆ ಹಾಲಿನ ಅಭಿಷೇಕ ಮಾಡುತ್ತೇವೆ. ಮೀಸಲಾತಿ ಘೋಷಣೆ ಮಾಡದೇ ಇದ್ದರೆ ಅಗಸ್ಟ್ 23 ರಂದೇ ಹೋರಾಟ ಮಾಡುತ್ತೇವೆ.
ಸತ್ಯಾಗ್ರಹವೋ, ಶಿಗ್ಗಾಂವಿ ಬಂದ್ ಮಾಡಬೇಕೋ ಅಂದೇ ನಿರ್ಧಾರ ಮಾಡುತ್ತೇವೆ. ಇನ್ನು ಮೇಲೆ ಹೋರಾಟ ವಾಪಾಸ್ ತೆಗೆದುಕೊಳ್ಳುವ ಮಾತೇ ಇಲ್ಲ. ನಮ್ಮ ಜನರ ನಂಬಿಕೆಗನುಗುಣವಾಗಿ ಬದ್ಧತೆ ಪ್ರದರ್ಶನ ಮಾಡಲೇ ಬೇಕಾಗುತ್ತದೆ. ಹಾಲುಮತ, ವಾಲ್ಮೀಕಿ , ಪಂಚಮಸಾಲಿ ಮೂರೂ ಸಮುದಾಯಕ್ಕೆ ನ್ಯಾಯ ಕೊಟ್ಟರೆ ಮಾತ್ರ ಬಿಜೆಪಿಯವರು ಮಿಷನ್ 150 ಗುರಿ ಮುಟ್ಟುತ್ತಾರೆ. ಮೂರು ಸಮುದಾಯಗಳಿಗೆ ಸರ್ಕಾರ ನ್ಯಾಯ ಒದಗಿಸಬೇಕು ಎಂದರು.