ಚಿಕ್ಕೋಡಿ: “ಪಂಚಮಸಾಲಿ ನಡಿಗೆ ವಿಧಾನಸೌಧದ ಒಳಗೆ” ಎಂದು ಗುಡುಗಿದ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಡಿಸೆಂಬರ್ ೧೨ನೇ ತಾರೀಖಿನಂದು ೨೫ ಲಕ್ಷ ಪಂಚಮಸಾಲಿಗಳು ಒಟ್ಟಿಗೆ ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಮೂಲಕ ಪಂಚಸಾಲಿ ಸಮುದಾಯದವರಿಗೆ ೨ಎ ಮೀಸಲಾತಿಯನ್ನು ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡವನ್ನು ಹಾಕಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿಗಾಗಿ ಹುಕ್ಕೇರಿಯಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಒಂದು ಸಮಾಜಕ್ಕೆ ಮೀಸಲಾತಿ ನೀಡಿ ಪಂಚಮಸಾಲಿ ಸಮುದಾಯವನ್ನು ಕಡೆಗಣನೆ ಮಾಡಲಾಗಿದೆ. ಮೀಸಲಾತಿ ಕೊಡುವುದಿದ್ದರೆ, ಸರಿ ಎನಿಸಿದರೆ ಸರ್ಕಾರ ಕೂಡಲೇ ಘೋಷಣೆ ಮಾಡಬೇಕು. ಸಮಯ ಬೇಕೆಂದರೆ ತೆಗೆದುಕೊಳ್ಳಲಿ. ಆದರೆ, ಘೋಷಣೆ ಮಾಡುವುದನ್ನು ಮುಂದೂಡಬೇಡಿ ಎಂದು ಆಗ್ರಹಿಸಿದರು.
ಡಿಸೆಂಬರ್ ೧೨ನೇ ತಾರೀಖಿನಂದು ೨೫ ಲಕ್ಷ ಪಂಚಮಸಾಲಿಗಳು ಒಟ್ಟಿಗೆ ಸೇರಿ ಬರುತ್ತೇವೆ. ಅಲ್ಲಿಯೇ ಹಕ್ಕೊತ್ತಾಯ ಮಂಡಿಸುತ್ತೇವೆ. ನಮ್ಮ ಹಕ್ಕೊತ್ತಾಯವನ್ನು ನಾವು ಅಲ್ಲಿಯೇ ಮಾಡುತ್ತೇವೆ. ಅಂದು ಜೆ.ಎಚ್. ಪಟೇಲರ ಪುಣ್ಯತಿಥಿಯ ದಿನವಾಗಿದೆ. ಹೀಗಾಗಿ ಪಂಚಮಸಾಲಿ ನಡಿಗೆ ವಿಧಾನಸೌಧದ ಒಳಗೆ ಎಂದು ವಿಧಾನಸೌಧಕ್ಕೆ ಹೋಗುತ್ತೇವೆ ಎಂದು ಸ್ವಾಮೀಜಿ ಘೋಷಿಸಿದರು.
ಇದನ್ನೂ ಓದಿ | ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹುಕ್ಕೇರಿಯಲ್ಲಿ ಬೃಹತ್ ರ‍್ಯಾಲಿಗೆ ಚಾಲನೆ
ಅರುಣ್ ಸಿಂಗ್ ಹೇಳಿಕೆಗೆ ಕಿಡಿ
ನಮ್ಮ ಸಮುದಾಯದ ನಾಯಕರನ್ನು ನಾಯಕ ಅಲ್ಲ ಎಂದರೆ ಸಹಿಸುವುದಿಲ್ಲ. ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಅರವಿಂದ ಬೆಲ್ಲದ ಅಷ್ಟೇ ಅಲ್ಲ, ನಮ್ಮ ಸಮುದಾಯದ ಯಾರ ಬಗ್ಗೆಯೂ ಹಗುರ ಮಾತು ಬೇಡ. ಅವರನ್ನು ಅಗೌರವಾಗಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಜಯಮೃತ್ಯುಂಜಯ ಸ್ವಾಮೀಜಿ ಅವರು ಯತ್ನಾಳ್ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಬಿಜೆಪಿ ನಾಯಕರ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಮ್ಮ ಸಮಾಜದ ನಾಯಕರೊಂದಿಗೆ ಇಡೀ ಸಮುದಾಯವಿದೆ. ಇಷ್ಟು ದಿನ ನಾವು ಬೇರೆ ನಾಯಕರನ್ನು ಹಿಂಬಾಲಿಸುತ್ತಿದ್ದೆವು. ಆದರೆ, ಈಗ ನಮ್ಮ ನಾಯಕರನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರೆ, ನಮ್ಮ ಸಮಾಜ ಸುಮ್ಮನಿರುವುದಿಲ್ಲ. ನಿಮ್ಮ ಪಕ್ಷದ ಆಂತರಿಕ ವಿಚಾರ ನಿಮಗೆ ಬಿಟ್ಟಿದ್ದು, ನಮ್ಮ ನಾಯಕರ ವಿರುದ್ಧ ಪಿತೂರಿ ಮಾಡಿದರೆ, ಸಮಾಜ ಸಿಡಿದೇಳುವುದು ಖಚಿತ ಎಂದ ಸ್ವಾಮೀಜಿ ಹೇಳಿದರು.
ಸರ್ಕಾರಕ್ಕೆ ಗಡುವು ಕೊಟ್ಟು ಮುಗಿದು ಹೋಗಿದೆ. ಎಲ್ಲ ಸ್ವಾಮೀಜಿಗಳು ಅನುದಾನ ಕೇಳಲು ಹೋಗುತ್ತಾರೆ. ಆದರೆ, ನಾವು ಪ್ರತಿಭಟಿಸಲು ಹೋಗಿದ್ದೇವೆ ಎಂದು ಸ್ವಾಮೀಜಿ ಹೇಳಿದರು.
ಇದನ್ನೂ ಓದಿ | ʼನೊಂದವರ ನೋವ ನೋಯದವರೆತ್ತ ಬಲ್ಲರೋʼ: ವಚನಾನಂದ ಸ್ವಾಮೀಜಿ ಕುರಿತು ಜಯಮೃತ್ಯುಂಜಯ ಸ್ವಾಮೀಜಿ ಬೇಸರ