ಕೋಲಾರ: ಮಳೆಯಿಂದ ಮುಂದೂಡಿಕೆಯಾಗಿದ್ದ ಜೆಡಿಎಸ್‌ನ ಪಂಚರತ್ನ ಸಮಾವೇಶ ಇಂದು ನಡೆಯಲಿದ್ದು, ರಥಯಾತ್ರೆಗೆ ಎಚ್.ಡಿ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.
ನವೆಂಬರ್ 1ರಂದು ಮುಳುಬಾಗಿಲು ಕುರುಡುಮಲೆ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಎಚ್‌ಡಿಕೆ ಚಾಲನೆ ನೀಡಿದ್ದರು. ಮಲೆಯ ಹಿನ್ನೆಲೆಯಿಂದ ಯಾತ್ರೆ ಮುಂದೂಡಲಾಗಿತ್ತು. ಇಂದು ಪಂಚರತ್ನ ಸಮಾವೇಶದ ಹಿನ್ನೆಲೆಯಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಿದ್ದಾರೆ.
ಮಧ್ಯಾಹ್ನ 12.30ಕ್ಕೆ ಮುಳುಬಾಗಿಲು ಬೈಪಾಸ್ ರಸ್ತೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಭಾಗದ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಇಂದು ಚುನಾವಣೆಯ ಮೊದಲ ಹಂತದ ಅಭ್ಯರ್ಥಿಗಳನ್ನೂ ಕುಮಾರಸ್ವಾಮಿ ಘೋಷಿಸಲಿದ್ದಾರೆ. 80 ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಸಾಧ್ಯತೆ ಇದೆ.
ಕ್ಷೇತ್ರವಾರು ವರದಿ, ಅಭ್ಯರ್ಥಿ ವರ್ಚಸ್ಸು, ಪಕ್ಷ ಸಂಘಟನೆ, ಚುನಾವಣಾ ಸಿದ್ಧತೆ ಆಧರಿಸಿ ಟಿಕೆಟ್ ಫೈನಲ್ ಮಾಡಿದ್ದಾರೆ. ಬಿಜೆಪಿ, ಕಾಂಗ್ರೆಸ್‌ಗಿಂತ ಮೊದಲೇ ಅಭ್ಯರ್ಥಿಗಳ ಘೋಷಣೆ ಮಾಡುವ ತಂತ್ರವನ್ನು ಜೆಡಿಎಸ್ ರೂಪಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಗೆ ಪರ್ಯಾಯ ಶಕ್ತಿಯಾಗಲು ಜೆಡಿಎಸ್ ಯೋಜಿಸಿದೆ. ಈ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗ, ಕರಾವಳಿ ಭಾಗ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದಲ್ಲಿ ರಥಯಾತ್ರೆ ನಡೆಸಲಿರುವ ಕುಮಾರಸ್ವಾಮಿ ಚುನಾವಣೆಯವರೆಗೂ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ. ಈ ಮೂಲಕ ಮಿಷನ್ 123 ಸಾಧಿಸಲು ಮುಂದಾಗಿದ್ದಾರೆ.
ಆರೋಗ್ಯ, ಶಿಕ್ಷಣ, ಕೃಷಿ, ವಸತಿ, ಮಹಿಳಾ ಮತ್ತು ಯುವಕರ ಸಬಲೀಕರಣದ ಕುರಿತು ಯೋಜನೆ ರೂಪಿಸಿರುವ ಕುಮಾರಸ್ವಾಮಿ, ಅಧಿಕಾರಕ್ಕೇರಿದರೆ ಯೋಜನೆ ಜಾರಿ ಮಾಡುವುದಾಗಿ ಘೋಷಿಸಿದ್ದಾರೆ. ತೆಲಂಗಾಣದ ಸಿಎಂ ಕೆಸಿಆರ್ ಮಾದರಿಯಲ್ಲಿ ಯೋಜನೆ ರೂಪಿಸಿರುವ ಅವರು, ಯಾತ್ರೆಯ ಜೊತೆ ಜೊತೆಗೆ ಗ್ರಾಮವಾಸ್ತವ್ಯವನ್ನೂ ಮಾಡಲಿದ್ದಾರೆ. ಆಯಾ ದಿನ ಯಾತ್ರೆ ಕೊನೆಗೊಳ್ಳುವ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. 20-20 ಸರ್ಕಾರದ ಅವಧಿಯಲ್ಲಿ ಗ್ರಾಮವಾಸ್ತವ್ಯ ಯೋಜನೆಯಿಂದಲೇ ಸಾಕಷ್ಟು ಜನಮನ್ನಣೆ ಗಳಿಸಿದ್ದ ಅವರು ಮತ್ತೆ ಶಕ್ತಿ ಪ್ರದರ್ಶನಕ್ಕೆ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನೇ ಆಯ್ದುಕೊಂಡಿದ್ದಾರೆ. ಯಾತ್ರೆ ವೇಳೆ ಸ್ಥಳೀಯ ನಾಯಕರ ಜೊತೆ, ಸಮುದಾಯವಾರು ಸಭೆ ನಡೆಸಿ, ಈ ಮೂಲಕ ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಇದನ್ನೂ ಓದಿ | H.D. ಕುಮಾರಸ್ವಾಮಿ ಕನಸಿನ ಯೋಜನೆಗೆ ಆರಂಭದಲ್ಲೇ ಅಡ್ಡಿ: ಪಂಚರತ್ನ ರಥಯಾತ್ರೆ ಮುಂದೂಡಿಕೆ