ಮೈಸೂರು: ಇಷ್ಟು ವರ್ಷ ರಾಜಕಾರಣದಲ್ಲಿ ಅಧಿಕಾರದಲ್ಲಿದ್ದದ್ದು ಅತ್ಯಂತ ಕಡಿಮೆ ಅವಧಿಗೆ, ಈ ಸಮಯದಲ್ಲಿ ಕರ್ನಾಕಕ್ಕೆ ಕೆಟ್ಟ ಹೆಸರು ತರುವಂತಹ ಯಾವುದೇ ಕೆಲಸ ಮಾಡಿಲ್ಲ. ನಮ್ಮನ್ನು, ಪಕ್ಷವನ್ನು ಹಾಗೂ ನಮ್ಮ ದುಡಿಮೆಯನ್ನು ನಂಬಿ ಈ ಬಾರಿ ಸೇವೆಗೆ ಅವಕಾಶ ನೀಡಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಮೂರು ತಿಂಗಳು ರಾಜ್ಯದ ವಿವಿಧೆಡೆ ಸಂಚರಿಸಿದ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನುದ್ದೇಶಿಸಿ ಎಚ್.ಡಿ. ದೇವೇಗೌಡ ಮಾತನಾಡಿದರು. ಅನಾರೋಗ್ಯದ ಕಾರಣಕ್ಕೆ ನಡೆಯಲು ಸಾಧ್ಯವಾಗದ ದೇವೇಗೌಡರನ್ನು ರ‍್ಯಾಂಪ್ ಮೇಲೆ ಗಾಲಿ ಕುರ್ಚಿಯ ಮೂಲಕ ಜನರ ಹತ್ತಿರಕೆಕ ಕೊಂಡೊಯ್ಯಲಾಯಿತು. ನಂತರ ದೇವೇಗೌಡರು ಮಾತನಾಡಿದರು.
ನಾನು ಜೀವನದಲ್ಲಿ ಬೆಳೆದಿದ್ದು, ರಾಜಕೀಯದಲ್ಲಿ ಬೇರೂರಿದ್ದು ನಮ್ಮ ಪಕ್ಷದ ಕಾರ್ಯಕರ್ತರಿಂದ ಹಾಗೂ ದೇವರ ದಯೆಯಿಂದ. ಎಷ್ಟೇ ಕಷ್ಟ ಬಂದರೂ ಧೃತಿಗೆಡದಂತೆ ನಡೆಸಿದ್ದು ಎರಡೂ ಶಕ್ತಿಗಳು. ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಇಂದು ನಿಮ್ಮ ಮುಂದೆ ನಿಲ್ಲುವ ಶಕ್ತಿ ಇರುತ್ತದೆಯೋ ಇಲ್ಲವೋ ಎಂದುಕೊಂಡಿದ್ದೆ. ಆದರೆ ಇಷ್ಟು ಶಕ್ತಿ ನೀಡಿದ್ದಾನೆ ಎಂದರೆ ಏನೋ ಆಟ ಇರಬೇಕು ಎಂದುಕೊಂಡಿದ್ದೇನೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೀವು ಸೇರಿರುವುದು ನೋಡಿದರೆ ಮತ್ತೆ ನಮಗೆ ಜನಸೇವೆಗೆ ಅವಕಾಶ ಸಿಗುತ್ತದೆ ಎಂದು ನಾನು ನಂಬಿದ್ದೇನೆ.
ಕಾರ್ಯಕರ್ತರ ಶ್ರಮದಿಂದ ನಮ್ಮ ಪಕ್ಷ ಗುರಿ ಮುಟ್ಟುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ನಾನು ರೈತನ ಮಗ, ನೀವೂ ರೈತನ ಮಕ್ಕಳು. ನಾವು ಶ್ರಮವಹಿಸಿ ಅನ್ನ ತಿನ್ನುತ್ತೇವೆ. ಇಲ್ಲಸಲ್ಲದ ಬಣ್ಣದ ಮಾತುಗಳಿಂದ ಮೇಲೆ ಬರಲು ಪ್ರಯತ್ನಿಸುವುದಿಲ್ಲ. ಜಾತಿ ವೈಷಮ್ಯದಿಂದ ಒಡೆದು ಆಳುವುದಿಲ್ಲ. ಈ ಹಿಂದೆ ಬ್ರಿಟಿಷರು ಅದನ್ನು ಮಾಡುತ್ತಿದ್ದರು, ಆದರೆ ಈಗ ಕೆಲವು ಪಕ್ಷಗಳು ಅಂತಹ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲವರು ಹಾಗೆ ಮಾಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಇಂತಹ ಕೆಲಸವನ್ನು ಜನರು ಅರಿಯುತ್ತಾರೆ. ಸುಳ್ಳು ಸ್ವಲ್ಪ ದಿನ ನಡೆಯಬಹುದು. ಸತ್ಯ ಮತ್ತೆ ಪುನರ್ಜನ್ಮ ಪಡೆಯಬಹುದು.
ಕುಮಾರಸ್ವಾಮಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಸುತ್ತಾಡಿದ್ದನ್ನು, ಅವರಿಗೆ ನೀವು ಪ್ರತಿ ಹೆಜ್ಜೆಯಲ್ಲಿಯೂ ಶಕ್ತಿ ನೀಡಿದ್ದನ್ನು ಎಷ್ಟೋ ಬಾರಿ ಕಂಡು ಕಣ್ತುಂಬಿಕೊಂಡಿದ್ದೇನೆ. ನನ್ನ ವಯಸ್ಸು ಹಾಗೂ ಆರೋಗ್ಯವು ಇದರಲ್ಲಿ ಭಾಗವಾಗಲು ಸಾಧ್ಯವಾಗುತ್ತಿಲ್ಲ ಎಂದು ವ್ಯಥೆ ಪಟ್ಟಿದ್ದೇನೆ. ನಾವು ಏನು ದುಡಿಮೆ ಮಾಡಲು ಇಚ್ಛಿಸಿದ್ದೇವೆ ಎಂಬುದನ್ನು ಪಂಚರತ್ನ ಕಾರ್ಯಕ್ರಮ ತಿಳಿಸುತ್ತದೆ.
ಕುಮಾರಸ್ವಾಮಿ ಅವರು ಅಧಿಕಾರ ಬಂದ ಕೂಡಲೆ ಪಂಚರತ್ನವನ್ನು ನೆರವೇರಿಸುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ಹಿಂದೆ ಅವರ ಕೈಕಟ್ಟಿ ಹಾಕುವ ಪ್ರಯತ್ನ ನಡೆದರೂ ರೈತರ ಸಾಲ ಮನ್ನಾ ಮಾಡಿಲ್ಲ. ಇಷ್ಟು ವರ್ಷದ ರಾಜಕಾರಣದಲ್ಲಿ ನಾನೆಂದೂ ಜನರ ಕಣ್ಣಿಗೆ ಮಣ್ಣೆರಚಲಿಲ್ಲ. ಸ್ಪಷ್ಟವಾಗಿ ಯೋಜನೆಗಳನ್ನು ಹೇಳಿ ಮತಭಿಕ್ಷೆ ಕೇಳಿದ್ದೇನೆ, ಅಧಿಕಾರಕ್ಕೆ ಬಂದಾಗ ಈಡೇರಿಸಿದ್ದೇನೆ. ನಾನು ಎಂದಿಗೂ ಮತಾಂಧತೆಯ ಮಂತ್ರ ಜಪಿಸಿದವನಲ್ಲ. ನಾನು ಜಪಿಸಿದ್ದು ಅಭಿವೃದ್ಧಿಯ ಮಂತ್ರ ಮಾತ್ರ.
ಇದನ್ನೂ ಓದಿ: JDS Pancharatna : ಪಂಚರತ್ನ ಯಾತ್ರೆ ಸಮಾರೋಪದಲ್ಲಿ ದೇವೇಗೌಡರ ರೋಡ್ ಶೋ ರದ್ದು, ನೇರ ವೇದಿಕೆಗೆ
ನಾನು ಅಧಿಕಾರದಲ್ಲಿ ಬೆರಳೆಣಿಕೆಯ ವರ್ಷ ಮಾತ್ರ ಇದ್ದೆ. ಆದರೆ ಸಿಕ್ಕ ಅವಕಾಶದಲ್ಲಿ ಜನರ ಹಿತಕ್ಕಾಗಿ ದುಡಿದಿದ್ದೇನೆ ಎಂದು ಭಗವಂತನ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ನನ್ನ ಮಕ್ಕಳಿಗೂ ಅದನ್ನೇ ಹೇಳಿದ್ದೇನೆ. ಅವರೂ ಅದೇ ದಾರಿಯಲ್ಲಿ ನಡೆಯುತ್ತಾರೆ ಎಂದು ನಂಬಿದ್ದೇನೆ. ಅವರು ದುಡಿಮೆಯ ಹಾದಿಯಿಂದ ದೂರವಾದರೆ ಎಚ್ಚರಿಸುವ ಮಾರ್ಗ ಜನರಿಗೆ ಗೊತ್ತಿದೆ ಎಂದು ನಾನು ನಂಬಿದ್ದೇನೆ. ಜನರು ನಮ್ಮನ್ನು ಆಶೀರ್ವದಿಸುವುದರಲ್ಲಿ ಯಾವುದೇ ಸಂಶಯ ಇಲ್ಲ. ನಾನು ಎಲ್ಲ ವರ್ಗ, ಜನರಿಗಾಗಿ ದುಡಿದಿದ್ದೇನೆ.
ದೂರದ ಪಂಜಾಬಿನ ರೈತರು ಒಂದು ಭತ್ತದ ತಳಿಗೆ ನನ್ನ ಹೆಸರಿಟ್ಟಿದ್ದಾರೆ. ಇದು ದೊಡ್ಡ ಸನ್ಮಾನ. ಮುಂದೆ ಯಾವ ಸನ್ಮಾನವೂ ಬೇಕಾಗಿಲ್ಲ. ನದಿ ನೀರಿಗಾಗಿ ದುಡಿದಿದ್ದು ಅನೇಕರಿಗೆ ತಿಳಿದಿದೆ, ಆದರೆ ಮಹಿಳೆಯರ ಹಕ್ಕಿಗಾಗಿ ಹೋರಾಡಿದ್ದು ಅನೇಕರಿಗೆ ತಿಳಿದಿಲ್ಲ. ನಾನು ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ದುಡಿದಿದ್ದೇನೆ. ವಾಲ್ಮೀಕಿ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಲು ಕಷ್ಟಪಟ್ಟಿದ್ದೇನೆ. ಮುಸ್ಲಿಂ ಬಾಂಧವರಿಗೆ ಏನು ಮಾಡಿದ್ದೇನೆ ಎಂಬ ಅರಿವಿದೆ.
ಬೆಂಗಳೂರು ಇಂದು ಇಡೀ ರಾಜ್ಯವನ್ನು ಸಾಕುವಷ್ಟು ಬೆಳೆದಿದೆ. ಇದರಲ್ಲಿ ಈ ರೈತನ ಮಗನ ದುಡಿಮೆ ಇದೆ. ನಾನು ಏನು ಮಾಡಿದ್ದೇನೆ ಎನ್ನುವುದು ಭಗವಂತನಿಗೆ ತಿಳಿದಿದೆ. ನಾನು ಸಿಎಂ, ಪಿಎಂ ಆಗಿದ್ದಾಗ ಯಾವ ನಿರ್ಧಾರ ಕೈಗೊಂಡೆ ಎನ್ನುವುದು ಕಡತಗಳಲ್ಲಿದೆ. ಯಾರೋ ಮಾಡಿದ ಸಾಧನೆಯನ್ನು ನನ್ನದು ಎನ್ನುವ ಕೀಳುಮಟ್ಟಕ್ಕೆ ಇಳಿಯಲಿಲ್ಲ. ಫಲಾಪೇಕ್ಷೆ ಇಲ್ಲದೆ ದುಡಿಯಿದ್ದೇನೆ. ಇದನ್ನು ಜನರು ಗುರುತಿಸುತ್ತಾರೆ ಎಂಬ ನಂಬಿಕೆಯಿದೆ. ನಾನು ಕನ್ನಡಿಗನಾಗಿ ನೆರೆ ರಾಜ್ಯಗಳ ಜತೆಗೆ ಸೌಹಾರ್ದಕ್ಕಾಗಿ ದುಡಿದಿದ್ದೇನೆ.
ನಾನು ಬಸವಣ್ಣ, ಕೆಂಪೇಗೌಡ, ಸರ್. ಎಂ. ವಿಶ್ವೇಶ್ವರಯ್ಯ, ಟಿಪ್ಪು ಸುಲ್ತಾನ್, ಕನಕದಾಸ, ನಾಲ್ವಡಿ, ಪುರಂದರದಾಸ, ಕುವೆಂಪು ಹಾಗೂ ಹಲವು ಮಹನೀಯರು ಹುಟ್ಟಿದ ನಾಡಿನಲ್ಲಿ ಹುಟ್ಟಿ ಜಗತ್ತಿನ ಏಳಿಗೆಗಾಗಿ ಒಂದು ಸಣ್ಣ ದೀಪ ಹಚ್ಚಿದೆ ಎಂಬ ಸಮಾಧಾನ ಇದೆ. ಕರ್ನಾಟಕಕ್ಕೆ ಅಗೌರವ ತರುವ ಕೆಲಸ ಎಂದೂ ಮಾಡಿಲ್ಲ ಎಂದು ನಾನು ಹೇಳಿದ್ದೇನೆ. ನಮ್ಮನ್ನು ನಂಬಿ, ನಮ್ಮ ಪಕ್ಷವನ್ನು ನಂಬಿ, ನಮ್ಮ ದುಡಿಮೆಯನ್ನು ನಂಬಿ ಎಂದು ಪ್ರಾರ್ಥಿಸುತ್ತೇನೆ.