Site icon Vistara News

ಮುಂದಿನ ಸಿಎಂ ಪರಮೇಶ್ವರ್‌ ಘೋಷಣೆ, ಬೆಂಬಲಿಗನಿಗೆ ಬೆರಳು ತೋರಿಸಿ ಎಚ್ಚರಿಕೆ ನೀಡಿದ ಪರಮ್‌

Parameshwar

ತುಮಕೂರು: ರಾಜ್ಯ ಕಾಂಗ್ರೆಸ್‌ನಲ್ಲಿ ʻಮುಂದಿನ ಸಿಎಂʼ ಪೈಪೋಟಿ ಹೆಚ್ಚಾಗುತ್ತಿರುವ ನಡುವೆಯೇ ಶನಿವಾರ ಹಿರಿಯ ನಾಯಕ ಜಿ. ಪರಮೇಶ್ವರ್‌ ಅವರು ತಮ್ಮ ಪರವಾಗಿ ಘೋಷಣೆ ಮೊಳಗಿಸಿದ ಬೆಂಬಲಿಗನಿಗೆ ಎಚ್ಚರಿಕೆ ನೀಡಿದರು.

ಶನಿವಾರ ಜಿ. ಪರಮೇಶ್ವರ್‌ ಅವರ ಹುಟ್ಟುಹಬ್ಬವಿತ್ತು. ತುಮಕೂರಿನ ಹೆಗ್ಗರೆ ಸಮೀಪದ ಸಿದ್ದಾರ್ಥ ನಗರದ ನಿವಾಸದ ಬಳಿ ಹುಟ್ಟುಹಬ್ಬ ಆಚರಣೆಗೆ ನೂರಾರು ಕಾರ್ಯಕರ್ತರು ಸೇರಿದ್ದರು. ಪರಮೇಶ್ವರ್‌ ಅವರು ಕೂಡಾ ಖುಷಿಯಿಂದಲೇ ಕೇಕ್‌ ಕತ್ತರಿಸಲು ಒಪ್ಪಿದರು. ಅಭಿಮಾನಿಗಳು ಪರಮೇಶ್ವರ್‌ ಅವರ ಪರವಾಗಿ ಘೋಷಣೆಗಳನ್ನು ಮೊಳಗಿಸಿದರು. ಈ ವೇಳೆ ಒಬ್ಬ ಅಭಿಮಾನಿ ʻಮುಂದಿನ ಸಿಎಂ ಜಿ. ಪರಮೇಶ್ವರ್‌ʼ ಎಂದು ಘೋಷಣೆ ಕೂಗಿದ. ಅಗ ಪರಮೇಶ್ವರ್‌ ಅವರು ʻʻಹೇʼ ಎಂದು ಕೈ ಬೆರಳು ತೋರಿಸಿ ಎಚ್ಚರಿಕೆ ನೀಡಿದರು. ಇನ್ನು ಮುಂದೆ ಹಾಗೆಲ್ಲ ಘೋಷಣೆ ಕೂಗದಂತೆ ಕೈ ಸನ್ನೆಯಲ್ಲೇ ಹೇಳಿದರು.

೨೦೧೩ರಲ್ಲಿ ಚುನಾವಣೆ ನಡೆದಾಗ ಜಿ. ಪರಮೇಶ್ವರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಕೆಪಿಸಿಸಿ ಅಧ್ಯಕ್ಷರಾದವರು ಮುಖ್ಯಮಂತ್ರಿ ಆಗುವ ಆಯ್ಕೆ ಇರುತ್ತದೆ ಎಂದೆಲ್ಲ ಹೇಳಲಾಗುತ್ತಿತ್ತು. ಆದರೆ, ಅವರು ಕೊರಟಗೆರೆ ಕ್ಷೇತ್ರದಲ್ಲಿ ಸೋಲು ಅನುಭವಿಸಿದರು. ಅವರು ಗೆದ್ದರೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ಕಾರಣಕ್ಕಾಗಿಯೇ ಅವರನ್ನು ಸೋಲಿಸಲಾಯಿತು ಎಂಬ ಮಾತುಗಳೆಲ್ಲ ಕೇಳಿಬಂದಿದ್ದವು. ಅಂತಿಮವಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರು. ಈ ನಡುವೆ, ಆಗಾಗ ಪರಮೇಶ್ವರ್‌ ಹೆಸರು ತೇಲಿ ಬರುತ್ತಲೇ ಇರುತ್ತದೆ. ಆದರೆ, ಬೆಂಬಲಿಗರ ಈ ಪೈಪೋಟಿ ವಿರೋಧ ಪಕ್ಷಗಳಿಗೆ ಆಹಾರವಾಗುತ್ತದೆ ಎಂಬ ಕಾರಣಕ್ಕೆ ಪರಮೇಶ್ವರ್‌ ಅವರು ಈ ರೀತಿ ಮಾಡದಂತೆ ಸಲಹೆ ನೀಡಿದರು.

ಸಿದ್ದರಾಮೋತ್ಸವ ಅಭಿಮಾನಿಗಳ ನಿರ್ಧಾರ

ʻʻಸಿದ್ದರಾಮಯ್ಯ ಅವರ ಹುಟ್ಟಹಬ್ಬ ಆಚರಣೆ ಮಾಡ್ಬೇಕು ಅಂತ ಯಾರಿಗೂ ಕೇಳಿಲ್ಲ. ಯಾವ ವರ್ಷವೂ ಅವರು ಹುಟ್ಟುಹಬ್ಬ ಆಚರಣೆ ಮಾಡಿದೋರಲ್ಲ. ಈ ಬಾರಿ ಅವರ ಅಭಿಮಾನಿಗಳು, ಬೆಂಬಲಿಗರು ಮಾಡಿದ ಒತ್ತಾಯಕ್ಕೆ ಕಟ್ಟುಬಿದ್ದರು. ಬೇಡ ಅಂತ ಅನ್ನಲಾಗಲಿಲ್ಲ. ಅವರನ್ನು ಇಷ್ಟಪಡುವಂತಹ ಜನ ಇದ್ದಾರೆ. ಸಿದ್ದರಾಮಯ್ಯ ಅವರು ಒಬ್ಬ ಮಾಸ್ ಲೀಡರ್. 40 ವರ್ಷದಿಂದ ರಾಜಕೀಯದಲ್ಲಿ ಇದ್ದವರು. ಹಾಗಾಗಿ ಸ್ವಾಭಾವಿಕವಾಗಿ ಪ್ರೀತಿ ವಿಶ್ವಾಸದಿಂದ ಮಾಡಿದ್ದಾರೆʼʼ ಎಂದು ಜಿ. ಪರಮೇಶ್ವರ್‌ ಹೇಳಿದರು.

ʻʻಕಾಂಗ್ರೆಸ್ ಪಕ್ಷಕ್ಕೂ ಇದೊಂದು ಸಂದರ್ಭದಲ್ಲಿ ಒಳ್ಳೆಯ ಅವಕಾಶ. ಕಾಂಗ್ರೆಸ್ ನವರು ಎಲ್ಲರು ಸೇರಿ ಮಾಡೋ ಅಂತ ಸೆರ್ಕೊಂಡು ಮಾಡಿದ್ದಾರೆ. ಇದರಿಂದ ನಮ್ಮ‌ಪಕ್ಷಕ್ಕೆ ಒಂದು ರೀತಿಯ ಬೆಂಬಲ ಸಿಕ್ಕಿದೆ‌ʼʼ ಎಂದರು ಜಿ. ಪರಮೇಶ್ವರ್.‌

ಇದನ್ನೂ ಓದಿ| ಸಿದ್ದರಾಮೋತ್ಸವ ಎಫೆಕ್ಟ್‌ ಕಡೆಗಣಿಸುವಂತಿಲ್ಲ; ಅಮಿತ್‌ ಶಾಗೆ ಯಡಿಯೂರಪ್ಪ ರಿಪೋರ್ಟ್

Exit mobile version