ಬೆಂಗಳೂರು: ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಚ್ ಡಿ ದೇವೇಗೌಡರು ಅನಿರೀಕ್ಷಿತ ಸನ್ನಿವೇಶದಲ್ಲಿ ದೇಶದ ಪ್ರಧಾನಿಯಾದರು. ಮಣ್ಣಿನ ಮಗ ಪ್ರಧಾನಿಯಾದ ಬಗ್ಗೆ ರಾಜ್ಯದಲ್ಲಿ ಹರ್ಷದ ವಾತಾವರಣ ಉಂಟಾಗಿತ್ತು. ಆದರೆ ಒಂದು ವರ್ಷದೊಳಗೇ ಅವರು ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಯಬೇಕಾಯಿತು.
ಅಟಲ್ ಬಿಹಾರಿ ವಾಜಪೇಯಿ ಅವರ 13 ದಿನಗಳ ಸರ್ಕಾರ ಬಹುಮತ ಇಲ್ಲದೆ ಪತನಗೊಂಡ ಬಳಿಕ ಸಂಯುಕ್ತ ರಂಗ ಸರ್ಕಾರ ಅಸ್ತಿತ್ವಕ್ಕೆ ಬಂತು. ಈ ಸರ್ಕಾರ ಕಾಂಗ್ರೆಸ್‌ನ ಬಾಹ್ಯ ಬೆಂಬಲವನ್ನೇ ಆಧರಿಸಿತ್ತು. 1996ರ ಜೂನ್ 1ರಂದು ದೇವೇಗೌಡರು ದೇಶದ 11ನೇ ಪ್ರಧಾನಿಯಾಗಿ ಪ್ರಮಾಣವ ವಚನ ಸ್ವೀಕರಿಸಿದರು. ಆದರೆ ಪ್ರಧಾನಿ ದೇವೇಗೌಡರಿಗೆ ಆಗಿನ ಕಾಂಗ್ರೆಸ್ ಅಧ್ಯಕ್ಷ ಸೀತಾರಾಮ್ ಕೇಸರಿ ಅವರು ನಾನಾ ರೀತಿಯ ಕಿರುಕುಳ ಕೊಡಲಾರಂಭಿಸಿದರು.
ಕಲ್ಯಾಣ್ ಸಿಂಗ್ ಸರ್ಕಾರ ಅಸ್ಥಿರಗೊಳಿಸಲು ಯತ್ನ
ಆಗ ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು. ಕಾಂಗ್ರೆಸ್ ಕೇವಲ 33 ಸ್ಥಾನ ಗೆದ್ದು ನಾಲ್ಕನೇ ಸ್ಥಾನಕ್ಕೆ ಕುಸಿದಿತ್ತು. ಕಲ್ಯಾಣ್ ಸಿಂಗ್ ಸರ್ಕಾರಕ್ಕೆ ಬಹುಮತ ಇರಲಿಲ್ಲ. ಸ್ಥಳೀಯ ಕೆಲವು ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆದು ಬಿಜೆಪಿ ಸರ್ಕಾರ ರಚಿಸಿತ್ತು. ಈ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಬೇಕು ಎಂದು ಸೀತಾರಾಮ್ ಕೇಸರಿ ಅವರು ದೇವೇಗೌಡರ ಮೇಲೆ ಒತ್ತಡ ಹಾಕುತ್ತಿದ್ದರು.
ರಾಜೀವ್ ಗಾಂಧಿ ಮತ್ತು ಪಿ ವಿ ನರಸಿಂಹ ರಾವ್ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನು ನಿಷ್ಕ್ರಿಯಗೊಳಿಸಬೇಕು ಎಂದೂ ಕಾಂಗ್ರೆಸ್ ದೇವೇಗೌಡರ ಮೇಲೆ ಒತ್ತಡ ಹಾಕಲಾರಂಭಿಸಿತು.
ಬೆಂಬಲ ವಾಪಸ್ ಪಡೆದ ಕಾಂಗ್ರೆಸ್
ಕಾಂಗ್ರೆಸ್‌ನ ಒತ್ತಡಕ್ಕೆ ದೇವೇಗೌಡರು ಮಣಿಯಲಿಲ್ಲ. ಹಾಗಾಗಿ ದೇವೇಗೌಡ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಕಾಂಗ್ರೆಸ್ 1997ರ ಮಾರ್ಚ್ 30ರಂದು ವಾಪಸ್ ಪಡೆಯಿತು. ದೇವೇಗೌಡರು ಸಂಸತ್‌ನಲ್ಲಿ 1997ರ ಮಾರ್ಚ್ 30ರಂದು ಏಪ್ರಿಲ್ 11ರಂದು ವಿಶ್ವಾಸಮತ ಯಾಚನೆ ಮಾಡಬೇಕಾಯಿತು. ಆದರೆ 545 ಸದಸ್ಯ ಬಲದ ಸಂಸತ್‌ನಲ್ಲಿ 158 ಸಂಸದರು ಮಾತ್ರ ದೇವೇಗೌಡ ಸರ್ಕಾರದ ಪರ ಮತ ಚಲಾಯಿಸಿದರು. ಅನಿವಾರ್ಯವಾಗಿ ದೇವೇಗೌಡರು 1997ರ ಏಪ್ರಿಲ್ 21ರಂದು ರಾಜೀನಾಮೆ ನೀಡಿದರು. ಕೇವಲ ಹತ್ತು ತಿಂಗಳಲ್ಲೇ ದೇವೇಗೌಡರ ಪ್ರಧಾನಿ ಆಳ್ವಿಕೆ ಕೊನೆಗೊಂಡಿತು.
ಐ ಕೆ ಗುಜ್ರಾಲ್ ಪ್ರಧಾನಿಯಾದರು
ಕಾಂಗ್ರೆಸ್ ಮರ್ಜಿಯಲ್ಲಿ ಅಧಿಕಾರ ಮುಂದುವರಿಸುವುದಕ್ಕಿಂತ, ಸಂಸತ್ ವಿಸರ್ಜಿಸಿ ಮತ್ತೆ ಚುನಾವಣೆಯ ಮೊರೆ ಹೋಗುವುದೇ ಸೂಕ್ತ ಎಂದು ದೇವೇಗೌಡರು ಅಭಿಪ್ರಾಯಪಟ್ಟರು. ಆದರೆ ಅದೇ ಹೊತ್ತಿಗೆ ಮಾಧ್ಯಮಗಳು ನಡೆಸಿದ ಸಮೀಕ್ಷೆಗಳು, ತಕ್ಷಣ ಚುನಾವಣೆ ನಡೆದರೆ ಬಿಜೆಪಿ ಬಹುಮತ ಗಳಿಸುತ್ತದೆ, ಕಾಂಗ್ರೆಸ್‌ಗೆ ಮತ್ತಷ್ಟು ಧೂಳೀಪಟವಾಗುತ್ತದೆ ಎಂದು ಸಾರಿದವು. ಹಾಗಾಗಿ ಕಾಂಗ್ರೆಸ್‌ಗೆ ಚುನಾವಣೆಗೆ ಹೋಗಲು ಹಿಂಜರಿಯಿತು. ಸಂಯುಕ್ತ ರಂಗದ ಮತ್ತೊಬ್ಬ ನಾಯಕನನ್ನು ಪ್ರಧಾನಿ ಪಟ್ಟಕ್ಕೇರಿಸುವ ನಿಟ್ಟಿನಲ್ಲಿ ತೆರೆಮರೆಯಲ್ಲಿ ಕಸರತ್ತು ನಡೆಸಿತು. ಆಗ ವಿದೇಶಾಂಗ ಸಚಿವರಾಗಿದ್ದ ಇಂದರ್ ಕುಮಾರ್ ಗುಜ್ರಾಲ್ ಹೆಸರು ಮುಂಚೂಣಿಗೆ ಬಂತು. ಗುಜ್ರಾಲ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಘೋಷಿಸಿತು. 1997ರ ಏಪ್ರಿಲ್ 21ರಂದು ಇಂದರ್ ಕುಮಾರ್ ಕುಜ್ರಾಲ್ (ಐ ಕೆ ಗುಜ್ರಾಲ್) ಅವರು ಭಾರತದ 12ನೇ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಇದನ್ನೂ ಓದಿ: Parliament Flashback: ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಎಫೆಕ್ಟ್; 1977ರಲ್ಲಿ ಧೂಳಿಪಟವಾಗಿದ್ದ ಕಾಂಗ್ರೆಸ್!
1984ರ ಲೋಕಸಭೆ ಚುನಾವಣೆಯಲ್ಲಿ 400 ಪ್ಲಸ್ ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್!
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ (Parliament Flashback) ಬಿಜೆಪಿ 400ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು (Lok Sabha Election 2024) ಘೋಷಿಸಿದ್ದಾರೆ. ಇಷ್ಟೊಂದು ಸಂಖ್ಯೆಯ ಸೀಟುಗಳನ್ನು 1984ರಲ್ಲಿ ಕಾಂಗ್ರೆಸ್ ಗೆದ್ದಿತ್ತು.
1984ರಲ್ಲಿ ಇಂದಿರಾ ಗಾಂಧಿಯವರು ಖಲಿಸ್ತಾನಿ ಉಗ್ರರ ಸಂಚಿಗೆ ಬಲಿಯಾದರು. ಇನ್ನೂ ಒಂದು ವರ್ಷದ ಅವಧಿ ಬಾಕಿ ಇದ್ದರೂ ಇಂದಿರಾ ಹತ್ಯೆ ಅನುಕಂಪದ ಲಾಭ ಪಡೆಯಲು ಕಾಂಗ್ರೆಸ್ ಮೊದಲೇ ಚುನಾವಣೆಯ ಮೊರೆ ಹೋಯಿತು. ಆ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 516 ಲೋಕಸಭೆ ಸ್ಥಾನಗಳಲ್ಲಿ 404 ಸೀಟುಗಳನ್ನು ಬಾಚಿಕೊಂಡಿತು! ಇದು ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಕಾಂಗ್ರೆಸ್‌ನ ಅತಿ ಹೆಚ್ಚು ಸೀಟು ಗಳಿಕೆಯ ದಾಖಲೆ. ಕಾಂಗ್ರೆಸ್ ಮತ ಗಳಿಕೆ ಪ್ರಮಾಣ ಆ ಚುನಾವಣೆಯಲ್ಲಿ ಶೇ. 49.10 ಇತ್ತು. ಪ್ರತಿಪಕ್ಷಗಳೆಲ್ಲ ಧೂಳೀಪಟವಾದವು. 30 ಸ್ಥಾನ ಗಳಿಸಿದ ತೆಲುಗು ದೇಶಂ ಪಾರ್ಟಿ ಎರಡನೇ ಅತಿದೊಡ್ಡ ಪಕ್ಷದ ಸ್ಥಾನ ಪಡೆಯಿತು. ಸಿಪಿಐಎಂಗೆ 22 ಮತ್ತು ಎಐಎಡಿಎಂಕೆಗೆ 12 ಸೀಟುಗಳು ಲಭಿಸಿದವು.
ಬಿಜೆಪಿಗೆ ಎರಡೇ ಸೀಟು
ಬಿಜೆಪಿ ಗೆದ್ದಿದ್ದು ಕೇವಲ ಎರಡೇ ಎರಡು ಕ್ಷೇತ್ರಗಳಲ್ಲಿ ಮಾತ್ರ! ಗುಜರಾತ್‌ನ ಮೆಹಸಾನಾದಿಂದ ಡಾ. ಎ ಕೆ ಪಟೇಲ್ ಮತ್ತು ಆಂಧ್ರಪ್ರದೇಶದ ಹನಮಕೊಂಡ ಕ್ಷೇತ್ರದಿಂದ ಜಂಗಾ ರೆಡ್ಡಿ ಬಿಜೆಪಿ ಅಭ್ಯರ್ಥಿಗಳಾಗಿ ಗೆಲುವು ಸಾಧಿಸಿದರು. ಬಿಜೆಪಿ ಮೇರು ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರೇ ತಮ್ಮ ಹುಟ್ಟೂರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲೇ ಮಾಧವ್ ರಾವ್ ಸಿಂಧಿಯಾ ಎದುರು ಹೀನಾಯವಾಗಿ ಸೋತು ಹೋದರು. ಕಾಂಗ್ರೆಸ್ ಪಾಲಿಗೆ ಇದು ಸ್ಮರಣೀಯ ಲೋಕಸಭಾ ಚುನಾವಣೆಯಾಗಿ ದಾಖಲಾಯಿತು.