ಬೆಂಗಳೂರು: ಮಲ್ಲೇಶ್ವರದಲ್ಲಿರುವ ಬಿಜೆಪಿಯ ಜಗನ್ನಾಥ ಭವನದಲ್ಲಿ ಗುರುವಾರ (ನ.೩) ಏರ್ಪಡಿಸಿದ್ದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಮಾಜಿ ಸಂಸದರಾದ ಮುದ್ದಹನುಮೆಗೌಡ ಹಾಗೂ ಶಶಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್. ಅನಿಲ್ ಕುಮಾರ್, ರಾಜಕೀಯ ನಾಯಕರಾದ ವೆಂಕಟಾಚಲಯ್ಯ, ಸಂಜೀವ್ ರೆಡ್ಡಿ, ವೆಂಕಟೇಶ್ ಮೂರ್ತಿ ಪಕ್ಷ (Party Join) ಸೇರ್ಪಡೆಯಾದರು. ಇವರಲ್ಲಿ ಮೂವರು ನಾಯಕರು ವಿವಿಧ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಕ್ಷದ ಶಾಲು ಹಾಕಿದರೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಿಜೆಪಿ ಬಾವುಟ ನೀಡಿ ಎಲ್ಲರನ್ನು ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಚಳ್ಳಕೆರೆ ಟಿಕೆಟ್ ವಿಷಯಕ್ಕೆ ಪಕ್ಷದ ತೀರ್ಮಾಣಕ್ಕೆ ಬದ್ಧ– ಶಶಿಕುಮಾರ್
ನಾನು ಟಿಕೆಟ್ ಕೊಡಿ ಎಂದು ಎಲ್ಲಿಯೂ ಕೇಳಿಲ್ಲ. ಚಳ್ಳಕೆರೆ ಟಿಕೆಟ್ ವಿಚಾರವಾಗಿ ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ನಾನು ಸನ್ಯಾಸಿಯಲ್ಲ, ಪಕ್ಷದ ತೀರ್ಮಾನವೇ ಅಂತಿಮವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿರುವ ಆಹ್ವಾನವು ನನಗೆ ಅನ್ವಯಿಸುವುದಿಲ್ಲ. ಹೋಗುವವರು ಹೋಗಲಿ, ಆ ಪಕ್ಷದಿಂದ ಬಂದವರು ತಿರಸ್ಕಾರ ಮಾಡಿಯೇ ಬಂದಿರುವುದು ಅಲ್ವಾ? ಬಹುಶಃ ಅವರಿಗೆ ಹೇಳಿರಬೇಕು, ನನಗಂತೂ ಹೇಳಿಲ್ಲ ಎಂದು ಮಾಜಿ ಸಂಸದ, ನಟ ಶಶಿಕುಮಾರ್ ಹೇಳಿದರು.
ಇದನ್ನೂ ಓದಿ | Party Join | 15 ದಿನ ಕಾದು ನೋಡಿ ಕಾಂಗ್ರೆಸ್ ನಾಯಕರು ಪಕ್ಷದ ಬಾಗಿಲು ಮುಚ್ಚಿ ಬಿಜೆಪಿಗೆ ಬರುತ್ತಾರೆ: ಕಟೀಲ್
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ಪಕ್ಷಕ್ಕೆ ಬಂದಿದ್ದೇನೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೂ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಕೊಡುಗೆ ನೀಡಿದ್ದಾರೆ. ಮೀಸಲಾತಿ ವಿಚಾರವಾಗಿ ಬಹು ವರ್ಷದ ಬೇಡಿಕೆಯಾಗಿದ್ದು, ಅದನ್ನು ಈಡೇರಿಸಿದ್ದಾರೆ. ನಾನು ಎಸ್‌ಟಿ ಸಮುದಾಯದವನಾದರೂ, ನಾನೊಬ್ಬ ನಟ ಕೂಡಾ ಹೌದು. ಎಲ್ಲ ಸಮುದಾಯಗಳಿಗೆ ನ್ಯಾಯ ಸಿಗುವಂತೆ ಕೆಲಸ ಮಾಡುತ್ತೇನೆ. ಬಿಜೆಪಿಗೆ ನಾನು ಹೊಸಬನಲ್ಲ. ಜೆಡಿಯುನಲ್ಲಿದ್ದಾಗ ಎನ್‌ಡಿಯ ಭಾಗವಾಗಿದ್ದೆ. ಆಗಿನ ಪ್ರಧಾನಿ ವಾಜಪೇಯಿ ಸಮಯದಲ್ಲಿ ಅವರ ಜತೆಗೆ ಕೆಲಸ ಮಾಡಿದ್ದೇನೆ. ಕೆಲವೊಂದು ಏಳುಬೀಳು ಕಂಡಿದ್ದೇನೆ. ಪಕ್ಷ ಸೇರ್ಪಡೆಗೆ ಅವಕಾಶ ಮಾಡಿಕೊಟ್ಟ ಎಲ್ಲ ಬಿಜೆಪಿ ನಾಯಕರಿಗೆ ಧನ್ಯವಾದ ಹೇಳಬಯಸುತ್ತೇನೆ ಎಂದು ಶಶಿಕುಮಾರ್ ಹೇಳಿದರು.
ಪಕ್ಷದ ನೀತಿ, ಸಿದ್ಧಾಂತ ಬಲ್ಲೆ- ಮುದ್ದಹನುಮೆಗೌಡ
ನನಗೆ ಬಿಜೆಪಿ ಬಗ್ಗೆ ಬಹಳ ವಿಶ್ವಾಸ ಇದೆ. ಹೊಂದಾಣಿಕೆ ಮಾಡಿಕೊಂಡು ಹೋಗುತ್ತೇನೆ. ಎಲ್ಲ ನೀತಿ-ನಿಯಮ ಸಿದ್ಧಾಂತವನ್ನು ನಾನು ಬಲ್ಲೆ. ಪಕ್ಷದ ಶಕ್ತಿಯನ್ನು ಮತ್ತಷ್ಟು ಹೆಚ್ಚಾಗಿ ತೆಗೆದುಕೊಂಡು ಹೋಗುತ್ತೇನೆ ಎಂದು ಪಕ್ಷ ಸೇರ್ಪಡೆ ಬಳಿಕ ಮಾಜಿ ಸಂಸದ ಮುದ್ದಹನುಮೆಗೌಡ ಹೇಳಿದರು.
ಬಿಜೆಪಿ ಪ್ರಮುಖರು, ಸಚಿವರ ಜತೆ ನಾನು ಕೆಲಸ ಮಾಡಿದ್ದೇನೆ. ತುಮಕೂರಿನ ಬಿಜೆಪಿ ಕಾರ್ಯಕರ್ತರ ಜತೆಗೂ ನನಗೆ ನಿಕಟ ಸಂಬಂಧ ಇದೆ. ಈ ಪಕ್ಷದಲ್ಲಿ ಕಾರ್ಯಕರ್ತನಾಗಿ ಸುಲಲಿತವಾಗಿ ಕೆಲಸ ಮಾಡುವ ವಿಶ್ವಾಸ ಇದೆ. ಅತ್ಯಂತ ಆತ್ಮೀಯವಾಗಿ ನನ್ನನ್ನು ಬರಮಾಡಿಕೊಳ್ಳಲಾಗಿದೆ. ನಾನು ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಪ್ರಧಾನಿಗಳ ಕಾರ್ಯವೈಖರಿಯನ್ನು ನಾನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ. ಅವರ ನೇತೃತ್ವದ ಕೇಂದ್ರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಜನಪರ ಯೋಜನೆಗಳು ನನಗೆ ಮೆಚ್ಚುಗೆಯಾಗಿದೆ.
ಇದನ್ನೂ ಓದಿ | Election 2023 | ಬಿಜೆಪಿಯವರು ಕರೆದರೆ ಹೋಗಬೇಡಿ, ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್: ಸಿದ್ದರಾಮಯ್ಯ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈಗ ಬಿಜೆಪಿಗೆ ಬಂದವರಿಗೆ ಮುಕ್ತ ಆಹ್ವಾನ ಕೊಟ್ಟಿದ್ದಾರೆ. ಅಲ್ಲಿಂದ ಬರುವುದಕ್ಕಿಂತ ಮೊದಲು ಕಾಂಗ್ರೆಸ್‌ನಲ್ಲಿ ಇದ್ದವರು ಬಹಳ ನೋವು ಅನುಭವಿಸಿಯೇ ಬಿಜೆಪಿ ಸೇರಿದ್ದಾರಲ್ಲವೇ? ಈಗ ನಾನೂ ಸೇರಿದ್ದೇನೆ. ಬಿಜೆಪಿಗೆ ಬಂದವರು ಎಲ್ಲರೂ ನೆಮ್ಮದಿಯಾಗಿದ್ದಾರೆ ಎಂದು ಡಿಕೆಶಿಗೆ ಮುದ್ದಹನುಮೆಗೌಡ ತಿರುಗೇಟು ನೀಡಿದರು.
ನಾನು ಕೂಡಾ ಟಿಕೆಟ್ ಆಕಾಂಕ್ಷಿ– ಅನಿಲ್ ಕುಮಾರ್
ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಕೊರಟಗೆರೆಯಲ್ಲಿ ಸ್ಪರ್ಧೆ ಮಾಡಲು ನಾನು ಸಿದ್ಧನಿದ್ದೇನೆ. ಆದರೆ, ಪಕ್ಷವು ಯಾರನ್ನು ಆಯ್ಕೆ ಮಾಡಲಿದೆಯೋ ಅದೇ ಅಂತಿಮ. ಚುನಾವಣೆ ಸಂದರ್ಭದಲ್ಲಿ ಇದರ ಬಗ್ಗೆ ಪಕ್ಷ ನಿರ್ಧಾರ ಮಾಡಲಿದೆ. ನನಗೆ ಈಗ ಕೆಲಸ ಮಾಡುವಂತೆ ಹಿರಿಯ ವಕ್ತಾರರು ಸೂಚನೆ ನೀಡಿದ್ದಾರೆ. ಅದರಂತೆ ಕೆಲಸ ಮಾಡುವೆ ಎಂದು ಮಾಜಿ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಹೇಳಿದರು.
35 ವರ್ಷ ಕಾರ್ಯಾಂಗದಲ್ಲಿ ಕೆಲಸ ಮಾಡಿ ಅನುಭವ ಇದೆ. ಈಗ ನಿವೃತ್ತಿಯಾಗಿದ್ದು, ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದೇನೆ. ಬಿಜೆಪಿ ನೀತಿ, ನಿಯಮ ಉತ್ತಮವಾಗಿದೆ. ಜತೆಗೆ ಈ ಪಕ್ಷದಲ್ಲಿ ಸಂಕಲ್ಪ ಇದೆ ಎಂದು ಅನಿಲ್ ತಿಳಿಸಿದರು.
ಸಚಿವರಾದ ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಎಸ್.ಟಿ. ಸೋಮಶೇಖರ್, ಶಾಸಕರಾದ ಮಸಾಲೆ ಜಯರಾಂ, ಸಿ.ಪಿ. ಯೋಗಿಶ್ವರ್, ರಾಜ್ಯಸಭಾ ಸದಸ್ಯ ಜಗ್ಗೇಶ್, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಭಾಗಿಯಾಗಿದ್ದರು.
ಇದನ್ನೂ ಓದಿ | Party Join | ಪಕ್ಷಕ್ಕೆ ಬಂದವರಿಗೆ ಟಿಕೆಟ್ ಖಾತ್ರಿ ಇಲ್ಲವೆಂದರೇ ಸಿಎಂ?; ಹೈಕಮಾಂಡ್ ನಿರ್ಧಾರ ಎಂದಿದ್ದು ಏಕೆ?