Site icon Vistara News

Party Join | ಪಕ್ಷಕ್ಕೆ ಬಂದವರಿಗೆ ಟಿಕೆಟ್‌ ಖಾತ್ರಿ ಇಲ್ಲವೆಂದರೇ ಸಿಎಂ?; ಹೈಕಮಾಂಡ್‌ ನಿರ್ಧಾರ ಎಂದಿದ್ದು ಏಕೆ?

bjp party join cm

ಬೆಂಗಳೂರು: ವಿಧಾನಸಭಾ ಚುನಾವಣೆ ಬರುತ್ತಿದೆ. ರಾಜಕಾರಣದಲ್ಲಿ ಸಮೀಕರಣವಾಗುತ್ತಿದೆ. ಎಲ್ಲರಿಗೂ ಬಿಜೆಪಿಯೊಂದೇ ಆಯ್ಕೆಯಾಗಿದೆ. ಆದರೆ, ಯಾರಿಗೆ ಟಿಕೆಟ್ ನೀಡಬೇಕು? ಬಿಡಬೇಕು ಎಂಬ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಡಿದ್ದಾಗಿದೆ. ಸ್ಥಾನಮಾನದ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುವ ಮೂಲಕ ಪಕ್ಷಕ್ಕೆ (Party Join) ಸೇರ್ಪಡೆಯಾದವರಿಗೆ ಟಿಕೆಟ್‌ ಖಾತ್ರಿ ಇಲ್ಲ ಎಂಬ ಸಂದೇಶವನ್ನು ರವಾನೆ ಮಾಡಿದರೇ ಎಂಬ ಚರ್ಚೆಯೂ ಹುಟ್ಟಿಕೊಂಡಿದೆ.

ಮಲ್ಲೇಶ್ವರದಲ್ಲಿರುವ ಬಿಜೆಪಿಯ ಜಗನ್ನಾಥ ಭವನದಲ್ಲಿ ಏರ್ಪಡಿಸಿದ್ದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಏನಾಗಬೇಕು? ಯಾರಿಗೆ ಟಿಕೆಟ್‌ ಕೊಡಬೇಕು ಎಂಬ ತೀರ್ಮಾನವನ್ನು ಪಾರ್ಲಿಮೆಂಟ್ ಬೋರ್ಡ್ ತೀರ್ಮಾನ ಮಾಡುತ್ತದೆ. ನನ್ನನ್ನು ಸೇರಿದಂತೆ ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕು. ಹಾಗೆಯೇ ನಡೆದುಕೊಳ್ಳಬೇಕು. ಪಕ್ಷ ನಿಮಗೆ ಎಲ್ಲ ಸಹಕಾರ, ಗೌರವ ನೀಡಿ ನಡೆಸಿಕೊಳ್ಳುತ್ತದೆ ಎಂದು ಪಕ್ಷಕ್ಕೆ ಸೇರ್ಪಡೆಯಾದ ಪ್ರಮುಖ ನಾಯಕರಿಗೆ ಸಿಎಂ ಕಿವಿಮಾತು ಹೇಳಿದರು.

ಇದು ಬಿಜೆಪಿ ದಿಕ್ಸೂಚಿಯ ಕಾರ್ಯಕ್ರಮವಾಗಿದೆ. ಕರ್ನಾಟಕದ ರಾಜಕಾರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕಳೆದ 10 ವರ್ಷದಲ್ಲಿ ರಾಜಕೀಯ ಬದಲಾವಣೆ ಆಗುತ್ತಿದೆ. ಕಾಂಗ್ರೆಸ್ ಯಾವ ವಿಶ್ವಾಸದಲ್ಲಿ ಅಧಿಕಾರಕ್ಕೆ ಬಂದಿತ್ತೋ. ಆ ವಿಶ್ವಾಸವನ್ನು ಹಾಗೇ ಕಳೆದುಕೊಂಡಿತು. ಅಧಿಕಾರಕ್ಕೇರಿದ ಪಕ್ಷ 79 ಸ್ಥಾನಕ್ಕೆ ಇಳಿಯಿತು. ಅಧಿಕಾರ ಬೇಕೆಂಬ ಕಾರಣಕ್ಕೆ ಹಿಂಬಾಗಿಲಿನಿಂದ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡರು. ಅದು ಕೂಡ ಸೋಲು ಕಂಡಿತು. ಜನಪರ ಆಡಳಿತ ನೀಡಿದ ಬಿಜೆಪಿಗೆ ದಿಕ್ಸೂಚಿ ಕಾಣುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Party Join | 15 ದಿನ ಕಾದು ನೋಡಿ ಕಾಂಗ್ರೆಸ್‌ ನಾಯಕರು ಪಕ್ಷದ ಬಾಗಿಲು ಮುಚ್ಚಿ ಬಿಜೆಪಿಗೆ ಬರುತ್ತಾರೆ: ಕಟೀಲ್

ಜನಸಂಕಲ್ಪ ಸಮಾವೇಶದಲ್ಲಿ ಜನರ ಹುಮ್ಮಸ್ಸು ದೊಡ್ಡ ಅಲೆಯಾಗಿ ಪರಿವರ್ತನೆಯಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಹತ್ತಾರು ವರ್ಷಗಳು ಇದ್ದರೂ ಸರಿಯಾದ ಮನ್ನಣೆ ಸಿಕ್ಕಿಲ್ಲ ಎಂಬುದನ್ನು ನಾಯಕರು ಮನಗಂಡಿದ್ದಾರೆ. ರಾಷ್ಟ್ರ ಭಕ್ತಿಯ ಪಕ್ಷ, ರಾಷ್ಟ್ರ ನಾಯಕರ ಪಕ್ಷ, ಡಬಲ್ ಎಂಜಿನ್ ಸರ್ಕಾರದ ಪಕ್ಷ, ಜನರ ಕಷ್ಟ ಪರಿಹರಿಸುವ ಪಕ್ಷ ಎಂದು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಬಿಜೆಪಿ ಬಲ ತಂದ ಸೇರ್ಪಡೆ
ರಾಜಕೀಯ ಅನುಭವ ಹೊಂದಿರುವ ಮುದ್ದಹನುಮೆಗೌಡರು ಪಕ್ಷಕ್ಕೆ ಸೇರ್ಪಡೆಯಾಗಿರುವುದು ದೊಡ್ಡ ಬಲ ಬಂದಿದೆ. ನಟ ಶಶಿಕುಮಾರ್ ಅವರು ಈ ಮೊದಲು ನಮ್ಮಲ್ಲಿಯೇ ಇದ್ದರು. ಎಲ್ಲ ಪಕ್ಷಗಳನ್ನು ನೋಡಿಕೊಂಡು ತವರುಮನೆಗೆ ಬಂದಿದ್ದಾರೆ. ಅವರು ಖ್ಯಾತ ನಟರು ಮಾತ್ರವಲ್ಲದೆ, ಎಸ್‌ಟಿ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದಾರೆ. ಇವರ ಆಗಮನ ಪಕ್ಷಕ್ಕೆ ಶಕ್ತಿ ತುಂಬಲಿದೆ. ಅನಿಲ್ ಕುಮಾರ್ ಅವರು ಐಎಎಸ್‌ ಅಧಿಕಾರಿಯಾಗಿದ್ದಾಗ ಜನಪರ ಕೆಲಸ ಮಾಡಿದ್ದಾರೆ. ದೀನ, ದಲಿತರ ಬಗ್ಗೆ ಅಪಾರ ಕಾಳಜಿಯಿದೆ. ಹೀಗಾಗಿ ಅವರ ಸೇರ್ಪಡೆಯಿಂದ ಮೌಲ್ಯಯುತ ರಾಜಕಾರಣ ಸಿಕ್ಕಿದೆ ಎಂದು ಬೊಮ್ಮಾಯಿ ಬಣ್ಣಿಸಿದರು.

ಇದನ್ನೂ ಓದಿ | Election 2023 | ಬಿಜೆಪಿಯವರು ಕರೆದರೆ ಹೋಗಬೇಡಿ, ನಳಿನ್‌ ಕುಮಾರ್‌ ಕಟೀಲ್‌ ಒಬ್ಬ ಜೋಕರ್‌: ಸಿದ್ದರಾಮಯ್ಯ

ಪಕ್ಷ ಸೇರ್ಪಡೆಯಾದ ಪ್ರಮುಖರು
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್,‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಮ್ಮುಖದಲ್ಲಿ ಗುರುವಾರ (ನ.೩) ಮಾಜಿ ಸಂಸದರಾದ ಮುದ್ದಹನುಮೆಗೌಡ ಹಾಗೂ ಶಶಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್. ಅನಿಲ್ ಕುಮಾರ್, ರಾಜಕೀಯ ನಾಯಕರಾದ ವೆಂಕಟಾಚಲಯ್ಯ, ಸಂಜೀವ್ ರೆಡ್ಡಿ, ವೆಂಕಟೇಶ್ ಮೂರ್ತಿ ಪಕ್ಷ ಸೇರ್ಪಡೆಯಾದರು. ಬಿಜೆಪಿ ಬಾವುಟ ನೀಡಿ ಇವರನ್ನು ಅಧಿಕೃತವಾಗಿ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು.

ಸಚಿವರಾದ ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಎಸ್‌.ಟಿ. ಸೋಮಶೇಖರ್, ಶಾಸಕರಾದ ಮಸಾಲೆ ಜಯರಾಂ, ಸಿ.ಪಿ. ಯೋಗಿಶ್ವರ್, ರಾಜ್ಯಸಭಾ ಸದಸ್ಯ ಜಗ್ಗೇಶ್, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಭಾಗಿಯಾಗಿದ್ದರು.

ಮುದ್ದಹನುಮೇಗೌಡ ಅವರು ಕುಣಿಗಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಬಯಸಿದ್ದರೆ, ಶಶಿಕುಮಾರ್ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಮಾಜಿ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ | Lokayukta | ಅಧಿಕಾರ ದುರ್ಬಳಕೆ, ಲಂಚ ಆರೋಪ; ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

Exit mobile version