ಬೆಂಗಳೂರು: ಕನ್ನಡದ ಖ್ಯಾತ ಹಾಸ್ಯನಟ ಟೆನಿಸ್ ಕೃಷ್ಣ ಅವರು ಗುರುವಾರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು. ಹೋಟೆಲ್ ಪರಾಗ್‌ನಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ ಅವರು ಪಕ್ಷಕ್ಕೆ (Party Join) ಬರಮಾಡಿಕೊಂಡರು.
ಎಎಪಿ ಸೇರ್ಪಡೆ ಬಳಿಕ ಮಾತನಾಡಿದ ಟೆನಿಸ್ ಕೃಷ್ಣ, “ದೇಶದ ರಾಜಕೀಯದಲ್ಲಿ ಬದಲಾವಣೆ ತರುವ ಪ್ರಯತ್ನದಲ್ಲಿ ಆಮ್ ಆದ್ಮಿ ಪಾರ್ಟಿ ಯಶಸ್ವಿಯಾಗುತ್ತಿದೆ. ದೆಹಲಿಯಲ್ಲಿ ಶಿಕ್ಷಣ, ಆರೋಗ್ಯ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಸಾಧಿಸಿ ತೋರಿಸಿರುವ ಎಎಪಿಯು ಈಗ ಪಂಜಾಬ್‌ನಲ್ಲೂ ಮೋಡಿ ಮಾಡುತ್ತಿದೆ. ಭ್ರಷ್ಟ ಪಕ್ಷಗಳನ್ನು ಬದಿಗೊತ್ತಿ ದೇಶವನ್ನು ಕಾಪಾಡಲು ಎಎಪಿಯಿಂದ ಮಾತ್ರ ಸಾಧ್ಯ. ಸಾಮಾನ್ಯ ಜನರ ಬಗ್ಗೆ ಅಪಾರ ಕಾಳಜಿಯುಳ್ಳ ಆಮ್ ಆದ್ಮಿ ಪಾರ್ಟಿಯ ಮೂಲಕ ರಾಜಕೀಯ ಪ್ರವೇಶಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಎಎಪಿಯನ್ನು ಬಳಸಿಕೊಂಡು ದೇಶದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪ್ರವೇಶಿಸಬೇಕು” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, “ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿಯು ಭದ್ರವಾಗಿ ಬೇರೂರುತ್ತಿದೆ. ಸಿನಿಮಾ ಸಾಧಕರು, ದಕ್ಷ ಅಧಿಕಾರಿಗಳು, ರೈತ ನಾಯಕರು, ಸಮಾಜಸೇವಕರು, ವಕೀಲರು, ಉಪನ್ಯಾಸಕರು ಮುಂತಾದ ವಿವಿಧ ಕ್ಷೇತ್ರದ ಗಣ್ಯರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ದೇಶಕ್ಕೆ ಆಮ್ ಆದ್ಮಿ ಪಾರ್ಟಿಯೊಂದೇ ಆಶಾಕಿರಣ ಎಂಬುದು ಯುವಜನತೆಗೆ ಮನವರಿಕೆಯಾಗುತ್ತಿದೆ. ಜನಪ್ರಿಯ ನಟರಾದ ಟೆನಿಸ್ ಕೃಷ್ಣರವರ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ. ಸ್ವಚ್ಛ ರಾಜಕೀಯ ಹಾಗೂ ಪಾರದರ್ಶಕ ಆಡಳಿತವೇ ನಮ್ಮೆಲ್ಲರ ಧ್ಯೇಯವಾಗಿದ್ದು, ಇದನ್ನು ಸಾಧಿಸಲು ಒಗ್ಗಟ್ಟಿನಿಂದ ಶ್ರಮಿಸಲಿದ್ದೇವೆ” ಎಂದು ಹೇಳಿದರು.
ಎಎಪಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ಪಕ್ಷದ ಮುಖಂಡರಾದ ಸಂಚಿತ್ ಸೆಹ್ವಾನಿ , ಜಗದೀಶ್ ವಿ. ಸದಂ , ಪುರುಷೋತ್ತಮ್ ,ಸುರೇಶ್ ರಾಥೋಡ್, ಉಷಾ ಮೋಹನ್, ಚನ್ನಪ್ಪಗೌಡ ನೆಲ್ಲೂರು, ಜ್ಯೋತಿಷ್ ಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು
ಇದನ್ನೂ ಓದಿ | ಮುಖ್ಯಮಂತ್ರಿ ಚಂದ್ರುಗೆ ಆಮ್ ಆದ್ಮಿ ಪಕ್ಷದ ರಾಜ್ಯಮಟ್ಟದ ಹೊಣೆಗಾರಿಕೆ