Site icon Vistara News

PAY CM ಅಭಿಯಾನ ಆರಂಭಿಸಿದ ಕಾಂಗ್ರೆಸ್‌: QR ಕೋಡ್‌ಗೆ ಸಿಟ್ಟಿಗೆದ್ದ ಬಿಜೆಪಿ

pay cm poster 1

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಈಗಾಗಲೆ 40% ಕಮಿಷನ್‌ ಆರೋಪವನ್ನು ಬ್ರ್ಯಾಂಡ್‌ ಮಾಡುತ್ತಿರುವ ಪ್ರತಿಪಕ್ಷ ಕಾಂಗ್ರೆಸ್‌ ಇದೀಗ ನೇರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಬಳಸಿ ಪೋಸ್ಟರ್‌ಗಳನ್ನು ನಗರದ ವಿವಿಧೆಡೆ ಅಂಟಿಸಿರುವುದು ಹೊಸ ವಿವಾದ ಸೃಷ್ಟಿಸಿದೆ.

ಈಗಾಗಲೆ ಆನ್‌ಲೈನ್‌ ಪೇಮೆಂಟ್‌ಗೆ ಪೇಟಿಎಂ ಮೊಬೈಲ್‌ ಅಪ್ಲಿಕೇಷನ್‌ ಇದೆ. ಅದೇ ರೀತಿ ಕಾಂಗ್ರೆಸ್‌ ವತಿಯಿಂದ ಪೇ ಸಿಎಂ ಅಭಿಯಾನ ಆರಂಭಿಸಿದೆ.

ಮೇಖ್ರಿ ಸರ್ಕಲ್‌ನಲ್ಲಿ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಅದರಲ್ಲಿ ಕ್ಯುಆರ್‌ ಕೋಡ್‌ ಮುದ್ರಿಸಿ ಅದರ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಫೋಟೊ ಮುದ್ರಿಸಲಾಗಿದೆ. ಆ ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ, ಇತ್ತೀಚೆಗೆ ಕಾಂಗ್ರೆಸ್‌ ಆರಂಭಿಸಿದ ವೆಬ್‌ಸೈಟ್‌ ವಿಳಾಸಕ್ಕೆ ಕರೆದೊಯ್ಯುತ್ತದೆ. ಈ ಮೂಲಕ, ರಾಜ್ಯ ಸರ್ಕಾರ ಭ್ರಷ್ಟಾಚಾರಕ್ಕಿಳಿದಿದೆ ಎನ್ನುವುದನ್ನು ಪ್ರಚಾರ ಮಾಡಲು ಮುಂದಾಗಿದೆ.

ಸೆಪ್ಟೆಂಬರ್‌ 13 ರಂದು ಅಭಿಯಾನವನ್ನು ಆರಂಭಿಸಿದ್ದ ಕಾಂಗ್ರೆಸ್‌, 200 ರೂ. ನೋಟಿನ ಮೇಲೆ ಸಿಎಂ ಬೊಮ್ಮಾಯಿ ಅವರ ಭಾವಚಿತ್ರವನ್ನು ಮುದ್ರಿಸಿತ್ತು. ಇದೀಗ ಪೇಟಿಎಂ ಮಾದರಿಯಲ್ಲಿ ಪೋಸ್ಟರ್‌ ಮಾಡಿ ಎಲ್ಲೆಡೆ ಅಂಟಿಸುತ್ತಿದೆ.

ಬಿಜೆಪಿ ಆಕ್ರೋಶ

ಪೇಸಿಎಂ ಎಂದು ಪೋಸ್ಟರ್‌ ಮಡಿ ಹಂಚಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನಪರಿಷತ್‌ ಸದಸ್ಯ ಎನ್‌. ರವಿಕುಮಾರ್‌, ರಾಹುಲ್ ಗಾಂಧಿ ಭಾರತ್ ಜೋಡೋ ಮಾಡುತ್ತಾ ಇದ್ದಾರೆ. ಮೊದಲು ಅವರಿಗೆ ಪೇ ಮಾಡಲಿ. ಸಿದ್ದರಾಮಯ್ಯಗೆ ಕಾರು, ವಾಚ್ ಬೇಕು ಅವರಿಗೆ ಪೇ ಮಾಡಲಿ. ರಮೇಶ್ ಕುಮಾರ್ ನೂರು ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ ಎಂದು ಟೀಕಿಸಿದ್ದಾರೆ. ಘನತೆ ಇಟ್ಟುಕೊಂಡು ಸಿಎಂ ವಿರುದ್ಧ ಟೀಕೆ ಮಾಡಬೇಕು ಎಂದ ರವಿಕುಮಾರ್‌, ಭ್ರಷ್ಟಾಚಾರ ಎನ್ನುವುದು ಕಾಂಗ್ರೆಸ್‌ನಿಂದ ಹುಟ್ಟಿದೆ. ಕಾಂಗ್ರೆಸ್ ಇರುವವರಿಗೆ ಭ್ರಷ್ಟಾಚಾರ ನಿಲ್ಲುವುದಿಲ್ಲ ಎಂದಿದ್ದಾರೆ.

ಕುಡಚಿ ಶಾಸಕ ಪಿ. ರಾಜೀವ್‌ ಪ್ರತಿಕ್ರಿಯಿಸಿ, ಸ್ವತಂತ್ರ ಭಾರತದ 75 ವರ್ಷದಲ್ಲಿ 60 ವರ್ಷ ಆಳ್ವಿಕೆ ಮಾಡಿರುವುದು ಕಾಂಗ್ರೆಸ್‌. ಕೇವಲ 10-15 ವರ್ಷ ಬೇರೆ ಪಕ್ಷ ಆಡಳಿತಕ್ಕೆ ಬಂದರೆ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಈ ರೀತಿ ಪೇಸಿಎಂ ಎಂದು ಅಂಟಿಸಿ ಜನರಿಗೆ ಏನು ಸಂದೇಶ ಕೊಡಲು ಹೊರಟಿದ್ದೀರ? ಇದು ಕಾಂಗ್ರೆಸ್‌ ಅಧಃಪತನವಾದ ಉದಾಹರಣೆ. ಈ ಮೂಲಕ ರಾಜ್ಯದ ಜನರೆದುರು ಕಾಂಗ್ರೆಸ್‌ ಬೆತ್ತಲಾಗಿದೆ ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಲು ಸಿಎಂ ಬೊಮ್ಮಾಯಿ, ಸಚಿವರಾದ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಸಚಿವರಾದ ಆರಗ ಜ್ಞಾನೇಂದ್ರ, ಗೋವಿಂದ ಕಾರಜೋಳ ಮುಂತಾದವರು ನಿರಾಕರಿಸಿದ್ದಾರೆ.

ಪೋಸ್ಟರ್‌ ಯಾರು ಹಾಕಿದ್ದು ಎಂಬ ಕುರಿತು ಪತ್ತೆ ಹಚ್ಚುವಂತೆ ಪೊಲೀಸ್‌ ಇಲಾಖೆಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | R Ashoka : ಕಾಂಗ್ರೆಸ್​ನವರೇ ಕೆರೆಗಳನ್ನು ಮುಚ್ಚಿದ್ದು

Exit mobile version