Site icon Vistara News

ಮುಂದುವರಿದ PayCM ಕದನ, ಬೀದಿಗೆ ಇಳಿಯಲಿರುವ ಕೈ ಮುಖಂಡರು, ಹಲವರ ಬಂಧನ

paycm

ಬೆಂಗಳೂರು: ಕಾಂಗ್ರೆಸ್‌ನಿಂದ ನಡೆಯುತ್ತಿರುವ PayCM ಅಭಿಯಾನ ರಾಜ್ಯದ ಹಲವು ಕಡೆ ಚುರುಕಾಗಿದ್ದು, ಸರ್ಕಾರದ ಮುಖಭಂಗ ಮಾಡುವ ಅಸ್ತ್ರವೊಂದನ್ನು ಕಂಡುಕೊಂಡ ಖುಷಿಯಲ್ಲಿದ್ದಾರೆ ಕಾಂಗ್ರೆಸ್‌ ನಾಯಕರು. ನೆಲಮಂಗಲ ಮುಂತಾದೆಡೆ ರಾತ್ರೋರಾತ್ರಿ PayCM ಪೋಸ್ಟರ್‌ ಅಂಟಿಸಿದ ಹಲವರನ್ನು ಬಂಧಿಸಲಾಗಿದೆ.

ಇಂದಿನಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ PayCM ಪೋಸ್ಟರ್ ಅಂಟಿಸುವ ಅಭಿಯಾನ ನಡೆಯಲಿದೆ. ಅಭಿಯಾನದಲ್ಲಿ ಎಐಸಿಸಿ ಜನರಲ್ ಸೆಕ್ರೆಟರಿ ಕೆಸಿ ವೇಣುಗೋಪಾಲ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ಕಾಂಗ್ರೆಸ್ ಶಾಸಕರು, ಎಂಎಲ್ಸಿಗಳು ಸಾಥ್‌ ನೀಡಲಿದ್ದಾರೆ.

ನಾನೇ ಪೋಸ್ಟರ್ ಅಂಟಿಸುತ್ತೇನೆ, ತಾಕತ್ ಇದ್ದರೆ ನನ್ನನ್ನು ಬಂಧಿಸಿ ಎಂದು ಸಿದ್ದರಾಮಯ್ಯ ನಿನ್ನೆ ಸವಾಲ್ ಹಾಕಿದ್ದರು. ಕಾನೂನು ಎಲ್ಲರಿಗೂ ಒಂದೇ ಎಂದು‌‌ ಎಚ್ಚರಿಸಿದ್ದರು. ಪೋಸ್ಟರ್ ಅಂಟಿಸಿದ್ದಕ್ಕೆ ಕೈ ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವ ಪೊಲೀಸ್ ಕ್ರಮ ಕೈ ಪಡೆಯನ್ನು ಕೆರಳಿಸಿದ್ದು, ಇಂದು ಸಚಿವರು ಹಾಗೂ ಸಿಎಂ ಇರುವ ಪೋಸ್ಟರ್‌ಗಳನ್ನು ಅಂಟಿಸುವ ಸಾಧ್ಯತೆ ಇದೆ.

ಈ ನಡುವೆ ನೆಲಮಂಗಲದಲ್ಲಿ PayCM ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದ ಹಲವರನ್ನು ಬಂಧಿಸಲಾಗಿದೆ. ನೆಲಮಂಗಲದ ಮುಖ್ಯರಸ್ತೆಗಳು, ಬಿಹೆಚ್ ರಸ್ತೆ, ಟಿಬಿ ಬಸ್ ನಿಲ್ದಾಣ, ಅರಿಶಿನಕುಂಟೆ, ಸರ್ಕಾರಿ ಆಸ್ಪತ್ರೆ ಕಾಂಪೌಂಡ್, ಅಂಬೇಡ್ಕರ್ ಭವನ ಕಾಂಪೌಂಡ್‌ ಸೇರಿದಂತೆ ಹಲವೆಡೆ ಪೋಸ್ಟರ್ ಕಂಡುಬಂದಿದೆ. ಇದು ಪೊಲೀಸರ ನಿದ್ದೆಗೆಡಿಸಿದೆ. ಡಿವೈಎಸ್ಪಿ ಸೇರಿದಂತೆ ಪೊಲೀಸರು ಗಸ್ತು ತಿರುಗುತ್ತಿದ್ದು, ಮೂವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ | Poster Politics | PAYCM ಪೋಸ್ಟರ್‌ ಅಂಟಿಸಿದವರ ಬಂಧನ ಬೆನ್ನಲ್ಲೇ ಪೇಟಿಎಂ ಪೇಮೆಂಟ್‌ ಫೋಟೊ ಹರಿಬಿಟ್ಟ ಕಾಂಗ್ರೆಸ್

Exit mobile version