ಬೆಂಗಳೂರು: ಪೇಸಿಎಂ (PayCM) ಪೋಸ್ಟರ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧನ ಮಾಡಿರುವ ಹಿನ್ನೆಲೆಯಲ್ಲಿ ಕೈಪಡೆ ಆಕ್ರೋಶಗೊಂಡಿದೆ. ಈ ಹಿನ್ನೆಲೆಯಲ್ಲಿ ಸ್ವತಃ ನಾಯಕರೇ ಪೋಸ್ಟರ್ ಅಂಟಿಸುವ ಕಾರ್ಯಕ್ಕೆ ಚಾಲನೆ ನೀಡುವ ಮುನ್ಸೂಚನೆ ಕೊಟ್ಟಿದ್ದು, ಈ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಖಾಸಗಿ ಹೋಟೆಲ್‌ನಲ್ಲಿ ಚರ್ಚೆ
ಭಾರತ್ ಜೋಡೋ ಅಭಿಯಾನ ಸಂಬಂಧ ರಾಜ್ಯಕ್ಕೆ ಭೇಟಿ ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಜತೆ ಅಶೋಕ ಹೋಟೆಲ್‌ನಲ್ಲಿ ರಾಜ್ಯ ಕಾಂಗ್ರೆಸ್ ಶಾಸಕರು ಮಹತ್ವದ ಸಭೆ ನಡೆಸಿದ್ದಾರೆ. ಈ ವಿಚಾರವಾಗಿ ಮೊದಲಿನಿಂದಲೂ ಧ್ವನಿ ಎತ್ತುತ್ತಿದ್ದ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆಯಿಂದ ಪ್ರಕರಣದ ಕುರಿತು ಸಮಗ್ರ ಮಾಹಿತಿಯನ್ನು ನೀಡಿದ್ದಾರೆನ್ನಲಾಗಿದೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಪಸ್ಥಿತರಿದ್ದರು. 20 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ನಡೆದಿದೆ.
ಅಭಿಯಾನ ಮುಂದುವರಿಕೆ ಕುರಿತು ಚರ್ಚೆ
40% ಕಮಿಷನ್ ವಿಚಾರವಾಗಿ ಪೇ ಸಿಎಂ ಅಭಿಯಾನ ಯಶಸ್ವಿಯಾಗಿದ್ದು, ಅದನ್ನು ಮುಂದುವರಿಸಬೇಕು. ಪಕ್ಷದ ಕಾರ್ಯಕರ್ತರನ್ನು ಈಗಾಗಲೇ ಬಂಧಿಸಲಾಗಿದೆ. ಇದು ನಮಗೆ ಸಿಕ್ಕ ಅಸ್ತ್ರವಾಗಿದೆ. ರಾಜ್ಯಾದ್ಯಂತ ಭ್ರಷ್ಟಾಚಾರದ ಕುರಿತು ವ್ಯಾಪಕ ಪ್ರಚಾರ ಮಾಡಬೇಕಿದೆ. ಹೀಗಾಗಿ ಈ ಅಭಿಯಾನವನ್ನು ಮುಂದುವರಿಸಬೇಕು ಎಂಬಿತ್ಯಾದಿ ವಿಷಯಗಳು ಈ ವೇಳೆ ಚರ್ಚೆಗೆ ಬಂದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ | ಮುಂದುವರಿದ PayCM ಕದನ, ಬೀದಿಗೆ ಇಳಿಯಲಿರುವ ಕೈ ಮುಖಂಡರು, ಹಲವರ ಬಂಧನ
ಸಿದ್ದರಾಮಯ್ಯ, ಡಿಕೆಶಿ ನೇತೃತ್ವ?
ಪೇಸಿಎಂ ಪೋಸ್ಟರ್ ಅನ್ನು ಬೆಂಗಳೂರಿನ ವಿವಿಧ ಕಡೆ ಅಂಟಿಸಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿರುವುದಕ್ಕೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೆಂಡಾಮಂಡಲವಾಗಿದ್ದು, “ಕಾನೂನು ಎಲ್ಲರಿಗೂ ಒಂದೇ ಆಗಿದೆ. ಹೀಗಾಗಿ ನಾವೇ ನಿಂತು ಪೋಸ್ಟರ್ ಅನ್ನು ಅಂಟಿಸುತ್ತೇವೆ. ತಾಕತ್ತಿದ್ದರೆ ಬಂಧಿಸಿ” ಎಂದು ಸವಾಲು ಹಾಕಿದ್ದರು. ಇದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರವಾಗಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಪೋಸ್ಟರ್ ಅಂಟಿಸುವ ಅಭಿಯಾನಕ್ಕೆ ಚಾಲನೆ ನೀಡುವ ಬಗ್ಗೆ ಚಿಂತನೆಗಳು ನಡೆದಿವೆ. ಜತೆಗೆ ಈ ಅಭಿಯಾನದಲ್ಲಿ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲ ಅವರನ್ನೂ ಭಾಗಿಯಾಗಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಕಾಂಗ್ರೆಸ್ ಶಾಸಕರು, ಎಂಎಲ್ಸಿಗಳು ಜತೆಯಾಗಲು ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.
ಸಂಜೆ 4 ಗಂಟೆಗೆ ಅಭಿಯಾನಕ್ಕೆ ಚಾಲನೆ?
ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಕೆಪಿಸಿಸಿ ಕಚೇರಿಗೆ ಬರಬೇಕು ಎಂದು ಶುಕ್ರವಾರ ಬೆಳಗ್ಗೆ ನಡೆದ ಸಭೆಯಲ್ಲಿ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ಅಲ್ಲಿಂದಲೇ ಪೇಸಿಎಂ ಪೋಸ್ಟರ್ ಅಂಟಿಸುವ ಅಭಿಯಾನವನ್ನು ಶುರು ಮಾಡುವ ಕುರಿತು ವೇಣುಗೋಪಾಲ, ಸುರ್ಜೇವಾಲ ಉಪಸ್ಥಿತಿಯಲ್ಲಿ ಡಿಕೆಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
ಅಭಿಯಾನ ಇನ್ನೂ ಅಂತಿಮವಾಗಿಲ್ಲ
ನಾಯಕರೇ ಖುದ್ದು ಪೋಸ್ಟರ್ ಅಂಟಿಸುವ ಸಂಬಂಧ ಇನ್ನೂ ತೀರ್ಮಾನ ಅಂತಿಮಗೊಂಡಿಲ್ಲ. ಈಗ ಸಿಕ್ಕಿರುವ ಪ್ರಚಾರ ಸರಿಯಾದ ಹಾದಿಯಲ್ಲಿದೆ. ಅನಗತ್ಯವಾಗಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಹೀಗಾಗಿ ನಾವುಗಳು ಪೋಸ್ಟರ್ ಅಂಟಿಸುವುದು ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದ್ದು, ಸಂಜೆ ಸೇರುವ ಸಭೆಯಲ್ಲಿ ಇದರ ಬಗ್ಗೆ ಮರು ಚಿಂತನೆ ಮಾಡುವ ಅಭಿಪ್ರಾಯಕ್ಕೂ ಬರಲಾಗಿದೆ.
ಇದನ್ನೂ ಓದಿ | Poster Politics | PAYCM ಪೋಸ್ಟರ್ ಅಂಟಿಸಿದವರ ಬಂಧನ ಬೆನ್ನಲ್ಲೇ ಪೇಟಿಎಂ ಪೇಮೆಂಟ್ ಫೋಟೊ ಹರಿಬಿಟ್ಟ ಕಾಂಗ್ರೆಸ್
ವಿಧಾನಸಭಾ ಅಧಿವೇಶನ ಮುಗಿದ ಬಳಿಕ ಪೋಸ್ಟರ್ ಅಂಟಿಸುವ ಕುರಿತು ಕೆಲವರು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಸಿದ್ದರಾಮಯ್ಯ ಏರ್ಪಡಿಸಿರುವ ಔತಣಕೂಟದ ಬಳಿಕ ಪೋಸ್ಟರ್ ಅಂಟಿಸಬಹುದು ಎಂಬ ಸಲಹೆಗಳೂ ಕೇಳಿಬಂದಿವೆ. ಇನ್ನು ಪೋಸ್ಟರ್ ಅಂಟಿಸುವುದಿದ್ದರೆ ವಿಧಾನಸೌಧ ಸುತ್ತಮುತ್ತ ಬೇಡ ಎಂದು ತೀರ್ಮಾನಿಸಲಾಗಿದ್ದು, ಬೇರೆ ಯಾವ ಕಡೆಗಳಲ್ಲಿ ಅಂಟಿಸಬಹುದು ಎಂಬುದನ್ನು ತೀರ್ಮಾನಿಸಲಿದ್ದಾರೆ.
ಪೋಸ್ಟರ್ ಅಂಟಿಸಿದ್ದ ಮೂವರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸದಾಶಿವನಗರ ಸರ್ಕಲ್ ಬಳಿ ಮೂವರು ಯುವಕರು ಪೇಸಿಎಂ ಪೋಸ್ಟರ್ ಅಂಟಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೊ ವೈರಲ್ ಆಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಯುವಕರಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಸುಮಾರು 15 ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ ಎನ್ನಲಾಗಿದೆ.
ಏನಿದು ಪ್ರಕರಣ?
ರಾಜ್ಯ ಸರ್ಕಾರದ ವಿರುದ್ಧ ಈಗಾಗಲೇ 40% ಕಮಿಷನ್ ಆರೋಪವನ್ನು ಬ್ರ್ಯಾಂಡ್ ಮಾಡುತ್ತಿರುವ ಪ್ರತಿಪಕ್ಷ ಕಾಂಗ್ರೆಸ್ ನೇರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಬಳಸಿ ಪೋಸ್ಟರ್‌ಗಳನ್ನು ಬೆಂಗಳೂರಿನ ವಿವಿಧೆಡೆ ಅಂಟಿಸಿತ್ತು. ಈ ಪೇಸಿಎಂ ಪೋಸ್ಟರ್‌ನಲ್ಲಿ ಕ್ಯೂಆರ್ ಕೋಡ್ ಸಹಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವನ್ನೂ ಹಾಕಲಾಗಿತ್ತು. ಪೋಸ್ಟರ್‌ನಲ್ಲಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ, ಇತ್ತೀಚೆಗೆ ಕಾಂಗ್ರೆಸ್ ಆರಂಭಿಸಿದ್ದ ವೆಬ್‌ಸೈಟ್ ವಿಳಾಸಕ್ಕೆ ಕರೆದೊಯ್ಯುತ್ತದೆ. ಈ ಮೂಲಕ, ರಾಜ್ಯ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದು ಪ್ರಚಾರ ಮಾಡುತ್ತಿದೆ. ಇದು ದೊಡ್ಡ ವಿವಾದವನ್ನೇ ಹುಟ್ಟುಹಾಕಿದ್ದು, ಬಿಜೆಪಿ ಕಿಡಿಕಾರಿದೆ. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೂ ಆಗ್ರಹಿಸಿತ್ತು. ಈಗ ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರನ್ನು ಬಂಧನ ಮಾಡಿರುವ ಹಿನ್ನೆಲೆಯಲ್ಲಿ ಕೈಪಡೆ ತಿರುಗಿಬಿದ್ದಿದ್ದು, ರಾಜ್ಯಾದ್ಯಂತ ಅಭಿಯಾನ ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ | PAYCM ಪೋಸ್ಟರ್ ಪ್ರಕರಣ | ಐದು ಕೇಸ್‌ಗಳ ತನಿಖೆ ಸಿಸಿಬಿಗೆ ವರ್ಗಾವಣೆ