ಬೆಂಗಳೂರು: ಪೇಸಿಎಂ (PayCM) ಪೋಸ್ಟರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುರುವಾರ ಬಂಧನಕ್ಕೊಳಗಾಗಿದ್ದ, ಐವರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಪ್ರಕಟಪಡಿಸಿದ ಹಾಗೂ ವಿವಿಧೆಡೆ ಪೋಸ್ಟರ್ ಅಂಟಿಸಿದ್ದ ಆರೋಪದ ಮೇಲೆ ಸಂಜಯ್, ಸಿದ್ಧಯ್ಯ, ವಿನೋದ್, ವಿಶ್ವಮೂರ್ತಿ, ಮದನ್ ಎಂಬುವವರನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದರು. ಈ ವೇಳೆ ತೀವ್ರ ವಿಚಾರಣೆಗೊಳಪಡಿಸಿ ಪ್ರಕರಣ ಸಂಬಂಧ ಮಾಹಿತಿಯನ್ನು ಕಲೆಹಾಕಿದ್ದರು.
ಶುಕ್ರವಾರ ಈ ಐದೂ ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸಂಜಯ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು 40% ಕಮಿಷನ್ ಪಡೆದುಕೊಳ್ಳುತ್ತಿದೆ ಎಂಬಂಶವನ್ನೊಳಗೊಂಡಂತೆ ಪೇಟಿಎಂ ಮಾದರಿಯಲ್ಲಿ ಕ್ಯೂಆರ್ ಕೋಡ್ ಬಳಸಿ ಪೇಸಿಎಂ ಎಂಬ ಪೋಸ್ಟರ್ ಅನ್ನು ಸಿದ್ಧಪಡಿಸಿ ಹರಿಬಿಡಲಾಗಿತ್ತು.
ಪೇಸಿಎಂ ಪ್ರಕರಣವು ಬಿಜೆಪಿಯನ್ನು ಭಾರಿ ಮುಜುಗರಕ್ಕೆ ಒಡ್ಡಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ಸಿಸಿಬಿಗೆ ತನಿಖೆಯ ನೇತೃತ್ವವನ್ನು ವಹಿಸಿತ್ತು. ಇದೇ ವೇಳೆ ತನಿಖೆಯನ್ನು ಚುರುಕುಗೊಳಿಸಲಾಗಿತ್ತು. ಗುರುವಾರ ಹೈಗ್ರೌಂಡ್ ಪೊಲೀಸರು ಐವರನ್ನು ಬಂಧಿಸಿತ್ತು. ಈಗ ಐದೂ ಮಂದಿಗೆ ಜಾಮೀನು ನೀಡಿ ನ್ಯಾಯಾಲಯ ಆದೇಶ ನೀಡಿದೆ.
ಇದನ್ನೂ ಓದಿ | PayCM | ಪೇಸಿಎಂ ಅಭಿಯಾನ ರಾಜ್ಯ ಮಟ್ಟಕ್ಕೆ ವಿಸ್ತರಣೆ; ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಚಾಲನೆ?
ಏನಿದು ಪ್ರಕರಣ?
ರಾಜ್ಯ ಸರ್ಕಾರದ ವಿರುದ್ಧ ಈಗಾಗಲೇ 40% ಕಮಿಷನ್ ಆರೋಪವನ್ನು ಬ್ರ್ಯಾಂಡ್ ಮಾಡುತ್ತಿರುವ ಪ್ರತಿಪಕ್ಷ ಕಾಂಗ್ರೆಸ್ ನೇರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಬಳಸಿ ಪೋಸ್ಟರ್‌ಗಳನ್ನು ಬೆಂಗಳೂರಿನ ವಿವಿಧೆಡೆ ಅಂಟಿಸಿತ್ತು. ಈ ಪೇಸಿಎಂ ಪೋಸ್ಟರ್‌ನಲ್ಲಿ ಕ್ಯೂಆರ್ ಕೋಡ್ ಸಹಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವನ್ನೂ ಹಾಕಲಾಗಿತ್ತು. ಪೋಸ್ಟರ್‌ನಲ್ಲಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ, ಇತ್ತೀಚೆಗೆ ಕಾಂಗ್ರೆಸ್ ಆರಂಭಿಸಿದ್ದ ವೆಬ್‌ಸೈಟ್ ವಿಳಾಸಕ್ಕೆ ಕರೆದೊಯ್ಯುತ್ತದೆ. ಈ ಮೂಲಕ, ರಾಜ್ಯ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದು ಪ್ರಚಾರ ಮಾಡುತ್ತಿದೆ. ಇದು ದೊಡ್ಡ ವಿವಾದವನ್ನೇ ಹುಟ್ಟುಹಾಕಿದ್ದು, ಬಿಜೆಪಿ ಕಿಡಿಕಾರಿದೆ. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೂ ಆಗ್ರಹಿಸಿತ್ತು. ಈಗ ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರನ್ನು ಬಂಧನ ಮಾಡಿರುವ ಹಿನ್ನೆಲೆಯಲ್ಲಿ ಕೈಪಡೆ ತಿರುಗಿಬಿದ್ದಿದ್ದು, ರಾಜ್ಯಾದ್ಯಂತ ಅಭಿಯಾನ ಹಮ್ಮಿಕೊಂಡಿದೆ.