ಬೆಂಗಳೂರು: ನಗರದಲ್ಲಿ PAYCM ಪೋಸ್ಟರ್ ಅಂಟಿಸಿದ ಹಿನ್ನೆಲೆಯಲ್ಲಿ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ 5 ಪ್ರಕರಣಗಳ ತನಿಖೆಯನ್ನು ಕೇಂದ್ರ ಅಪರಾಧ ವಿಭಾಗಕ್ಕೆ(ಸಿಸಿಬಿ) ವರ್ಗಾವಣೆ ಮಾಡಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಭ್ರಷ್ಟಾಚಾರ ಆರೋಪ ಮಾಡುವ ಜತೆಗೆ ನೇರವಾಗಿ ಕ್ಯೂಆರ್ ಕೋಡ್‌ನಲ್ಲಿ ಸಿಎಂ ಭಾವಚಿತ್ರದೊಂದಿಗೆ ಪೇಸಿಎಂ, 40 ಪರ್ಸೆಂಟ್ ಆ್ಯಕ್ಸೆಪ್ಟೆಡ್ ಎಂದು ಬರೆದ ಪೋಸ್ಟರ್‌ಗಳನ್ನು ಕೆಲವರು ನಗರದ ವಿವಿಧೆಡೆ ಅಂಟಿಸಿದ್ದರು. ಈ ಸಂಬಂಧ ಸದಾಶಿವನಗರ, ಹೈಗ್ರೌಂಡ್ಸ್, ಶೇಷಾದ್ರಿಪುರಂ, ಭಾರತೀನಗರ ಸೇರಿದಂತೆ ಐದು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿಗಳ ಜತೆ ಸಭೆ ನಡೆಸಿ ನಗರದಲ್ಲಿ ಯಾವುದೇ ಕಡೆ ಈ ರೀತಿಯ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಲು ಸೂಚಿಸಿದ್ದಾರೆ.
ಸದಾಶಿವ ನಗರ, ಶೇಷಾದ್ರಿಪುರಂ ಒಂದು ಕಡೆ, ಹೈಗ್ರೌಂಡ್ಸ್ ವ್ಯಾಪ್ತಿಯಲ್ಲಿ 4 ಕಡೆ ಪೇಸಿಎಂ ಪೋಸ್ಟರ್ ಅಂಟಿಸಲಾಗಿದೆ. ಈ ಸಂಬಂಧ ಐದಕ್ಕೂ ಹೆಚ್ಚು ಎಫ್‌ಐಆರ್ ದಾಖಲಾಗಿವೆ. ಈ ಪ್ರಕರಣಗಳು ಸಿಸಿಬಿ ವರ್ಗಾವಣೆ ಆಗಿದ್ದರಿಂದ ಸಿಸಿಬಿ ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ ಎಂದು ಕೇಂದ್ರ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಇದನ್ನೂ ಓದಿ | PAY CM ಅಭಿಯಾನ ಆರಂಭಿಸಿದ ಕಾಂಗ್ರೆಸ್: QR ಕೋಡ್‌ಗೆ ಸಿಟ್ಟಿಗೆದ್ದ ಬಿಜೆಪಿ