ಬೆಂಗಳೂರು: ಪೇಸಿಎಂ (PayCM) ಪೋಸ್ಟರ್ ಪ್ರಕರಣವನ್ನು ಕೇಂದ್ರ ಅಪರಾಧ ವಿಭಾಗಕ್ಕೆ (ಸಿಸಿಬಿ) ವಹಿಸಿರುವ ಬೆನ್ನಲ್ಲೇ ತನಿಖೆ ಚುರುಕು ಮಾಡಿರುವ ಸಿಸಿಬಿ ತಂಡವು ಪ್ರಕರಣ ಸಂಬಂಧ ಬುಧವಾರ ತಡರಾತ್ರಿ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ.
ಸಿಸಿಬಿ ಹಾಗೂ ಕೇಂದ್ರ ವಿಭಾಗ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿದ್ದು, ವಶಕ್ಕೆ ಪಡೆದಿರುವ ಆರು ಮಂದಿಯನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಹಾಗೂ ವಿವಿಧ ಪ್ರದೇಶಗಳಲ್ಲಿ ಪೋಸ್ಟರ್ ಅಂಟಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಯುತ್ತಿದ್ದು, ಆರೂ ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೆಪಿಸಿಸಿ ಸಾಮಾಜಿಕ ಜಾಲತಾಣದ ಮಾಜಿ ಅಧ್ಯಕ್ಷ ಮತ್ತು ಸದಸ್ಯ ಬಿ.ಆರ್. ನಾಯ್ಡು, ಗಗನ್ ಯಾದವ್, ಪವನ್ ಸಹಿತ ಇನ್ನೂ ಮೂವರನ್ನು ಸಿಸಿಬಿ ಪೊಲೀಸರ ತಂಡವು ಬುಧವಾರ ತಡರಾತ್ರಿ ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.
ಇದನ್ನೂ ಓದಿ | PAYCM ಪೋಸ್ಟರ್ ಪ್ರಕರಣ | ಐದು ಕೇಸ್‌ಗಳ ತನಿಖೆ ಸಿಸಿಬಿಗೆ ವರ್ಗಾವಣೆ
ಪೇಟಿಎಂ ಆ್ಯಪ್ ಜಾಹೀರಾತನ್ನು ಮಾರ್ಪಡಿಸಿ ಅದರಲ್ಲಿ ಬರುವ ಅಂಗಡಿಯನ್ನು ಮುಖಕ್ಕೆ ಸಿಎಂ ಬೊಮ್ಮಾಯಿ ಮುಖ ಅಳವಡಿಸಿದ್ದ ವಿಡಿಯೋ ಹಾಗೂ ಹಣವನ್ನು ಸಿಎಂ ಖಾತೆಗೆ ಹಾಕುವಂತೆ ಹೇಳಿದಂತೆ ಎಡಿಟೆಡ್ ವಿಡಿಯೊವನ್ನು ಬಿ.ಆರ್.ನಾಯ್ಡು ತಮ್ಮ @brnaidu1978 ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದರು. ಅಲ್ಲದೆ, “ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದಿ. ಎಸ್.ಆರ್.ಬೊಮ್ಮಾಯಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದ್ದರು. ಆದರೆ, ಅವರ ಪುತ್ರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯವನ್ನು ಭ್ರಷ್ಟಾಚಾರದ ಗೂಡಾಗಿಸಿ 40% ಕಮಿಷನ್ ಸರ್ಕಾರದ ಅಪಕೀರ್ತಿಗೆ ಭಾಜನರಾಗಿದ್ದಾರೆ. ಆಡಳಿತದಲ್ಲಿ ಹಿಡಿತವಿಲ್ಲದ ಈ ಸಿಎಂ `ದಾರಿ ತಪ್ಪಿದ ಮಗ’ನಾಗಿದ್ದಾರೆ” ಎಂದು ಬರೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹೈಗ್ರೌಂಡ್ ಠಾಣೆ ಪೊಲೀಸರು ಬುಧವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ವಶಕ್ಕೆ ಪಡೆದಿದ್ದಾರೆ.
ಆಂಧ್ರ ಕಾಂಗ್ರೆಸ್ ಖಂಡನೆ
ಬಿ.ಆರ್.ನಾಯ್ಡು ಬಂಧನವನ್ನು ಆಂಧ್ರಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಕಂ ಠಾಗೋರ್ ಬಿ. ಟ್ವೀಟ್ ಮೂಲಕ ಖಂಡಿಸಿದ್ದಾರೆ. “@BSBommai ನೀವು ಹಣ ಸಂಗ್ರಹಣೆಯನ್ನು ನಿಲ್ಲಿಸಬೇಕು. ಅಲ್ಲದೆ, ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿರುವವರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು” ಎಂದು ಟ್ವೀಟ್ ಮಾಡಿದ್ದಲ್ಲದೆ, ವಿ ಸ್ಟ್ಯಾಂಡ್ ವಿಥ್ ಬಿಆರ್ ನಾಯ್ಡು (#WeStandwithBRNaidu) ಎಂದು ಹೇಳಿಕೊಂಡಿದ್ದಾರೆ.
ಗಗನ್ ಯಾದವ್ ವಶಕ್ಕೆ
ಕೆಪಿಸಿಸಿ ಸಾಮಾಜಿಕ ಜಾಲತಾಣದ ಸದಸ್ಯ ಡಿ.ಎ.ಗಗನ್ ಯಾದವ್ ಅವರನ್ನು ಪೊಲೀಸರು ತಡರಾತ್ರಿ ಅವರ ಕೆ.ಆರ್.ಪುರಂ ನಿವಾಸದಿಂದ ಕರೆದೊಯ್ದಿದ್ದು, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಉಳಿದವರ ಮಾಹಿತಿ ತಿಳಿದುಬರಬೇಕಿದೆ.
ಎಲ್ಲೆಲ್ಲಿದೆ ಪೋಸ್ಟರ್?
ಬೆಂಗಳೂರಿನ ವಿವಿಧ ಕಡೆ ಪೇಸಿಎಂ ಪೋಸ್ಟರ್ ಅನ್ನು ಅಂಟಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೇಂದ್ರ, ಉತ್ತರ, ಪೂರ್ವ ವಿಭಾಗದಲ್ಲಿ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯ ರೇಸ್ ಕೋರ್ಸ್ ರಸ್ತೆ, ಇಂಟರ್ನ್ಯಾಷನಲ್ ಹೋಟೆಲ್ ಪಕ್ಕ, ಶಿವಾನಂದ ಸರ್ಕಲ್ ಅಂಡರ್ ಪಾಸ್, ವಸಂತನಗರ ರೇಸ್ ಕೋರ್ಸ್ ರಸ್ತೆಗಳ ಕಡೆಗಳಲ್ಲಿ ಪೋಸ್ಟರ್ ಅಂಟಿಸಲಾಗಿದೆ. ಈ ಸಂಬಂಧ ನಾಲ್ಕು ಪ್ರತ್ಯೇಕ ಎಫ್‌ಐಆರ್ ದಾಖಲು ಮಾಡಲಾಗಿದೆ.
ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಖ್ರಿ ಸರ್ಕಲ್ ಬಳಿ ಸುಮಾರು ಐವತ್ತು ಮೀಟರ್ ಉದ್ದಕ್ಕೂ ಪೋಸ್ಟರ್ ಅನ್ನು ಅಂಟಿಸಲಾಗಿದೆ. ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯ ಮೂರು ಕಡೆ ಪೋಸ್ಟರ್ ಅಂಟಿಸಲಾಗಿದೆ. ಶೇಷಾದ್ರಿಪುರಂ ಕಾಲೇಜು ಮುಖ್ಯ ರಸ್ತೆ ಬಳಿಯ ಹಾಪ್ ಕಾಮ್ಸ್ ಮಳಿಗೆಗೆ ಅಂಟಿಸಲಾಗಿದೆ. ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಳಾರಿ ಮುಖ್ಯ ರಸ್ತೆಯ ಸಿಬಿಐ ಬಸ್ ನಿಲ್ದಾಣ, ವೆಟರ್ನರಿ ಕಾಲೇಜ್ ಬಸ್ ನಿಲ್ದಾಣ, ಹೆಬ್ಬಾಳ ಫ್ಲೈಓವರ್ ಕೆಳಗಿರುವ ಕಂಬಗಳಿಗೆ ಪೋಸ್ಟರ್ ಅಂಟಿಸಲಾಗಿದೆ. ಈ ಸಂಬಂಧ ಒಂದು ಎಫ್‌ಐಆರ್ ದಾಖಲಾಗಿದೆ.
ಜೆ.ಸಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಹಮಹಲ್ ರಸ್ತೆ ಬಳಿ ಪೋಸ್ಟರ್ ಅಂಟಿಸಲಾಗಿದ್ದು, ಯಾರು ಅಂಟಿಸಿದ್ದಾರೆಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುತ್ತಮುತ್ತಲು ಇರುವ ಸಿಸಿ ಕ್ಯಾಮೆರಾ ಫೂಟೇಜ್‌ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಪೇಸಿಎಂ (PAYCM) ಪೋಸ್ಟರ್ ಹಂಚಿಕೆ ಸಂಬಂಧ ಒಟ್ಟು ಐದು ಠಾಣೆಗಳಲ್ಲಿ 8 ಎಫ್ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಪೊಲೀಸ್ ಆಯುಕ್ತರು ಆದೇಶ ನೀಡಿದ್ದರು.
ಇದನ್ನೂ ಓದಿ | PAY CM ಅಭಿಯಾನ ಆರಂಭಿಸಿದ ಕಾಂಗ್ರೆಸ್: QR ಕೋಡ್‌ಗೆ ಸಿಟ್ಟಿಗೆದ್ದ ಬಿಜೆಪಿ
ಏನಿದು ಪ್ರಕರಣ?
ರಾಜ್ಯ ಸರ್ಕಾರದ ವಿರುದ್ಧ ಈಗಾಗಲೇ 40% ಕಮಿಷನ್ ಆರೋಪವನ್ನು ಬ್ರ್ಯಾಂಡ್ ಮಾಡುತ್ತಿರುವ ಪ್ರತಿಪಕ್ಷ ಕಾಂಗ್ರೆಸ್ ನೇರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಬಳಸಿ ಪೋಸ್ಟರ್‌ಗಳನ್ನು ಬೆಂಗಳೂರಿನ ವಿವಿಧೆಡೆ ಅಂಟಿಸಿತ್ತು. ಈ ಪೇಸಿಎಂ ಪೋಸ್ಟರ್‌ನಲ್ಲಿ ಕ್ಯೂಆರ್ ಕೋಡ್ ಸಹಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವನ್ನೂ ಹಾಕಲಾಗಿತ್ತು. ಪೋಸ್ಟರ್‌ನಲ್ಲಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ, ಇತ್ತೀಚೆಗೆ ಕಾಂಗ್ರೆಸ್ ಆರಂಭಿಸಿದ್ದ ವೆಬ್‌ಸೈಟ್ ವಿಳಾಸಕ್ಕೆ ಕರೆದೊಯ್ಯುತ್ತದೆ. ಈ ಮೂಲಕ, ರಾಜ್ಯ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದು ಪ್ರಚಾರ ಮಾಡುತ್ತಿದೆ. ಇದು ದೊಡ್ಡ ವಿವಾದವನ್ನೇ ಹುಟ್ಟುಹಾಕಿದ್ದು, ಬಿಜೆಪಿ ಕಿಡಿಕಾರಿದೆ. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೂ ಆಗ್ರಹಿಸಿತ್ತು.