ಬೆಂಗಳೂರು: ಒಬ್ಬ ಮಾಜಿ ಮುಖ್ಯಮಂತ್ರಿ ಹೋಗಿ ಪೋಸ್ಟರ್ ಅಂಟಿಸುವುದನ್ನು ನೋಡಿದ್ದೀರಾ? 75 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಮಾಡಲಾಗಿದೆ. ಅವರಿಗೆ ನಾಚಿಕೆ ಆಗಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಪೇಸಿಎಂ (PayCM) ಅಭಿಯಾನದ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪೇಸಿಎಂ ಅಭಿಯಾನದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಕಾಂಗ್ರೆಸ್‌ನವರು ಕೆಳ ಹಂತಕ್ಕೆ ಹೋಗಿ ರಾಜಕೀಯ ಮಾಡುವುದರಲ್ಲಿ ನಿಸ್ಸೀಮರು ಎಂಬುದು ಈ ಮೂಲಕ ತಿಳಿದುಬಂದಿದೆ. ಈ ಮೂಲಕ ಕಾಂಗ್ರೆಸ್ ದೇಶದ ಮುಂದೆ ಬೆತ್ತಲಾಗಿದೆ ಎಂದು ಸದಾಶಿವನಗರದ ತಮ್ಮ ನಿವಾಸದೆದುರು ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್‌ನ ಅನೇಕರಿಗೆ ವಯಸ್ಸಾಗಿದೆ. ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕೆಂದು ಹಠತೊಟ್ಟಿದ್ದಾರೆ. ವೈಯಕ್ತಿಕ ಲಾಭಕ್ಕೋಸ್ಕರ ಈಗ ಪೇಸಿಎಂ ಎಂದು ಪೋಸ್ಟರ್ ಮಾಡಿದ್ದಾರೆ. ಇದು ರಾಜಕೀಯ ದುರುದ್ದೇಶದ ಅಭಿಯಾನವಾಗಿದೆ. ತಮ್ಮ ಅನುಮತಿ ಇಲ್ಲದೆ ಫೋಟೊ ಬಳಸಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ನಟ ಅನಿಲ್ ಅಯ್ಯರ್ ಹೇಳಿದ್ದಾರೆ ಎಂದು ಸುಧಾಕರ್ ತಿಳಿಸಿದರು.
ಇದನ್ನೂ ಓದಿ | PayCM | ಪೇಸಿಎಂ ಪೋಸ್ಟರ್ ಅಂಟಿಸಿದ ಸಿದ್ದು, ಡಿಕೆಶಿ ವಿರುದ್ದ ಕಾನೂನು ಕ್ರಮ ಖಚಿತ ಎಂದ ಸಿಎಂ ಬೊಮ್ಮಾಯಿ
ಲಿಂಗಾಯತ ಸಮುದಾಯ ಟಾರ್ಗೆಟ್
ಪ್ರಬಲ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದೆ. ಸಿಎಂ ಬೊಮ್ಮಾಯಿ ಅವರನ್ನು ಜನಸಾಮಾನ್ಯರ ಮುಖ್ಯಮಂತ್ರಿ ಅಂತ ಜನ ನಂಬಿದ್ದಾರೆ. ಅವರ ಶುದ್ಧ ಆಡಳಿತವನ್ನು ಕಾಂಗ್ರೆಸ್‌ಗೆ ತಡೆದುಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್ ಈ ಹಿಂದೆ ವೀರೇಂದ್ರ ಪಾಟೀಲ್‌ರಿಗೂ ಹೀಗೆ ಮಾಡಿತ್ತು. ಪ್ರಬಲ ಲಿಂಗಾಯತ ಸಮುದಾಯದ ಮುಖ್ಯಮಂತ್ರಿ ಇದ್ದರೆ ಕಾಂಗ್ರೆಸ್ ಈ ರೀತಿ ಮಾಡುತ್ತದೆ. ಕೆಂಗಲ್ ಹನುಮಂತಯ್ಯ ಅವರನ್ನೂ ಬಿಟ್ಟಿಲ್ಲ ಎಂದು ಸುಧಾಕರ್ ಹೇಳಿದರು.
ಇವರೆಲ್ಲರೂ ಸತ್ಯ ಹರಿಶ್ಚಂದ್ರರಾ?
ಎಷ್ಟು ಜನ ಕಾಂಗ್ರೆಸ್ಸಿಗರು ಜೈಲಿಗೆ ಹೋಗಿ ಬಂದಿದ್ದಾರೆ? ಎಷ್ಟು ಜನ ಬೇಲ್‌ನಲ್ಲಿದ್ದಾರೆ? ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡೋಕೆ ನಾಚಿಕೆ ಆಗಲ್ವಾ? ಹಿರಿಯ ನಾಯಕರೇ ಬೇಲ್ ಮೇಲೆ ಹೊರಗೆ ಇದ್ದಾರೆ. ಭ್ರಷ್ಟಾಚಾರದ ಕಾರಣ ಸರ್ಕಾರಗಳನ್ನೇ ಕಳೆದುಕೊಂಡಿದ್ದಾರೆ. ಈ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ? ಇವರೆಲ್ಲರೂ ಸತ್ಯ ಹರಿಶ್ಚಂದ್ರರಾ? ಎಂದು ಸುಧಾಕರ್ ಪ್ರಶ್ನೆ ಮಾಡಿದ್ದಾರೆ.
ಜನ ಮೂರ್ಖರಲ್ಲ
ಕರ್ನಾಟಕದ ರಾಜಕೀಯ ಘನತೆಯನ್ನು ಕಾಂಗ್ರೆಸ್ ಹಾಳು ಮಾಡುತ್ತಿದೆ. ಕೇವಲ ರಾಜಕೀಯ ದುರುದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ. ಏನೇ ಆದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್‌ಗೆ ಈವರೆಗೆ ಇದ್ದ ಶೇ.1, 2 ರಷ್ಟು ಅವಕಾಶವನ್ನೂ ಈ ಅಭಿಯಾನದಿಂದ ಕಳೆದುಕೊಂಡಿದ್ದಾರೆ ಎಂದು ಸಚಿವ ಸುಧಾಕರ್ ಹೇಳಿದರು.
ಪೇಸಿಎಂ ಅಭಿಯಾನ ಸಂಬಂಧ ಬಿಜೆಪಿ ಕೌಂಟರ್ ಕೊಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ಕಾಂಗ್ರೆಸ್‌ಗೆ ಜನರೇ ಕೌಂಟರ್ ಕೊಡುತ್ತಾರೆ. ನಮ್ಮ ಆಡಳಿತ ಉತ್ತರ ಕೊಡಲಿದೆ. ಜನಸಾಮಾನ್ಯರಿಗೆ ಸರ್ಕಾರದ ಎಲ್ಲ ಸೌಲಭ್ಯ ತಲುಪುತ್ತಿದೆ. ಹೀಗಾಗಿ ಜನರೇ ಜವಾಬು ಕೊಡುತ್ತಾರೆ. ಮೇನಲ್ಲಿ ನಡೆಯುವ ಚುನಾವಣೆಯಲ್ಲಿ ಜನರು ಯಾರು ಯಾರನ್ನು ಮನೆಗೆ ಕಳುಹಿಸುತ್ತಾರೆ ಎಂಬುದನ್ನು ನೋಡಿ ಎಂದು ಸಚಿವ ಸುಧಾಕರ್ ತಿರುಗೇಟು ನೀಡಿದರು.
ಇದನ್ನೂ ಓದಿ | PayCm | ಪೇಸಿಎಂ ಚುರುಕುಗೊಳಿಸಿದ ಕಾಂಗ್ರೆಸ್, ಬೂತ್ ಮಟ್ಟದಲ್ಲೂ ಅಭಿಯಾನ!