Site icon Vistara News

Peacock Attack : ಎಲ್ಲ ಆಯ್ತು ಈಗ ನವಿಲು ದಾಳಿ; ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅಟ್ಯಾಕ್

Peacock attacks woman

ರಾಮನಗರ: ರಾಜ್ಯದಲ್ಲಿ ಎಲ್ಲ ಕಡೆ ಈಗ ಪ್ರಾಣಿಗಳ ಹಾವಳಿಯದೇ (Animals menace) ಅಬ್ಬರ. ಮಲೆನಾಡು ಮತ್ತು ಬೆಂಗಳೂರು ಸುತ್ತಮುತ್ತ ಆನೆಗಳು (Elephants attack) ನಿತ್ಯ ಎಂಬಂತೆ ದಾಂಗುಡಿ ಇಡುತ್ತಿದೆ. ಕೃಷಿಗೆ ಹಾನಿ ಮಾಡುತ್ತಿವೆ. ಇನ್ನು, ಹುಲಿ, ಕರಡಿ, ಚಿರತೆಗಳು ಎಲ್ಲೆಂದರಲ್ಲಿ ದಾಳಿ ಮಾಡುತ್ತಿವೆ. ಇತ್ತ ಮಂಗಗಳ ಕಾಟವಂತೂ ಹೇಳತೀರದು. ಈಗ ಈ ಸಾಲಿಗೆ ನಮ್ಮ ರಾಷ್ಟ್ರಪಕ್ಷಿ ನವಿಲೂ (Peacock attack) ಸೇರಿಕೊಂಡಿದೆ.

ನವಿಲುಗಳು ಕೃಷಿಗೆ ಹಾನಿ ಮಾಡುವುದು ಹೊಸ ಸಂಗತಿಯೇನಲ್ಲ. ಬೀಜಗಳಿಂದ ಹಿಡಿದು ಗಡ್ಡೆಗಳ ವರೆಗೆ ಎಲ್ಲವನ್ನೂ ಹೊರಗೆಳೆದು ಹಾಕುವ ನವಿಲುಗಳ ಕಾಟದಿಂದ ಜನರು ಬೇಸತ್ತಿದ್ದಾರೆ. ಆದರೆ, ಇಲ್ಲಿ ನವಿಲುಗಳು ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಅದೇನೆಂದರೆ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮಹಿಳೆ ಮೇಲೆಯೇ ನವಿಲು ದಾಳಿ (Peacock attack woman) ಮಾಡಿದೆ.

ಮನೆ ಮೇಲೆ ನವಿಲು

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಘಟನೆ ನಡೆದಿದ್ದು, ಲಿಂಗಮ್ಮ (66) ಎಂಬ ಮಹಿಳೆಯ ಮೇಲೆ ನವಿಲು ದಾಳಿ ಮಾಡಿದೆ.

ಲಿಂಗಮ್ಮ ಅವರಿಗೆ ಸೇರಿದ ಜಮೀನಿಗೆ ದೊಡ್ಡ ಪ್ರಮಾಣದಲ್ಲಿ ನವಿಲುಗಳು ಲಗ್ಗೆ ಇಡುತ್ತಿದ್ದವು. ಬೆಳೆಗಳಿಗೆ ಹಾನಿ ಮಾಡುತ್ತಿದ್ದವು. ಜಮೀನಿಗೆ ಹಿಂಡು ಹಿಂಡಾಗಿ ಬರುತ್ತಿರುವ ನವಿಲುಗಳಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿ ಅವರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ನಡುವೆ, ನವಿಲುಗಳು ಅವರ ಮೇಲೆಯೇ ದಾಳಿ ಮಾಡಿವೆ. ಅವರ ಕಣ್ಣು, ತಲೆ ಹಾಗೂ ಮುಖದ ಭಾಗಕ್ಕೆ ಗಾಯಗಳಾಗಿವೆ. ಆವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನವಿಲುಗಳನ್ನು ಹಿಡಿದು ಜೀವ ರಕ್ಷಣೆ ಮಾಡುವಂತೆ ಚನ್ನಪಟ್ಟಣ ಸಂರಕ್ಷಣಾಧಿಕಾರಿಗಳಿಗೆ ಮತ್ತೊಮ್ಮೆ ದೂರು ನೀಡಲಾಗಿದೆ. ಜತೆಗೆ ಪೊಲೀಸ್‌ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ. ಸುತ್ತಮುತ್ತಲ ಹಳ್ಳಿಗಳ ಜನರು ಕೂಡಾ ಈ ಘಟನೆಯಿಂದ ಆತಂಕಿತರಾಗಿದ್ದು ರಕ್ಷಣೆ ಕೋರಲು ಮುಂದಾಗಿದ್ದಾರೆ.

ಕೃಷ್ಣಾ ನದಿಯಲ್ಲಿ ನೀರು ಖಾಲಿ; ಅಕ್ಕಪಕ್ಕದಲ್ಲಿ ಮೊಸಳೆ ಹಾವಳಿ!

ಬಾಗಲಕೋಟೆ: ಈ ಭಾಗದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ಮಳೆ ಇಲ್ಲದೆ ಬತ್ತಿ ಹೋಗಿದೆ. ಜನರು ಒಂದು ಕಡೆ ನೀರಿ;ಲ್ಲದೆ ತೊಂದರೆ ಅನುಭವಿಸುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ನೀರು ಖಾಲಿಯಾದ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ಮೊಸಳೆ ಹಾವಳಿ ಜೋರಾಗಿದೆ.

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಕೊಂತಿಕಲ್ ಗ್ರಾಮದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದೆ. ಆಹಾರ ಅರಸಿ ಕಬ್ಬಿನ ಗದ್ದೆಗೆ ಬಂದಿದ್ದ ಅದು ರಸ್ತೆ ಬದಿ ಮೇಯುತ್ತಿದ್ದ ಮೇಕೆ ಮೇಲೆ ದಾಳಿ ಮಾಡಿದೆ.

ನದಿಯಿಂದ ಮೇಲೆದ್ದು ಬಂದ ಮೊಸಳೆ

ಆಹಾರಕ್ಕಾಗಿ ಅಲೆಯುತ್ತಾ ಗ್ರಾಮದತ್ತ ಬಂದ ಈ ಮೊಸಳೆ ಸುಮಾರು 9 ಅಡಿ ಉದ್ದವಿದೆ. ಮೇಕೆಯ ಮೇಲೆ ದಾಳಿ ಮಾಡಿ ತಿನ್ನಲು ಮುಂದಾಗಿದ್ದನ್ನು ಗಮನಿಸಿದ ಕೊಂತಿಕಲ್‌ ಗ್ರಾಮಸ್ಥರು ಸೇರಿ ಮೊಸಳೆಯನ್ನು ಕಟ್ಟಿ ಹಾಕಿದ್ದಾರೆ. ಆದರೆ, ಮೇಕೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Elephant death: ಆಹಾರ ಅರಸಿ ಬಂದ ಬಲಿಷ್ಠ ಆನೆ ಅಸಹಾಯಕವಾಗಿ ಬಿದ್ದು ಸಾವು

ಗ್ರಾಮಸ್ಥರು ಜೆಸಿಬಿ ಬಳಸಿ ಮೊಸಳೆಯನ್ನು ಕಟ್ಟಿ ಹಾಕಿದ ಘಟನೆ ಮಾಹಿತಿ ಪಡೆದ ವಲಯ ಅರಣ್ಯ ಅಧಿಕಾರಿ ಸ್ಥಳಕ್ಕೆ ಧಾವಿಸಿದ್ದರು. ಮೊಸಳೆಗೆ ನೀರು ಹಾಕಿ ಕೆಸರು ತೊಳೆದು ವಾಹನದ ಮೂಲಕ ಸುರಕ್ಷಿತವಾಗಿ ಆಲಮಟ್ಟಿ ಹಿನ್ನೀರಿಗೆ ಮೊಸಳೆ ಸಾಗಿಸಲಾಗಿದೆ.

Exit mobile version