ವರುಣ: ಮೈಸೂರಿನ ವರುಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರ ಪರ ಪ್ರಚಾರಕ್ಕೆ ತೆರಳಿದಾಗ ಸಂಸದ ಪ್ರತಾಪ್ ಸಿಂಹ (Pratap Simha) ಅವರನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಸಂವಿಧಾನ ಬದಲಾವಣೆ, ಅನ್ನ ಭಾಗ್ಯ ಯೋಜನೆಯಿಂದ ಹಿಡಿದು ಜನ ಹಲವು ಪ್ರಶ್ನೆ ಕೇಳಿದ್ದು, ಇದರಿಂದ ಪ್ರತಾಪ್ ಸಿಂಹ ಕೆಲ ಕಾಲ ತಬ್ಬಿಬ್ಬಾದರು. ಜನ ತರಾಟೆಗೆ ತೆಗೆದುಕೊಂಡ ವಿಡಿಯೊ ಈಗ ವೈರಲ್ ಆಗಿದೆ.
ವರುಣ ವ್ಯಾಪ್ತಿಯ ಗ್ರಾಮದಲ್ಲಿ ಪ್ರತಾಪ್ ಸಿಂಹ ಅವರು ಪ್ರಚಾರ ಕೈಗೊಂಡರು. ಇದೇ ವೇಳೆ ಗ್ರಾಮಸ್ಥರು, “ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎನ್ನುತ್ತೀರಿ. ನಾವು ಬಂದಿದ್ದೇ ಸಂವಿಧಾನ ಬದಲಾವಣೆ ಮಾಡಲು ಎಂದು ಬಿಜೆಪಿಯವರು ಹೇಳಿದ್ದೀರಿ. ನಾವು ಏಕೆ ನಿಮಗೆ ಬೆಂಬಲ ನೀಡಬೇಕು” ಎಂದು ಪ್ರಶ್ನಿಸಿದರು.
ಇಲ್ಲಿದೆ ವಿಡಿಯೊ
ಹಾಗೆಯೇ, “ಅಕ್ಕಿ ಕೇಂದ್ರ ಸರ್ಕಾರದ್ದು, ಅಕ್ಕಿ ಚೀಲ ಸಿದ್ದರಾಮಯ್ಯನವರದ್ದು ಎಂದು ಹೇಳಿದ್ದಿರಿ. ಆದೆರ, ನೀವೇಕೆ ಈಗ ಅಕ್ಕಿ ಕಡಿಮೆ ಮಾಡಿದ್ದೀರಿ? ಮೈಸೂರಿಗೆ ಸಿದ್ದರಾಮಯ್ಯ ನೀಡಿದ ಕೊಡುಗೆ ಏನು ಎಂದು ಪ್ರಶ್ನೆ ಮಾಡುತ್ತೀರಿ. ಅವರ ಪಕ್ಕ ಕುಳಿತುಕೊಳ್ಳಿ ಗೊತ್ತಾಗುತ್ತದೆ. ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಇದುವರೆಗೆ ಕ್ಷೇತ್ರಕ್ಕೆ ಬಂದಿಲ್ಲ. ಆದರೆ, ನೀವು ಮಾತ್ರ ಡಾ.ಎಚ್.ಸಿ.ಮಹದೇವಪ್ಪ ಅವರ ವಿರುದ್ಧ ಮಾತನಾಡುತ್ತೀರಿ. ರಸ್ತೆ ರಾಜ ಎಂದು ಕರೆಯುತ್ತೀರಿ. ನೀವು ಬರೀ ಸುಳ್ಳು ಹೇಳುತ್ತೀರಿ” ಎಂದು ಜನ ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಗ್ರಾಮದ ಬಿಜೆಪಿ ಬೆಂಬಲಿಗರು ಹಾಗೂ ಸಿದ್ದರಾಮಯ್ಯ ಬೆಂಬಲಿಗರ ಮಧ್ಯೆ ವಾಗ್ವಾದ ನಡೆಯಿತು. ಜನ ಕೇಳಿದ ಪ್ರಶ್ನೆಗೆ ಪ್ರತಾಪ್ ಸಿಂಹ ಉತ್ತರಿಸಲೂ ಆಗದಷ್ಟು ಗಲಾಟೆ ನಡೆಯಿತು.
ಸಂಸದ ಮಾಡಿದ ಟ್ವೀಟ್
ಪ್ರತಾಪ್ ಸಿಂಹ ತಿರುಗೇಟು
ಪ್ರತಾಪ್ ಸಿಂಹ ಅವರಿಗೆ ಜನ ಪ್ರಶ್ನೆ ಕೇಳಿದ ವಿಡಿಯೊ ವೈರಲ್ ಆಗುತ್ತಲೇ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. “ಅಯ್ಯೋ ಸಿದ್ದರಾಮಯ್ಯನವರೇ, ಕಾಂಗಿಗಳೇ, ನಾನು ಕೊಟ್ಟ ಉತ್ತರ ಮತ್ತು ಬೆಪ್ಪಾದ ಅವರ ಮುಖಗಳ ವಿಡಿಯೊವನ್ನೂ ಹಾಕಿ, ಜನ ತೀರ್ಮಾನಿಸಲಿ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Karnataka Election: ಮನೆಗೆ ಬಂದ ಪ್ರತಾಪ್ ಸಿಂಹ, ಅಭ್ಯರ್ಥಿ ಶ್ರೀವತ್ಸ ಭೇಟಿಗೆ ಶಾಸಕ ರಾಮದಾಸ್ ನಕಾರ