Site icon Vistara News

Toll hike: ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ಏರಿಕೆಗೆ ಜನಾಕ್ರೋಶ; ಪ್ರತಾಪ್‌ ಸಿಂಹ ಸಮರ್ಥನೆ

MP Pratap Simha

#image_title

ಮೈಸೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್‌ ದರ ಹೆಚ್ಚಳ ಮಾಡಿರುವುದಕ್ಕೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ ಟೋಲ್‌ ದರ (Toll hike) ಹೆಚ್ಚಳ ಸಮರ್ಥಿಸಿಕೊಂಡ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಕನ್ನಡಪರ ಸಂಘಟನೆಗಳು ಕಿಡಿಕಾರಿವೆ.

ಟೋಲ್‌ ಗೇಟ್‌ಗಳಲ್ಲಿ ಫಾಸ್ಟ್ಯಾಗ್ ಸಮಸ್ಯೆ ಹಾಗೂ ಸುಂಕ ಏರಿಕೆ ಬಗ್ಗೆ ಮೈಸೂರಿನಲ್ಲಿ ಸಂಸದ ಪ್ರತಾಪ್‌ ಸಿಂಹ ಪ್ರತಿಕ್ರಿಯಿಸಿ, ಟೋಲ್‌ಗಳಲ್ಲಿ ಯಾವುದೇ ಫಾಸ್ಟ್ಯಾಗ್ ಸಮಸ್ಯೆ ಇಲ್ಲ, ಎಲ್ಲವೂ ಸರಿಯಾಗಿಯೇ ಇವೆ. ಟೋಲ್ ಸಂಗ್ರಹದ ಆರಂಭದಲ್ಲಿ ಸಮಸ್ಯೆ ಇತ್ತು. ಈಗ ಯಾವುದೇ ಸಮಸ್ಯೆ ಇಲ್ಲ ತಿಳಿಸಿದ್ದರು. ಇದೇ ವೇಳೆ ಫಾಸ್ಟ್ಯಾಗ್‌ ಇಲ್ಲದಿದ್ದಲ್ಲಿ ಡಬಲ್ ಚಾರ್ಜ್ ಕಟ್ಟುವುದು ಕಡ್ಡಾಯ. ಇಡೀ ದೇಶದಲ್ಲಿ ಹೊಸ ಆರ್ಥಿಕ ವರ್ಷ ಶುರುವಾದಾಗ ಟೋಲ್ ಹೆಚ್ಚಳ ಸಹಜ, ಈ ಹೈವೇನಲ್ಲಿ ಏಪ್ರಿಲ್‌ನಲ್ಲಿ ಟೋಲ್ ಹೆಚ್ಚಳ ಆಗಬೇಕಿತ್ತು. ಆಗ ಆಗಿರಲಿಲ್ಲ. ಅದಕ್ಕಾಗಿ ಈಗ ಶೇ. 22 ಟೋಲ್‌ ದರ ಏರಿಕೆ ಆಗಿದೆ ಎಂದು ತಿಳಿಸಿದ್ದಾರೆ.

ಇಂತಹ ಸಂಸದನನ್ನು ಆಯ್ಕೆ ಮಾಡಿದ್ದೇ ತಪ್ಪು

ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಟೋಲ್ ದರ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ವಿರುದ್ಧ ಕನ್ನಡಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಕಣಮಿಣಕಿ ಟೋಲ್‌ ಬಳಿ ಪ್ರತಿಭಟನೆ ಮಾಡಿದ ಕನ್ನಡಪರ ಸಂಘಟನೆ ಕಾರ್ಯಕರ್ತರು, ಬೆಲೆ ಏರಿಕೆಯಿಂದ ಜನ ಬೇಸತ್ತಿದ್ದಾರೆ. ಈ ಸಮಯದಲ್ಲಿ ಟೋಲ್ ದರ ಹೆಚ್ಚು ಮಾಡಬಾರದು. ಒಂದು ವಾರದಲ್ಲಿ ಟೋಲ್ ದರ ಪರಿಷ್ಕರಣೆ ಮಾಡಿ ಇಳಿಕೆ ಮಾಡದಿದ್ದರೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ನೀಡಿದರು.

ಇನ್ನು ಟೋಲ್‌ ದರ ಹೆಚ್ಚಳಕ್ಕೆ ಸಂಸದ ಪ್ರತಾಪ್ ಸಿಂಹ ಸಮರ್ಥನೆ ಮಾಡಿಕೊಂಡ ವಿಚಾರಕ್ಕೆ ಪ್ರತಿಭಟನಾಕಾರರು ಪ್ರತಿಕ್ರಿಯಿಸಿ, ಇಂತಹ ಒಬ್ಬ ಸಂಸದನನ್ನು ಮೈಸೂರು ಜನ ಆಯ್ಕೆ ಮಾಡಿದ್ದೆ ತಪ್ಪು. ಕನ್ನಡಿಗರ ಪರ ನಿಲ್ಲಬೇಕಾದ ಸಂಸದ, ಕೇಂದ್ರ ಸರ್ಕಾರದ ಪರ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Bangalore Mysore Expressway: ದಶಪಥ ಹೆದ್ದಾರಿ ಸಂಚಾರ ದುಬಾರಿ, 12 ದಿನದ ಹಿಂದೆಯೇ ಜಾರಿ; ಗೊತ್ತಿಲ್ದೇ ಬರೆ ಇಟ್ರು!

ವಾಹನ ಸವಾರರ ಕಿಡಿ

ರಾಮನಗರ: ಟೋಲ್ ದರ ಹೆಚ್ಚಳ ವಿರೋಧಿಸಿ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯ ಕಣಮಿಣಕಿ ಟೋಲ್ ಬಳಿ ವಾಹನ ಸವಾರರು ಅಸಮಾಧಾನ ಹೊರಹಾಕಿದ್ದಾರೆ. ದುಬಾರಿ ಶುಲ್ಕ ಕಟ್ಟಿ ಟೋಲ್ ಸಿಬ್ಬಂದಿ ಜತೆ ವಾಗ್ವಾದ ನಡೆಸಿದ ಕೆಲವರು, ಭಾರತೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕಿಡಿಕಾರಿದರು. ಇನ್ನು ಟೋಲ್‌ನಲ್ಲಿ ಫಾಸ್ಟ್ಯಾಗ್‌ ಸಮಸ್ಯೆಯಾಗಿದ್ದರಿಂದ ಡಬಲ್‌ ಚಾರ್ಜ್‌ ವಸೂಲಿ ಮಾಡುತ್ತಿದ್ದಾರೆ ವಾಹನ ಸವಾರರು ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು.

ಪಾಸ್ಟ್ಯಾಗ್‌ ಅಕೌಂಟ್‌ನಲ್ಲಿ ಹಣವಿದ್ದರೂ ಸ್ಕ್ಯಾನ್ ಆಗುತ್ತಿಲ್ಲ. ಇದರಿಂದ 330 ರೂಪಾಯಿ ಕಟ್ಟಿ ಎಂದು ಸಿಬ್ಬಂದಿ ಹೇಳಿದ್ದಾರೆ. 20 ನಿಮಿಷ ಕಾದರೂ ಪ್ರಯೋಜನವಾಗಿಲ್ಲ. ಇಲ್ಲೇ ಚೇರ್ ಹಾಕಿ, ಊಟ ಕೊಡಲಿ ಕುಳಿತುಕೊಳ್ಳುತ್ತೇವೆ. ದಂಧೆ ಸಾರ್‌‌ ಇದು ದಂಧೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ.

ಶೇ.22ರಷ್ಟು ಟೋಲ್ ದರ ಏರಿಕೆ

ರಾಮನಗರ: ದಶಪಥ ಹೆದ್ದಾರಿಯಲ್ಲಿ ಸಂಚಾರ ಮತ್ತಷ್ಟು ದುಬಾರಿಯಾಗಿದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸದ್ದಿಲ್ಲದೇ ಶೇ.22ರಷ್ಟು ಟೋಲ್ ದರ ಹೆಚ್ಚಳ ಮಾಡಿದೆ. ಜೂನ್ 1ರಿಂದಲೇ ಅನ್ವಯವಾಗುವಂತೆ ಟೋಲ್‌ ದರ ಹೆಚ್ಚಳ ಮಾಡಲಾಗಿದೆ. ಫಾಸ್ಟ್ ಟ್ಯಾಗ್ ಇರುವ ಕಾರಣ ದರ ಏರಿಕೆ ವಾಹನ ಸವಾರರ ಗಮನಕ್ಕೆ ಬಂದಿರಲಿಲ್ಲ.

ಈ ಹಿಂದೆ ಏಪ್ರಿಲ್‌ 1 ರಂದೇ ದರ ಏರಿಕೆ ಮಾಡಡಲಾಗಿತ್ತು. ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎನ್‌ಚ್‌ಎಐ ದರ ಹೆಚ್ಚಳ ಆದೇಶ ವಾಪಸ್‌ ಪಡೆದಿತ್ತು. ಇದೀಗ ಮತ್ತೆ ಟೋಲ್ ದರ ಏರಿಕೆಯಾಗಿರುವುದು ಕಂಡುಬಂದಿದೆ.

3 ತಿಂಗಳಲ್ಲಿ ಎರಡುಬಾರಿ ಹೆಚ್ಚಳ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್ ಪ್ರಾರಂಭವಾದ 3 ತಿಂಗಳಲ್ಲಿ ಎರಡುಬಾರಿ ದರ ಏರಿಕೆ ಮಾಡಲಾಗಿದೆ. ಫಾಸ್ಟ್ಯಾಗ್‌ ಇರುವುದೇ ಹೆದ್ದಾರಿ ಪ್ರಾಧಿಕಾರದ ಸುಂಕ ವಸೂಲಿಗೆ ರಹದಾರಿಯಾಗಿದೆ. ವಾಹನ ಸವಾರರ ಗಮನಕ್ಕೆ ಬಾರದೇ ಫಾಸ್ಟ್ಯಾಗ್‌ನಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ದರ ಹೆಚ್ಚಳ ಮಾಡಿದ್ದ ಪ್ರಾಧಿಕಾರ, ಇದೀಗ ಮತ್ತೆ ಜೂನ್ ತಿಂಗಳಿನಿಂದ ಹೆಚ್ಚಳ ಮಾಡಿದೆ. ಹೀಗಾಗಿ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.

Exit mobile version