Site icon Vistara News

Nonbailable warrant : ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಬಂಧನಕ್ಕೆ ವಾರಂಟ್‌ ಜಾರಿ, ಎಸ್‌ಪಿಗೆ ಆರ್ಡರ್‌

MP Kumaraswamy

#image_title

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಸಿಗುತ್ತದೆಯೇ ಇಲ್ಲವೇ ಎಂಬ ಗೊಂದಲದಲ್ಲಿರುವ ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಇನ್ನೊಂದು ಆಘಾತ ಎದುರಾಗಿದೆ. ಜನಪ್ರತಿನಿಧಿಗಳ ನ್ಯಾಯಾಲಯವು ಅವರ ಬಂಧನಕ್ಕೆ ಜಾಮೀನುರಹಿತ ವಾರಂಟ್‌ (Nonbailable warrant) ಹೊರಡಿಸಿದೆ.

ಚೆಕ್‌ ಬೌನ್ಸ್‌ ಪ್ರಕರಣವೊಂದಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಎಂ.ಪಿ. ಕುಮಾರಸ್ವಾಮಿ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿತ್ತಾದರೂ ಕುಮಾರಸ್ವಾಮಿ ಅವರು ಅರ್ಜಿ ಸಲ್ಲಿಸಿರಲಿಲ್ಲ. ಇದೀಗ ಮಾರ್ಚ್‌ 28ರಂದು ಕೋರ್ಟ್‌ ಜಾಮೀನುರಹಿತ ವಾರಂಟ್‌ ಹೊರಡಿಸಿದೆ.

ಕುಮಾರಸ್ವಾಮಿ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಅದು ಚಿಕ್ಕಮಗಳೂರು ಎಸ್ಪಿಗೆ ಸೂಚನೆ ನೀಡಿದೆ.

ಏನಿದು ಚೆಕ್‌ ಬೌನ್ಸ್‌ ಪ್ರಕರಣ?

ಎಂ.ಪಿ. ಕುಮಾರಸ್ವಾಮಿ ಅವರು ಹೂವಪ್ಪ ಗೌಡ ಎಂಬವರಿಂದ ಸಾಲ ಪಡೆದಿದ್ದು ಅದರ ಮರುಪಾವತಿಗಾಗಿ ಕೊಟ್ಟಿರುವ ಎಂಟು ಚೆಕ್‌ಗಳು ಬೌನ್ಸ್‌ ಆಗಿದ್ದವು. ಹೂವಪ್ಪ ಗೌಡ ಅವರು ಇದರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಹೂವಪ್ಪ ಗೌಡರಿಂದ ಪಡೆದ ಸಾಲದಲ್ಲಿ ಒಟ್ಟು ಒಂದು ಕೋಟಿ 38 ಲಕ್ಷದ‌ 65 ಸಾವಿರ ಸಾಲ‌ ಬಾಕಿ ಇತ್ತು. ಇದಕ್ಕೆ ಪ್ರತಿಯಾಗಿ ಸಾಲದ ಕಂತುಗಳೆಂಬಂತೆ ಕುಮಾರಸ್ವಾಮಿ ಅವರು ಎಂಟು ಚೆಕ್‌ಗಳನ್ನು ನೀಡಿದ್ದರು. ಆದರೆ, ಅವೆಲ್ಲವೂ ಬೌನ್ಸ್‌ ಆಗಿದ್ದವು.

ಈ ಎಂಟು ಚೆಕ್ ಬೌನ್ಸ್ ಪ್ರಕರಣಗಳ ವಿಚಾರಣೆ ನಡೆಸಿದ ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ. ಜೆ. ಪ್ರೀತ್ ಅವರು ಆರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದರು. ಆಗ ಎಂ.ಪಿ. ಕುಮಾರಸ್ವಾಮಿ ಪರ ವಕೀಲರು ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿದ್ದರು. ಕೋರ್ಟ್‌ 10 ದಿನಗಳ ಕಾಲಾವಕಾಶವನ್ನೂ ನೀಡಿತ್ತು. ಆದರೆ, ಶಾಸಕರ ಪರವಾಗಿ ಮೇಲ್ಮನವಿ ಸಲ್ಲಿಕೆ ಆಗಲೇ ಇಲ್ಲ! ಹೀಗಾಗಿ ಬಂದಿಸಿ ಕೋರ್ಟ್‌ ಮುಂದೆ ಹಾಜರುಪಡಿಸುವಂತೆ ಎಸ್‌ಪಿಗೆ ಕೋರ್ಟ್‌ ಸೂಚಿಸಿತು.

ಇದನ್ನೂ ಓದಿ : BJP Karnataka: ಸಿ.ಟಿ. ರವಿ ವಿರುದ್ಧ ದೂರು ನೀಡಲು ರಾಜಧಾನಿಗೆ ಬಂದ ಎಂ.ಪಿ. ಕುಮಾರಸ್ವಾಮಿ

Exit mobile version